ಭಗವಾನ್ ಬಾಹುಬಲಿ ವಿಶ್ವದ ಶಾಂತಿ ಮತ್ತು ತ್ಯಾಗದ ಸಂಕೇತ: ರಾಜನಾಥ್ ಸಿಂಗ್

Update: 2018-02-25 14:33 GMT

ಶ್ರವಣಬೆಳಗೊಳ,ಫೆ.25: ಶ್ರೀ ಭಗವಾನ್ ಬಾಹುಬಲಿ ವಿಶ್ವಕ್ಕೆ ಶಾಂತಿ ಮತ್ತು ತ್ಯಾಗದ ಸಂಕೇತ. ಮನುಕುಲಕ್ಕೆ ತನ್ನ ಇಡೀ ಜೀವನ ಸಮರ್ಪಣೆ ಮಾಡಿದ ತ್ಯಾಗಮೂರ್ತಿಯ ನೆಲದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಆಗಮಿಸಿರುವುದು ಸಂತೋಷದ ವಿಷಯ ಎಂದು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ತಿಳಿಸಿದರು.

ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಠದ ಬಳಿ ಇರುವ ಚಾಮುಂಡರಾಯ ಸಭಾಮಂಟಪದಲ್ಲಿ ಬಾಹುಬಲಿ ಸ್ವಾಮಿಗೆ ರಜತ ಸ್ಥಂಬಗಳ ಸಮರ್ಪಣೆ ಮಾಡಿ ಮಾತನಾಡಿ, ಅಹಿಂಸೆಯನ್ನು ಪ್ರತಿಪಾದಿಸುವ ಜೈನಧರ್ಮ ಜಗತ್ತಿನ ಸರ್ವಶೇಷ್ಠ ಧರ್ಮಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಜೈನಧರ್ಮವು ವೈಜ್ಞಾನಿಕ ತಳಹದಿಯ ಮೇಲೆ ವಿಕಾಸ ಹೊಂದಿದ್ದು, 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೂ ವೈಜ್ಞಾನಿಕ ಹಿನ್ನೆಲೆ ಇದೆ. ವಿಶ್ವ ಪ್ರಸಿದ್ದ ಗೊಮ್ಮಟೇಶ್ವರ ಮೂರ್ತಿಯ ದರ್ಶನ ಮಾಡುವ ಬಯಕೆಯಿದೆ ಎಂಬುದಾಗಿ ತಿಳಿಸಿದ ಅವರು, ಅತೀ ಶೀಘ್ರದಲ್ಲೇ ಶ್ರವಣಬೆಳಗೊಳಕ್ಕೆ ಬಂದು ಬಾಹುಬಲಿಯ ಏಕಾಶಿಲಾ ಶಿಲ್ಪವನ್ನು ಕಣ್ತುಂಬಿಕೊಳ್ಳುವುದಾಗಿ ಹೇಳಿದರು.

ಭಗವಾನ್ ಬಾಹುಬಲಿಯ ಸಂದೇಶಗಳು ಸಾರ್ವಕಾಲಿಕವಾಗಿ ಅನುಕರಣೀಯ. ನೂರಾರು ಮುನಿಗಳು ಜೈನಧರ್ಮವನ್ನು ಕಟ್ಟಿ ಬೆಳೆಸಿದ್ದಾರೆ ಹಾಗೂ ಚಂದ್ರಗುಪ್ತ ಮೌರ್ಯರಂತಹ ಮಹಾರಾಜ ಕೂಡ ಶ್ರವಣಬೆಳಗೊಳದಲ್ಲಿ ತಪಸ್ಸು ಮಾಡಿ ಅಂತಿಮ ದಿನಗಳನ್ನು ಕಳೆದಿದ್ದು, ಈ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.

ಆಶೀರ್ವಚನ ನೀಡಿ ಮಾತನಾಡಿದ ಆಚಾರ್ಯ ಮುನಿಶ್ರೀ 108 ವರ್ಧಮಾನ ಸಾಗರ ಮಹಾರಾಜರು, ಜೈನ ಧರ್ಮವು ಸತ್ಯ, ಅಹಿಂಸೆ ಮತ್ತು ತ್ಯಾಗದ ಪ್ರತೀಕವಾಗಿದ್ದು, ಎಂದು ಅವುಗಳ ಮಹತ್ವದ ಬಗ್ಗೆ ವಿವರಿಸಿದರು.

ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಮಾತನಾಡಿ, ರಾಜ್ಯ  ಸರ್ಕಾರ ಮಹಾಮಸ್ತಕಾಬಿಷೇಕ ಮಹೋತ್ಸವದ ಯಶಸ್ವಿಗೆ ಆರ್ಥಿಕವಾಗಿ ನೆರವು ನೀಡಿ ಸಂಘಟನೆಯ ನೆರವು ನೀಡಿದೆ. ಅದೇ ರೀತಿ ಕೇಂದ್ರ ಸರ್ಕಾರ ರೈಲು ಸಂಚಾರ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ  ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಲು ಸಹಕರಿಸಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ರಸಗೊಬ್ಬರ ಖಾತೆ ಸಚಿವರಾದ ಅನಂತ್‍ಕುಮಾರ್, ಲೋಕಸಭಾ ಸದಸ್ಯರಾದ ಅಜಯ್ ಸಂಚೇಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ ಜೈನ್ ಸ್ವಾಗತಿಸಿದರು. ಸತೀಶ್‍ಚಂದ ಜೈನ್ ವಂದಿಸಿದರು.

2018 ರ ಮಹಾಮಸ್ತಕಾಭಿಷೇಕಕ್ಕೆ ತೆರೆ
ಭಗವಾನ್ ಬಾಹುಬಲಿ ಸ್ವಾಮಿಯ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವವು ಫೆಬ್ರವರಿ 17 ರಂದು ಪ್ರಾರಂಭಗೊಂಡು ಅತ್ಯಂತ ಸೂಸುತ್ರವಾಗಿ ಜರುಗಿದ್ದು, ಅಂತಿಮ ದಿನವಾದ ಇಂದು ವಿವಿಧ ಗಣ್ಯತಿಗಣ್ಯರನ್ನು ಒಳಗೊಂಡಂತೆ ಶ್ರೀ ಕ್ಷೇತ್ರಕ್ಕೆ ಜನಸಾಗರವೇ ಹರಿದುಬಂದಿತ್ತು. 2018 ರ ಮಹಾಮಸ್ತಕಾಭಿಷೇಕ್ಕೆ ಇಂದು ಅಧಿಕೃತವಾಗಿ ತೆರೆ ಕಂಡಿತು.ಇಂದು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಜೈನಕಾಶಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ಆಗಮಿಸಿ ನಿರೀಕ್ಷೆಗೂ ಮೀರಿದಂತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನೆರವೇರಿತು.

ವಿಂಧ್ಯಗಿರಿ ಹಾಗೂ ಚಂದ್ರಗಿರಿ ನಡುವೆ ಕಂಗೊಳಿಸುವ ಕಲ್ಯಾಣಿಯ ಪಕ್ಕದಲ್ಲಿನ ರಸ್ತೆಯುದ್ದಕ್ಕೂ ನಿರ್ಮಿಸಿರುವ ಜಾಲರಿಯೊಳಗೆ ಭಕ್ತರು ಕಿಕ್ಕಿರಿದು ನಿಂತಿದ್ದಲ್ಲದೇ ಹಿಂದಿನ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಮಹಾ ಸ್ವಾಮಿಗೆ ಭಕ್ತಿ ನಮನ ಸಲ್ಲಿಸಿದರು. ಮುಖ್ಯ ದ್ವಾರದ ಮುಂಭಾಗ ಹಾಗೂ ಬೆಟ್ಟದ ಪಶ್ಚಿಮದ ಮೆಟ್ಟಿಲಿನ ಬಳಿಯೂ ಸಾಲುಗಟ್ಟಿ ನಿಂತಿದ್ದ ಜನರು ಸುಡು ಬಿಸಿಲಿನ ನಡುವೆಯು ಬೆಟ್ಟ ಹತ್ತಿ ಕೊನೆಯ ಮಜ್ಜನ ನೋಡುವ ತವಕದಲ್ಲಿದ್ದರು.

ಶ್ರವಣಬೆಳಗೊಳದ ಹೊರ ವಲಯದಲ್ಲಿ ಒಟ್ಟು 5 ಕಡೇ ನಿರ್ಮಿಸಿರುವ ತಾತ್ಕಾಲಿಕ ಬಸ್ ನಿಲ್ದಾಣದಿಂದ ಸಾಗುತಿದ್ದ ಉಚಿತ ನಗರ ಸಾರಿಗೆ ಬಸ್ಸುಗಳಲ್ಲಿ ಆಗಮಿಸುವುದರ ಜೊತೆಗೆ ನಗರಸಾರಿಗೆ ಬಸ್ಸುಗಳು ತುಂಬಿದ್ದ ಪರಿಣಾಮ ಭಕ್ತಧಿಗಳು ಬಾಹುಬಲಿಯ ದರ್ಶನ ಪಡೆಯಲು ಕಾಲ್ನಡಿಗೆಯ ಮೂಲಕ  ಕ್ಷೇತ್ರಕ್ಕೆ ಸಾಗುತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.

ಸದ್ಯ ಬಾಹು ಬಲಿಗೆ ನಡೆಯುತ್ತಿರುವ ಮಹಾಮಜ್ಜನ ಇಂದು ತೆರೆಕಂಡಿದ್ದು, ಮತ್ತೆ ಈ ಆನಂದದ ಸಮಯಕ್ಕಾಗಿ ಮುಂದಿನ ಹನ್ನೆರಡು ವರ್ಷಗಳವರೆಗೆ  ಕಾಯಬೇಕಾಗಿರುವುದರಿಂದ ಈಗಲೇ ಆ ಶುಭ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿ ಸಾಗುತ್ತಿದ್ದರು. ಒಟ್ಟಾರೆ 9 ನೇ ದಿನವಾದ ಭಾನುವಾರ ನೂಕುನುಗ್ಗಲಿನಲ್ಲಿಯೇ ಬೆಟ್ಟ ಹತ್ತಿದ ಭಕ್ತರು ಬಾಹುಬಲಿಯ ದರ್ಶನ ಪಡೆದು ಮಜ್ಜನ ಕಣ್ತುಂಬಿಕೊಂಡು ಧನ್ಯತಾ ಭಾವನೆ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News