ಯಡಿಯೂರಪ್ಪ- ಈಶ್ವರಪ್ಪ ನಡುವೆ ಮುಂದುವರಿದ ಭಿನ್ನಮತ

Update: 2018-02-25 16:46 GMT

ಶಿವಮೊಗ್ಗ, ಫೆ.25: ಇತ್ತೀಚೆಗಷ್ಟೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೂ ಈಶ್ವರಪ್ಪ ಗೈರು ಹಾಜರಾಗಿದ್ದರು. ಯಡಿಯೂರಪ್ಪ ಮೇಲಿನ ಅಸಮಾಧಾನದ ಕಾರಣದಿಂದಲೇ ಈಶ್ವರಪ್ಪ ಪ್ರಧಾನಿ ಭಾಗವಹಿಸಿದ್ದ ಸಭೆಯಿಂದ ದೂರ ಉಳಿದಿದ್ದರು ಎಂಬ ಮಾತು ಕೇಳಿ ಬಂದಿತ್ತು. ಈ ಮೂಲಕ ವರಿಷ್ಠರಿಗೂ ಸಂದೇಶ ರವಾನಿಸುವ ಕೆಲಸ ಮಾಡಿದ್ದರು.

ಇದರ ಬೆನ್ನಲ್ಲೇ, ರವಿವಾರ ತವರೂರು ಶಿವಮೊಗ್ಗ ನಗರದಲ್ಲಿ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಹಾಗೂ ಹೊರವಲಯ ಸಂತೆಕಡೂರು ಗ್ರಾಮದಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ ಭಾಗವಹಿಸಿದ್ದರು. ಇದನ್ನು ಮನಗಂಡ ಈಶ್ವರಪ್ಪ ಈ ಕಾರ್ಯಕ್ರಮಕ್ಕೂ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಸೆಡ್ಡು ಹೊಡೆಯಲು ಮುಂದಾಗಿದ್ದು, ಎರಡೂ ಬಣಗಳ ಮುಖಂಡರು ಸಭೆ ಸಮಾರಂಭಗಳಲ್ಲಿ ತಮ್ಮ ಬಣದ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದು, ಎಲ್ಲೆಂದರಲ್ಲಿ ಬಹಿರಂಗವಾಗಿಯೇ ಸವಾಲುಗಳನ್ನು ಹಾಕುತ್ತಿದ್ದಾರೆ. ಅಲ್ಲದೆ, ಪಕ್ಷದ ವರಿಷ್ಠರಿಗೆ ಎಚ್ಚರಿಕೆಗಳನ್ನೂ ನೀಡುತ್ತಿದ್ದಾರೆ.

ಸಮಾವೇಶ ಆಯೋಜನೆಗೆ ಗ್ರೀನ್ ಸಿಗ್ನಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ವಿವಿಧೆಡೆ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲು ಈಶ್ವರಪ್ಪ ಅವರಿಗೆ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ.

ಭಾರೀ ದೊಡ್ಡ ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆ ಮಾಡುವ ಮೂಲಕ, ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವಂತೆ ವರಿಷ್ಠರು ಈಶ್ವರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ವರಿಷ್ಠರ ಈ ಸೂಚನೆಯಿಂದ ಪಕ್ಷದಲ್ಲಿ ಈಶ್ವರಪ್ಪಗೆ ಮತ್ತಷ್ಟು ಬಲ ಬಂದಂತಾಗಿದ್ದು, ಅವರ ಪ್ರಭಾವ ಕೂಡ ಹೆಚ್ಚುವಂತೆ ಮಾಡಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿದೆ.

ಕಳೆದ ವರ್ಷ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೇತೃತ್ವದಲ್ಲಿ ಅವರು ರಾಜ್ಯದ ವಿವಿಧೆಡೆ ಹಿಂದುಳಿದ-ದಲಿತ ಸಮುದಾಯದ ಸಮಾವೇಶ ಆಯೋಜಿಸಿದ್ದರು. ವರಿಷ್ಠರ ಸೂಚನೆಯ ನಂತರ ಬ್ರಿಗೇಡ್ ಚಟುವಟಿಕೆಯಿಂದ ಈಶ್ವರಪ್ಪ ಹೊರಬಂದಿದ್ದರು. ಇದೀಗ ವರಿಷ್ಠರೇ ಅವರಿಗೆ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆಗೆ ಸೂಚನೆ ನೀಡಿದ್ದಾರೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಲಾಗುವುದು. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂಬ ಸಂದೇಶವನ್ನು ಪಕ್ಷದ ರಾಷ್ಟ್ರೀಯ ವರಿಷ್ಠರು ಈಶ್ವರಪ್ಪ ಅವರಿಗೆ ರವಾನಿಸಿದ್ದಾರೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬಂದಿದೆ. ಇತ್ತೀಚೆಗೆ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಮಾಹಿತಿ ಪಡೆದ ವರಿಷ್ಠರು, ದೂರವಾಣಿಯಲ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿವಮೊಗ್ಗದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ಈಶ್ವರಪ್ಪ ಆಪ್ತ ಮೂಲಗಳು ಮಾಹಿತಿ ನೀಡಿವೆ. ಇದು ಯಡಿಯೂರಪ್ಪ ಬಣದಲ್ಲಿ ಸಂಚಲನ ಉಂಟು ಮಾಡಿದೆ.

ಈಶ್ವರಪ್ಪಈ ನಡುವೆ ರವಿವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯುವ ಯತ್ನ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News