ತುಮಕೂರು: ಸಮಾಜದ ಅಭಿವೃದ್ದಿಗೆ ವೈಮನಸ್ಸು ಬಿಟ್ಟು ಒಂದಾಗಿ; ವೆಂಕಟರವಣಪ್ಪ

Update: 2018-02-25 17:24 GMT

ತುಮಕೂರು,ಫೆ.25: ಬೋಮಿ ಸಮುದಾಯ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕಾದರೆ ನಮ್ಮಲ್ಲಿರುವ ವೈಮನಸ್ಸುಗಳನ್ನು ಬಿಟ್ಟು,ಪಕ್ಷಾತೀತವಾಗಿ ಒಗ್ಗೂಡುವ ಅಗತ್ಯವಿದೆ ಎಂದು ಮಾಜಿ ಸಚಿವ ವೆಂಕಟರವಣಪ್ಪ ತಿಳಿಸಿದ್ದಾರೆ.

ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೋಮಿ ಸಮುದಾಯ ಸೇರಿ ಆಯೋಜಿಸಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರರ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆಯನ್ನೇ ನೆಪ ಮಾಡಿಕೊಂಡು ಸರಕಾರದ ಕಾರ್ಯಕ್ರಮವಾದರೂ ಸರಕಾರದ ಯಾವೊಬ್ಬ ಅಧಿಕಾರಿಯಾಗಲಿ, ಮಂತ್ರಿಯಾಗಲಿ ಕಾರ್ಯಕ್ರಮಕ್ಕೆ ಬಂದಿಲ್ಲ. ಬೇರೆ ಸಮುದಾಯಗಳಂತೆ ನಾವು ಒಗ್ಗಟ್ಟು ಪ್ರದರ್ಶಿಸಿದ್ದರೆ ಎಲ್ಲರೂ ನಾ ಮುಂದು ತಾ ಮುಂದು ಎಂದು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಎಲ್ಲಿಯವರಗೆ ಸಮುದಾಯದಲ್ಲಿ ಒಗ್ಗಟ್ಟು ಮೂಡುವುದಿಲ್ಲವೋ ಅಲ್ಲಿಯವರೆಗೆ ಎಷ್ಟು ಜಯಂತಿಗಳನ್ನು ಮಾಡಿದರೂ ಉಪಯೋಗವಿಲ್ಲ ಎಂದು ವೆಂಕಟರಮಣಪ್ಪ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾಂಗದ ಕೋರಿಕೆಯಂತೆ ಪ್ರತ್ಯೇಕ ನಿಗಮ ಸ್ಥಾಪಿಸಿರುವುದು ಸ್ವಾಗತಾರ್ಹ. ಆದರೆ ಜನ ಅಭಿವೃದ್ದಿಗೆ ಮೀಸಲಿಟ್ಟಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ದಿಗೆ ಮೀಸಲಿಟ್ಟಿರುವ ಹಣದಲ್ಲಿ ಶೇ1ರಷ್ಟು ಹಣ ನೀಡಿದ್ದರೂ ಸಾಕಾಗುತ್ತಿತ್ತು. ಈ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕೆಂದು ವೆಂಕಟರಮಣಪ್ಪ ಒತ್ತಾಯಿಸಿದರು.

ಈ ಹಿಂದೆ ಕಲ್ಲು ಒಡೆಯುವ ಕೋರೆಯ ಕೆಲಸ ಬೋಮಿ ಸಮುದಾಯಕ್ಕೆ ಸಿಗುತ್ತಿತ್ತು. ಇಂದಿನ ಅಧುನಿಕ ಯುಗದಲ್ಲಿ ಕೋರೆ ಒಡೆಯುವುದು ಒಂದು ದೊಡ್ಡ ಉದ್ಯಮವಾಗಿ ಮಾರ್ಪಾಡಾಗಿದ್ದು, ಒಡ್ಡರು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಆದ್ದರಿಂದ ಸರಕಾರ ಕಲ್ಲು ಕೋರೆಗಳ ಗುತ್ತಿಗೆ ನೀಡುವಾಗ ಬೋಮಿ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ ವೆಂಕಟರಮಣಪ್ಪ, ನೀವೆಲ್ಲಾ ಒಗ್ಗೂಡಿ ಸಮಾಜದ ಎಳಿಗೆಗೆ ದುಡಿಯುವ ಪಣ ತೊಟ್ಟರೆ ನಿಮ್ಮ ಜೊತೆ ಕೈಜೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಮಾತನಾಡಿ, ಸರಕಾರ ಜನಾಂಗದ ಒತ್ತಾಯದ ಮೇರೆಗೆ ಜಾರಿಗೆ ತಂದಿರುವ ಬೋಮಿ ಅಭಿವೃದ್ದಿ ಮಂಡಳಿ ಜನಾಂಗಕ್ಕೆ ವರವೋ, ಶಾಪವೋ ಎಂಬ ಆತಂಕ ಜನಾಂಗವನ್ನು ಕಾಡುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಕಚೇರಿಯಿಲ್ಲದೆ,ಸಿಬ್ಬಂದಿಯಿಲ್ಲದೆ ಪ್ರತಿಯೊಂದಕ್ಕೂ ಬೆಂಗಳೂರಿಗೆ ಹೊಗ ಬೇಕಾಗಿದೆ. ಅರ್ಜಿ ಸಲ್ಲಿಸಿ ವರ್ಷವಾದರೂ ಅನುದಾನ ಬಂದಿಲ್ಲ ಎಂಬ ಉತ್ತರ ಮಂಡಳಿಯಿಂದ ಬರುತ್ತಿದೆ. ಅಂಬೇಡ್ಕರ್ ಅಭಿವೃದ್ದಿ ನಿಗಮದವರು ನಮ್ಮನ್ನು ಮಲತಾಯಿ ಧೋರಣೆಯಿಂದ ಕಾಣುತ್ತಿದ್ದಾರೆ. ಇದನ್ನು ಹೋಗಲಾಡಿಸಿ, ಅಲ್ಲದೆ ಬೋಮಿ ಸಮುದಾಯಕ್ಕೆ ಮರಣಶಾಸನವಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು. ಒಂದು ವೇಳೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕು ಎಂದಾದರೆ ಸಾರ್ವಜನಿಕವಾಗಿ ಚರ್ಚೆಗೆ ತಂದು,ಕಾನೂನು ತಜ್ಞರ ಸಲಹೆ ಪಡೆದು, ಕೇಂದ್ರಕ್ಕೆ ಕಳುಹಿಸಿ. ಜನಾಂಗವನ್ನು ಕತ್ತಲೆಯಲ್ಲಿ ಇಡಬೇಡಿ ಎಂದು ಆಗ್ರಹಿಸಿದರು. 

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಬೋಮಿ ಸಮಾಜ ಅತ್ಯಂತ ಕಡು ಬಡತನದಿಂದ ಬದುಕುತ್ತಿರುವ ಸಮುದಾಯ. ಅವಿದ್ಯಾವಂತರೇ ಹೆಚ್ಚಾಗಿರುವ ಈ ಸಮುದಾಯವನ್ನು ಕೆಲವರು ಹೈಜಾಕ್ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹುಯಿಲುದೊರೆ ವಡ್ಡರ ಹಟ್ಟಿಗೆ ಹೋಗುವ ರಸ್ತೆ ನಿರ್ಮಿಸಿಕೊಡಲು ನಾವು ಸಿದ್ದರಿದ್ದೇವೆ. ಅಲ್ಲದೆ ಸ್ವಾಮೀಜಿಯವರು ಪ್ರಸ್ತಾಪಿಸಿರುವ ಎಲ್ಲಾ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ವೇದಿಕೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಬೋವಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸೀತಾರಾಂ,ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ವೈ.ಹೆಚ್.ಹುಚ್ಚಯ್ಯ, ಗಂಗಾಧರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆಗೆ ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News