ಬಾಹುಬಲಿಗೆ ತುಪ್ಪ, ಹಾಲು ಸುರಿದದ್ದು ವ್ಯರ್ಥ: ಲಲಿತಾ ನಾಯಕ್

Update: 2018-02-25 14:47 GMT

ಬೆಂಗಳೂರು, ಫೆ.25: ಶ್ರವಣಬೆಳಗೊಳದಲ್ಲಿ ಬಾಹುಬಲಿಗೆ ನಡೆದ ಮಹಾ ಮಸ್ತಕಾಭಿಷೇಕಕ್ಕೆ ಸಾವಿರಾರು ಲೀಟರ್ ತುಪ್ಪ, ಹಾಲು, ನೀರನ್ನು ಸುರಿದು ವ್ಯರ್ಥ ಮಾಡಲಾಗಿದೆ ಎಂದು ಮಾಜಿ ಸಚಿವೆ ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಕರ್ನಾಟಕ ಲೇಖಕಿಯರ ಸಂಘ ನಗರದ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಕಷ್ಟು ಮಕ್ಕಳು ಪೌಷ್ಠಿಕ ಆಹಾರವಿಲ್ಲದೆ ನರಳುತ್ತಿದ್ದಾರೆ. ಅಂತವರಿಗೆ ನೀಡಬೇಕಾದ ಆಹಾರವನ್ನು ಸರ್ವವನ್ನು ತ್ಯಾಗ ಮಾಡಿದ ಬಾಹುಬಲಿಗೆ ಸುರಿದು ವ್ಯರ್ಥ ಮಾಡಬಾರದಾಗಿತ್ತು ಎಂದರು.

ನಮ್ಮ ಕಾಲದಲ್ಲಿ ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈಗ ಸೂಟ್‌ಕೇಸ್ ನೀಡಿದವರನ್ನು ಆಯ್ಕೆ ಮಾಡಲಾಗುತ್ತಿದೆ. ಆ ಮೂಲಕ ಪರಿಷತ್‌ನ ಘನತೆಗೆ ಧಕ್ಕೆ ತರಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ನಮ್ಮದು ಅಲೆಮಾರಿ ಜನಾಂಗ: ನಮ್ಮದು ಅಲೆಮಾರಿ ತಾಂಡಾ. ನಮ್ಮ ಮಹಿಳೆಯರು ಜಗಮಗಿಸುವ ಬಟ್ಟೆಗಳನ್ನು ಧರಿಸುತ್ತಾರೆ. ಕಾಡಿನಲ್ಲಿ ಹೆಚ್ಚಾಗಿ ಸುತ್ತಾಡುವುದರಿಂದ ಮೃಗಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಆಯುಧಗಳನ್ನೆ ಒಡವೆಗಳಾಗಿ ಧರಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಈ ಸಂಪ್ರದಾಯ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.

ನನ್ನ ಜನಾಂಗ ಧರಿಸುತ್ತಿದ್ದ ಬಟ್ಟೆ ಮತ್ತು ಒಡವೆ ಹಾಕಿಕೊಳ್ಳಬೇಕೆಂದು ಆಸೆಪಟ್ಟಿದ್ದೆ. ಆದರೆ, ನನ್ನ ತಂದೆ ‘ನೀನು ಓದಿ, ವಿದ್ಯಾವಂತಳಾಗು’ ಎನ್ನುತ್ತಿದ್ದರು. ಆದರೂ ಸಹ ನಾನು ಹಠ ಮಾಡಿ ಹಾಕಿಕೊಳ್ಳುತ್ತಿದ್ದೆ. ವಿಧಾನಪರಿಷತ್‌ಗೂ ಈ ರೀತಿಯ ಡ್ರೆಸ್‌ ಅನ್ನು ಹಾಕಿಕೊಂಡು ಹೋಗುತ್ತಿದ್ದೆ ಎಂದು ಅವರು ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News