ಚಿಕ್ಕಮಗಳೂರು: ನಕ್ಸಲ್ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲು ಡಿಸಿ ಸೂಚನೆ

Update: 2018-02-27 11:58 GMT

ಚಿಕ್ಕಮಗಳೂರು, ಫೆ.27: ಜಿಲ್ಲೆಯಲ್ಲಿನ ನಕ್ಸಲ್ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲೆನಾಡು ಪ್ರದೇಶದಲ್ಲಿ ಮಳೆ ಪ್ರಾರಂಭವಾದ ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೊಡಕಾಗುವುದರಿಂದ ಮೂಲಭೂತ ಸೌಕರ್ಯಗಳ ಕೊರತೆ ಇರುವ ನಕ್ಸಲ್ ಪ್ರದೇಶಗಳಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು. ಜೊತೆಗೆ ಸದ್ಯ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ಪಟ್ಟಿ ಮಾಡಿ ನಕ್ಸಲ್ ಪ್ಯಾಕೇಜ್‍ನ ಅನುದಾನ ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ನಕ್ಸಲ್ ಪ್ರದೇಶಗಳಲ್ಲಿ ಪಡಿತರ ಚೀಟಿ ವಿತರಣೆ, ರಸ್ತೆ ಕಾಮಗಾರಿಗಳು, ವಿದ್ಯುತ್ ಸಂಪರ್ಕ ಕಲ್ಪಿಸುವಿಕೆ ಮತ್ತಿತರ ಕಾರ್ಯಗಳನ್ನು 15 ದಿನಗಳೊಳಗೆ ಕೈಗೆತ್ತಿಕೊಳ್ಳಬೇಕೆಂದು ಡಿಸಿ ಶ್ರೀರಂಗಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಸಭೆಯಲ್ಲಿ ಎಸ್ಪಿ ಕೆ.ಅಣ್ಣಮಲೈ, ಜಿಪಂ ಸಿಇಒ ಸಿ.ಸತ್ಯಭಾಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News