ಜಾಗತೀಕರಣದಿಂದ ಪ್ರಾದೇಶಿಕ ಭಾಷೆಗಳಿಗೆ ಪೆಟ್ಟು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-02-25 12:38 GMT

ಚಿಕ್ಕಮಗಳೂರು, ಫೆ.25: ವಶಹಾತುಶಾಹಿ ವ್ಯವಸ್ಥೆಯ ಕೊಡುಗೆಯಾದ ಇಂಗ್ಲಿಷ್ ಭಾಷೆಯೇ ಅನ್ನ ಕೊಡುವ ಭಾಷೆ ಎಂಬುದನ್ನು ಎಲ್ಲೆಡೆ ಬಿತ್ತಲಾಗುತ್ತಿದೆ. ಆದರೆ ಈ ಭಾಷೆಯ ಉಗಮಕ್ಕೂಸಾವಿರಾರು ವರ್ಷಗಳ ಮೊದಲೇ ಕನ್ನಡ ಭಾಷೆಯ ಉಗಮವಾಗಿತ್ತು. ಪ್ರಸಕ್ತ ವಶಹಾತುಶಾಹಿ ವ್ಯವಸ್ಥೆಯ ಮುಂದುವರಿದ ಭಾಗವಾಗಿರುವ ಜಾಗತೀಕರಣದಿಂದಾಗಿ ದೇಶದಲ್ಲಿ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಮೈಸೂರು ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನೆಲದ ಭಾಷೆ ನಾಡಿನ ಪರಂಪರೆಯ ಧಾತುದ್ರವ್ಯವಾಗಿದ್ದು, ಮಾತೃ ಭಾಷೆಯ ಶಿಕ್ಷಣದಿಂದ ವಂಚಿತವಾಗುವ ಮಕ್ಕಳಲ್ಲಿ ಸೃಜನಶೀಲತೆಯ ಗುಣ ಕಾಣಲು ಸಾಧ್ಯವಿಲ್ಲ. ಅಂತಹ ಮಕ್ಕಳು ಇತ್ತ ಕನ್ನಡವೂ ಬಾರದೇ ಅತ್ತ ಆಂಗ್ಲ ಭಾಷೆಯೂ ಬಾರದೇ ಅತಂತ್ರ ಸ್ಥಿತಿಯಲ್ಲಿರುತ್ತಾರೆ. ಇದು ಜಾಗತೀಕರಣದ ಪ್ರಭಾವವಾಗಿದ್ದು, ಪ್ರಸಕ್ತ ದೇಶದ ಪ್ರಾದೇಶಿಕ ಭಾಷೆಗಳು, ಪ್ರದೇಶಿಕ ಸಂಸ್ಕೃತಿಗಳು ಜಾಗತೀಕರಣದ ಸವಾಲುಗಳಿಂದಾಗಿ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದರು.

ರಾಜ್ಯದ ಶಿಕ್ಷಣ ಕ್ಷೇತ್ರದ ಬದಲಾವಣೆಯಲ್ಲಿ ಕನ್ನಡ ಮಾಧ್ಯಮ ಪ್ರಶಸ್ತಿ ವಿತರಣೆ ಯೋಜನೆಯು ಪ್ರಮುಖ ಪಾತ್ರವಹಿಸಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕೀಳರಿಮೆ ಹೋಗಲಾಡಿಸಿ, ಸ್ವಾಭಿಮಾನ ಬೆಳೆಸುವ ಮಹತ್ವದ ಉದ್ದೇಶ ಈ ಯೋಜನೆಯದ್ದಾಗಿದ್ದು, ಗಣಿತ ವಿಷಯದಲ್ಲಿ ಮಾತ್ರ 125 ಅಂಕಗಳಿಗೆ 125 ಅಂಕ ಪಡೆಯಲು ಸಾಧ್ಯ ಎಂಬ ಕಾಲಘಟ್ಟದಲ್ಲಿ ಕನ್ನಡ ಭಾಷೆ ವಿಷಯದಲ್ಲೂ 125 ಅಂಕ ಪಡೆಯುವಷ್ಟರಮಟ್ಟಿಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಭಾಷೆ ಸಂಸ್ಕೃತಿಯ ಕೀಲಿಕೈ. ಮಾತೃಭಾಷೆ ಇಲ್ಲವಾದಲ್ಲಿ ಸಂಸ್ಕೃತಿಯೇ ಇರುವುದಿಲ್ಲ. ವ್ಯವಹರಕ್ಕಾಗಿ ಜಗತ್ತಿನ ಎಲ್ಲ ಭಾಷೆಯನ್ನೂ ಕಲಿಯೋಣ, ಅದರೆ ನಮ್ಮತನ, ನಮ್ಮ ಭಾಷೆಯನ್ನು ಪ್ರೀತಿಸೋಣ ಎಂದ ಅವರು, ಇಂಗ್ಲಿಷ್ ಕಲಿತರೆ ಎಲ್ಲವನ್ನೂ ಧಕ್ಕಿಸಿಕೊಳ್ಳಬಹುದೆಂಬ ತಪ್ಪುಕಲ್ಪನೆಯಿಂದಾಗಿ ಪ್ರಸಕ್ತ ಕನ್ನಡವನ್ನು ಉಳಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಭಾಷೆಗಳ ಉಳಿವಿಗೆ ಸೂಕ್ತ ಶಾಸನ ಜಾರಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಭಾಷೆ ಕಲಿಯಲು ಜಾತಿ, ಮತದ ಅಗತ್ಯವಿಲ್ಲ. ನೆಲದ ಭಾಷೆಯೇ ಜನರ ಭಾಷೆಯಾಗಿದೆ. ಜನರ ಭಾಷೆ ಆಡಳಿತ ಭಾಷೆಯಾಗಬೇಕು. ಆದರೆ ಆಂಗ್ಲಭಾಷೆ ಆಡಳಿತ ಭಾಷೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಸಮಾರಂಭದಲ್ಲಿ ಮೈಸೂರು ವಿಭಾಗ ಮಟ್ಟದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಮಡಿಕೇರಿ ಜಿಲ್ಲೆಗಳ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ 2043 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸೆಸೆಲ್ಸಿಯಲ್ಲಿ 125 ಅಂಕಗಳಿಗೆ ಅ25 ಅಂಕ ಪಡೆದು ಸಾಧನೆ ಮಾಡಿದ ದ.ಕ.ಜಿಲ್ಲೆ ಪುತ್ತೂರು ತಾಲೂಕಿನ ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಪೂರ್ಣನಂದರಿಗೆ ವಿಶೇಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಜಿಲ್ಲಾಧಿಕಾರಿ ಎಂ.ಕೆ.ರಂಗಯ್ಯ, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಸಿ.ಕೆ.ಸುಬ್ಬರಾಯ, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿ ಭಾಷೆಯ ಅಕ್ರಮಣ: 
ಬ್ಯಾಂಕಿಂಗ್, ರೈಲ್ವೆ ಕ್ಷೇತ್ರಗಳ ಉದ್ಯೋಗ ನೇಮಕಾತಿ ಪ್ರಕ್ರಿಯೆ ವೇಳೆ ರಾಜ್ಯದಲ್ಲಿ ಹಿಂದಿ ಇಲ್ಲವೇ ಇಂಗ್ಲಿಷ್‍ನಲ್ಲಿ ಪರೀಕ್ಷೆ ನಡೆಸುವ ಮೂಲಕ ಕನ್ನಡಿಗರ ಮೇಲೆ ಹಿಂದಿ ಭಾಷೆಯ ಅಕ್ರಮಣ ನಡೆಯುತ್ತಿದೆ. ಇತ್ತೀಚೆಗೆ ನಡೆದ ಕೆಪಿಟಿಸಿಎಲ್ ನೇಮಕಾತಿ ವೇಳೆ ಪರ ರಾಜ್ಯಗಳ ಹಿರಿಯ ಅಧಿಕಾರಿಗಳು ತಮಗೆ ಬೇಕಾದಂತೆ ನೇಮಕಾತಿ ನಿಯಮಾವಳಿಗಳನ್ನು ತಿದ್ದಿ ತಮ್ಮ ರಾಜ್ಯಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಿದ್ದಾರೆ. ಇದರಿಂದಾಗಿ ನಮ್ಮ ರಾಜ್ಯದವರಿಗೆ ಅನ್ಯಾಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಮತ್ತು ನೌಕರಶಾಹಿ ವ್ಯವಸ್ಥೆ ಕನ್ನಡಪರ ಇಚ್ಛಾಶಕ್ತಿ ತೋರಬೇಕಾದ ತುರ್ತು ಅಗತ್ಯ ಎದುರಾಗಿದೆ.
-ಪ್ರೊ.ಜಿ.ಎಸ್.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಕನ್ನಡದಲ್ಲಿ 125 ಅಂಕ ಪಡೆಯುತ್ತೇನೆಂದು ಭಾವಸಿರಲಿಲ್ಲ. ಕನ್ನಡ ನನ್ನ ಮೆಚ್ಚಿನ ವಿಷಯ. ಕನ್ನಡ ಭಾಷೆಯ ಮೇಲೆ ಪ್ರೀತಿ, ಅಭಿಮಾನ ಇತ್ತು. ಕನ್ನಡದಲ್ಲಿ ಓದಿದ್ದು, ಕಲಿತದ್ದು ಹೆಚ್ಚು ಅರ್ಥವಾಗುತ್ತಿತ್ತು. ಆದ್ದರಿಂದ ಹೆಚ್ಚು ಆಸಕ್ತಿಯಿಂದ ಓದಲು ಸಾಧ್ಯವಾಯಿತು. ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ 125 ಅಂಕ ಗಳಿಸಲು ಸಾಧ್ಯವಾಗಿದೆ. 
- ಪೂರ್ಣಾನಂದ, ಪುತ್ತೂರು ಕಡಬದ ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ವಿದ್ಯಾರ್ಥಿ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News