ಪ್ರಧಾನಿ ಹುದ್ದೆಗೆ ರಾಹುಲ್ ದ್ರಾವಿಡ್ ಹೆಸರು !

Update: 2018-02-27 09:38 GMT

ಮುಂಬೈ, ಫೆ.27 : ಈ ತಿಂಗಳು ನ್ಯೂಝಿಲೆಂಡ್ ನಲ್ಲಿ ನಡೆದ 2018ರ ಐಸಿಸಿ -19ರ ಕೆಳಹರೆಯದವರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತೀಯ ತಂಡ ಗೆದ್ದ ಬಳಿಕ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದ ತಂಡದ ಕೋಚ್ ಆಗಿರುವ ಮಾಜಿ ಹಿರಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್, ಇದೀಗ ತಮ್ಮ ಇನ್ನೊಂದು ಉತ್ತಮ ಕಾರ್ಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ದ್ರಾವಿಡ್ ರಂತಹವರು ತಮ್ಮ ದೇಶದ ಪ್ರಧಾನಿಯಾಗಬೇಕು ಎಂದು ಹಲವರು ಟ್ವಿಟ್ಟರ್ ನಲ್ಲಿ ತಮ್ಮ ಅನಿಸಿಕೆಗಳನ್ನೂ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕಿರಿಯರ ತಂಡ ವಿಶ್ವಕಪ್ ಗೆದ್ದ ನಂತರ ಭಾರತೀಯ ಕ್ರಿಕೆಟ್ ಮಂಡಳಿ ತಂಡಕ್ಕೆ ನಗದು ಬಹುಮಾನ ಘೋಷಿಸಿತ್ತು. ಕೋಚ್ ಗೆ ರೂ.50 ಲಕ್ಷ, ಆಟಗಾರರಿಗೆ ತಲಾ ರೂ.30 ಲಕ್ಷ ಹಾಗೂ ಕೋಚಿಂಗ್ ತಂಡದ ಸಿಬ್ಬಂದಿಗೆ ತಲಾ ರೂ.20 ಲಕ್ಷ ನೀಡುವುದಾಗಿ ಮಂಡಳಿ ಹೇಳಿತ್ತು. ಆದರೆ ಇದು ದ್ರಾವಿಡ್ ಗೆ ಇಷ್ಟವಾಗಿರಲಿಲ್ಲ. ಕೋಚಿಂಗ್ ತಂಡದ ಎಲ್ಲರಿಗೂ ಸಮಾನ ಪ್ರೋತ್ಸಾಹಧನ ದೊರೆಯಬೇಕೆಂದು ಅವರು ಮಾಡಿದ್ದಾರೆ. ಈ ಮನವಿಯನ್ನು ಒಪ್ಪಿ ಇದೀಗ ಕೋಚ್ ಸಹಿತ ಕೋಚಿಂಗ್ ತಂಡದ ಎಲ್ಲಾ ಸಿಬ್ಬಂದಿಗೂ ತಲಾ ರೂ 25 ಲಕ್ಷ ನೀಡುವುದಾಗಿ ಬಿಸಿಸಿಐ ತಿಳಿಸಿದೆ.

‘‘ತಂಡದ ಕೋಚ್ ಆಗಿ ನನಗೆ ಸಾಕಷ್ಟು ಗಮನ ದೊರೆಯುತ್ತಿದ್ದರೂ ಕೋಚಿಂಗ್ ತಂಡದ ಸಿಬ್ಬಂದಿಯ ಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ’’ ಎಂದು ದ್ರಾವಿಡ್ ಹೇಳಿದ್ದಾರೆ.

ದ್ರಾವಿಡ್ ಅವರ ಒಳ್ಳೆಯ ಗುಣ ಅವರ ಅಭಿಮಾನಿಗಳಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ ಒಬ್ಬ ಟ್ವಿಟ್ಟರಿಗರಂತೂ ತಾವು ದ್ರಾವಿಡ್ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಯಾವುದೇ ಪಕ್ಷಕ್ಕೆ ಮತ ನೀಡುವುದಾಗಿ ಹೇಳಿದ್ದಾರೆ. ಭಾರತಕ್ಕೆ ದ್ರಾವಿಡ್ ಅವರಂತಹ ನಾಯಕರು ಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News