ವಕೀಲರಿಗೆ ಶಿಸ್ತು ಬಹಳ ಮುಖ್ಯ: ಹೈಕೋಟ್ ನ್ಯಾ.ಬಿ.ಎಂ.ಶ್ಯಾಂಪ್ರಸಾದ್

Update: 2018-02-25 17:35 GMT

ಮಂಡ್ಯ, ಫೆ.25: ವಕೀಲರಿಗೆ ಶ್ರದ್ಧೆ, ಶಿಸ್ತು ಬಹಳ ಮುಖ್ಯ. ಅದಿಲ್ಲದಿದ್ದರೆ ಎಲ್ಲೂ ಅವಕಾಶಗಳು ಸಿಗುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಸಮಾಜ ನಾಗಾಲೋಟದಲ್ಲಿ ಹೋಗುತ್ತಿದೆ. ಬದಲಾವಣೆ ಮುಖ್ಯವಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿರುವ ಬಿ.ಎಂ.ಶ್ಯಾಂಪ್ರಸಾದ್ ಹೇಳಿದ್ದಾರೆ.

ಮಂಡ್ಯ ವಕೀಲರ ಸಂಘದ ವತಿಯಿಂದ ರವಿವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಕೀಲ ವೃತ್ತಿ ಬೆಳೆದರೆ ನ್ಯಾಯಾಂಗ ವ್ಯವಸ್ಥೆಗೆ ಅನುಕೂಲವಾಗುತ್ತದೆ. ಕಿರಿಯ ವಕೀಲರಿಗೆ ಹಿರಿಯ ವಕೀಲರು ಮಾರ್ಗದರ್ಶನ, ಪ್ರೋತ್ಸಾನ ನೀಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ, ಮಂಡ್ಯ ಜಿಲ್ಲೆಯ ಇ.ಎಸ್.ವೆಂಕಟರಾಮಯ್ಯ ಸುಪ್ರೀಂಕೋರ್ಟ್‍ನ ನ್ಯಾಯಾಧೀಶರಾಗಿದ್ದರು. ಅವರಂತೆಯೇ ಶ್ಯಾಂಪ್ರಸಾದ್ ಕೂಡ ಹೆಸರು ಮಾಡಲಿ ಎಂದು ಆಶಿಸಿದರು.

ಜನರ ಕಷ್ಟಸುಖಗಳನ್ನು ಮನದಲ್ಲಿಟ್ಟುಕೊಂಡು ಕಕ್ಷಿದಾರನು ನ್ಯಾಯಾಲಯಕ್ಕೆ ಬರಲು ಕಷ್ಟವಾದಾಗ ಕಾನೂನಿನ ತಳಹದಿಯಲ್ಲಿ ಪರಿಹಾರ ಕೊಡುವ ಅಗತ್ಯತೆ ಇದೆ. ಅಂತಹ ಒಳ್ಳೆಯ ಕೆಲಸವನ್ನು ಶ್ಯಾಂಪ್ರಸಾದ್ ಮಾಡಲಿ ಎಂದು ಕಿವಿಮಾತು ಹೇಳಿದರು. 

ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎನ್.ಮಲ್ಲಿಕಾರ್ಜುನ್, ಚಂದ್ರಶೇಖರಯ್ಯ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಚ್.ಜೆ.ವಿಜಯಕುಮಾರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಜಿ.ಮರೀಗೌಡ, ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಧರ, ಅಭಿನವ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News