ನಿಝಾಮರ ಆಡಳಿತ ನೆನಪಿಸುವ ರಾಜ್ಯ ಸರಕಾರ: ಅಮಿತ್ ಶಾ ವಾಗ್ದಾಳಿ

Update: 2018-02-25 13:44 GMT

ಬೆಂಗಳೂರು/ಯಾದಗಿರಿ, ಫೆ. 25: ಸ್ವಾತಂತ್ರ್ಯ ಪೂರ್ವದಲ್ಲಿ ಹೈ.ಕ.ಭಾಗದಲ್ಲಿ ನಿಝಾಮರ ನಿರಂಕುಶ ಆಡಳಿತವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ನೆನಪಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಇಲ್ಲಿನ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರಕಾರ 1.30 ಲಕ್ಷ ಕೋಟಿ ರೂ.ಅನುದಾನ ನೀಡಿದೆ. ಆದರೆ, ಕಾಂಗ್ರೆಸ್ ಸರಕಾರ ಅದನ್ನು ಲೂಟಿ ಮಾಡಿದೆ ಎಂದು ದೂರಿದರು.

ನಾಲ್ಕು ವರ್ಷದಲ್ಲಿ ಕೇಂದ್ರ ಸರಕಾರ 79 ಸಾವಿರ ಕೋಟಿ ರೂ. ಅನುದಾನವನ್ನು ವಿವಿಧ ಯೋಜನೆಗಳಡಿ ಬಿಡುಗಡೆ ಮಾಡಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅದು ಬಿಟ್ಟು ಕೇಂದ್ರದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆಸ್ಥೆ ವಹಿಸಬೇಕೆಂದು ಸಲಹೆ ನೀಡಿದರು.

ಬಿಎಸ್‌ವೈ ಸಿಎಂ: ಹೈ.ಕ.ಭಾಗದಿಂದಲೇ ಹೆಚ್ಚಿನ ಸ್ಥಾನ ಗೆದ್ದು ಬಿ.ಎಸ್. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಂಬ ವಿಶ್ವಾಸವಿದೆ ಎಂದ ಅವರು, ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನಿರ್ನಾಮ ಮಾಡಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು.

ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ತಾಕತ್ತು ಇಲ್ಲದಿದ್ದರೆ ಅಧಿಕಾರ ಬಿಟ್ಟು ಹೊರನಡೆಯಿರಿ ಎಂದು ಅಮಿತ್ ಶಾ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News