'ವರ್ಷಕ್ಕೆ 2 ಕೋಟಿ ಉದ್ಯೋಗ'ದ ಬಗ್ಗೆ ಯುವಜನರಿಗೆ ಪ್ರಧಾನಿ ಉತ್ತರಿಸಬೇಕಿದೆ: ಬಸವರಾಜ ಪೂಜಾರ್

Update: 2018-02-25 17:31 GMT

ತುಮಕೂರು,ಫೆ.25: ಚುನಾವಣೆಗೂ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ ಪ್ರಧಾನಿ ಮೋದಿ ಯುವಜನರ ಪ್ರಶ್ನೆಗೆ ಉತ್ತರಿಸಬೇಕಾಗಿದೆ ಎಂದು ಡಿವೈಎಫ್‍ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ್ ತಿಳಿಸಿದ್ದಾರೆ.

ನಗರದ ಚನ್ನಪ್ಪಭವನ ಜನಚಳುವಳಿಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ನಿರಂತರ ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಉದ್ಯೋಗ ಕಡಿತಗಳೇ ಬಿಜೆಪಿಯ ಸಾಧನೆಯೇ ಎಂಬುದನ್ನು ದೇಶದ ಜನರಿಗೆ ತಿಳಿಸಬೇಕಾಗಿದೆ ಎಂದರು.

ಅಧಿಕಾರಕ್ಕೆ ಬರುವುದಕ್ಕಾಗಿ ದೇಶದ ಯುವಜನರಲ್ಲಿ ಹಲವು ಆಸೆಗಳನ್ನು ಹುಟ್ಟಿಸಿದ ಬಿಜೆಪಿ ಈಗ ತುಟಿ ಬಿಚ್ಚುತ್ತಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಭರವಸೆ ನೀಡಿ, ಇದ್ದ 1.56 ಲಕ್ಷ  ಹುದ್ದೆಗಳನ್ನು ಕಡಿತ ಮಾಡಲಾಗಿದೆ. ತುಮಕೂರು ನಗರದಲ್ಲೆ 10 ಸಾವಿರ ಹುದ್ದೆಗಳನ್ನು ಸೃಷ್ಠಿಸುವ ಭರವಸೆಯೊಂದಿಗೆ ಪ್ರಧಾನಿಗಳಿಂದ ಆರಂಭವಾದ ಫುಡ್‍ಪಾರ್ಕ್ ಮುಚ್ಚುವ ಹಂತದಲ್ಲಿದೆ. ಇದು ದೇಶದ ಯುವಜನರಲ್ಲಿ ಮತ್ತಷ್ಟು ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚಿಸಿದೆ. ಕೇಂದ್ರ ಸರಕಾರದ ಸ್ವಾಮ್ಯದ ಹುದ್ದಿಮೆಗಳನ್ನು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅದರ ಹಾದಿಯಲ್ಲೆ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದರು

ಎಸ್.ಎಫ್.ಐನ ಸತೀಶ್ ಮಾತನಾಡಿ, ಜನರನ್ನು ಇಂದು ಭಾವಾನಾತ್ಮಕಗೊಳಿಸಲಾಗುತ್ತಿದ್ದು, ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಯುವಜನರ ಮುಂದೆ ಸಾಕಷ್ಟು ಜವಾಬ್ದಾರಿಗಳಿದ್ದು, ದೇಶದ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಡಿ.ವೈ.ಎಫ್.ಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಮಂಜುನಾಥ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಯುವಜನರಿಗೆ ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳನ್ನು ಸೃಷ್ಠಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಸರಕಾರಗಳ ಈ ನೀತಿಗಳಿಂದಾಗಿ ಯುವಜನರು ಅತ್ಯಂತ ಕಡಿಮೆ ಕೂಲಿಗೆ ದುಡಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆ ಆಧಾರದಲ್ಲಿ, ಕನಿಷ್ಠ ಕೂಲಿಯೂ ಇಲ್ಲದೆ ದುಡಿಯುವ ಸ್ಥಿತಿ ಇದೆ. ಇನ್ನು ಗ್ರಾಮಿಣ ಪ್ರದೇಶದಲ್ಲಿರುವ ಯುವ ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ, ಇತ್ತ ಕೃಷಿಯನ್ನು ಮಾಡದ ಸ್ಥಿತಿಯಲ್ಲಿ ಇದ್ದಾರೆ. ಸರಕಾರಗಳ ನೀತಿಗಳು ಬದಲಾಗಬೇಕಾದರೆ ಬಲಿಷ್ಠ ಹೋರಾಟ ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಫ್.ಐನ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿ, ದೇಶದ ಜನರಿಗೆ ನೀಡಿರುವ ಭರವಸೆ ಗಳನ್ನು ಕೇಂದ್ರ ಸರಕಾರ ಈಡೇರಿಸಿದ ನಂತರ ಮಾತನಾಡಬೇಕು. ಬದಲಾಗಿ ಮಾತನಾಡುವುದೇ ಕೇಂದ್ರ ಸರಕಾರದ ಸಾಧನೆಯಂತೆ ತೊರುತ್ತಿದೆ. ಅಭಿವೃದ್ಧಿ ನೋಡಿದರೆ ಶೂನ್ಯವಾಗಿದೆ . ವಿಜಯ್‍ಮಲ್ಯ,ಲಲಿತ್‍ಮೋದಿ, ನೀರವ್ ಮೋದಿಯ 11,400ಕೋಟಿ ಹಗರಣಗಳನ್ನು ನೋಡಿದರೆ, ದೇಶದ ಜನ ಬ್ಯಾಂಕ್‍ಗಳಲ್ಲಿ ಹಣವಿಡುವುದೇ ತಪ್ಪು ಎಂಬಂತಾಗಿದೆ ಎಂದರು.

ಸಭೆಯಲ್ಲಿ ಡಿ.ವೈ.ಎಫ್.ಐನ ಎಂ.ಆರ್. ನಾಗರಾಜು, ಕರ್ನಾಟಕ ರಾಜ್ಯ ಗ್ರಾಮಪಂಚಾಯತ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ನಾಗೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಸಿ.ಅಜ್ಜಪ್ಪ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News