ಕೇರಳದ ಧಾರ್ಮಿಕ ವಿದ್ವಾಂಸ ಎಂ.ಎಂ.ಅಕ್ಬರ್ ಸೆರೆ

Update: 2018-02-25 12:32 GMT

ಕೊಚ್ಚಿ/ಹೊಸದಿಲ್ಲಿ,ಫೆ.25: ಕೇರಳದ ‘ಝಾಕಿರ್ ನಾಯ್ಕ್’ ಎಂದೇ ಖ್ಯಾತರಾಗಿರುವ ಇಸ್ಲಾಮಿಕ್ ವಿದ್ವಾಂಸ ಹಾಗೂ ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಆಡಳಿತ ನಿರ್ದೇಶಕ ಎಂ.ಎಂ.ಅಕ್ಬರ್ ಅವರನ್ನು ರವಿವಾರ ಹೈದರಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ ಆಗಮಿಸಿದ್ದ ಅಕ್ಬರ್ ಅವರು ಸೋಮವಾರ ದೋಹಾಕ್ಕೆ ಪ್ರಯಾಣಿಸಲಿದ್ದರು. ಆದರೆ ಅದಕ್ಕೂ ಮೊದಲು ಹೈದರಾಬಾದ್ ನಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಅವರನ್ನು ಕೇರಳಕ್ಕೆ ಕರೆದೊಯ್ಯಲು ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ಸುದ್ದಿಗಾರರಿಗೆ ತಿಳಿಸಿದರು.

ಧರ್ಮದ ಆಧಾರದಲ್ಲಿ ಸಮಾಜದ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಹರಡುತ್ತಿದ್ದ ಆರೋಪದಲ್ಲಿ ಕೊಚ್ಚಿ ಸಮೀಪದ ಅಕ್ಬರ್ ಅವರ ಶಾಲೆಯನ್ನು ಮುಚ್ಚಲು ಕೇರಳ ಸರಕಾರವು ನಿರ್ಧರಿಸಿದ ಬಳಿಕ ಕಳೆದ ಜನವರಿಯಲ್ಲಿ ಅವರು ಸುದ್ದಿಗೆ ಗ್ರಾಸವಾಗಿದ್ದರು.

ಅಕ್ಬರ್ ಆಡಳಿತ ನಿರ್ದೇಶಕರಾಗಿರುವ ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್ ಕೇರಳದ ವಿವಿಧ ಜಿಲ್ಲೆಗಳಲ್ಲಿ 13 ಶಾಖೆಗಳನ್ನು ಹೊಂದಿದೆ. ವರದಿಗಳು ಹೇಳಿರುವಂತೆ ಶಾಲೆಯ ಎರಡನೇ ತರಗತಿಯಲ್ಲಿ ಬೋಧಿಸಲಾಗುತ್ತಿದ್ದ ಪಠ್ಯಪುಸ್ತಕವೊಂದರ ಅಧ್ಯಾಯವನ್ನು ಪೋಷಕರು ಮತ್ತು ಇತರ ಕೆಲವರು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು, ನಂತರ ರಾಜ್ಯ ಸರಕಾರವು ತನಿಖೆಯನ್ನಾರಂಭಿಸಿತ್ತು.

ಶಾಲೆಯು ಎಸ್‌ಸಿಇಆರ್‌ಟಿ, ಎನ್‌ಸಿಇಆರ್‌ಟಿ ಅಥವಾ ಸಿಬಿಎಸ್‌ಇ ಪಠ್ಯಪುಸ್ತಕಗಳನ್ನು ಅನುಸರಿಸುತ್ತಿರಲಿಲ್ಲ. ಬದಲಿಗೆ ಪಠ್ಯಕ್ರಮದಿಂದ ಹೊರತಾಗಿದ್ದ, ಖಾಸಗಿ ಕಂಪನಿಗಳ ಪ್ರಕಾಶನದ ಪುಸ್ತಕಗಳನ್ನು ಬಳಸುತ್ತಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News