ಪ್ರಧಾನಿ ಮೋದಿ ವಿದೇಶ ಪ್ರಯಾಣದ ವೆಚ್ಚದ ವಿವರ ಸಲ್ಲಿಸಲು ಸೂಚನೆ

Update: 2018-02-27 13:22 GMT

ಹೊಸದಿಲ್ಲಿ, ಫೆ.27: 2013ರಿಂದ 2017ರವರೆಗೆ ಪ್ರಧಾನಿ ಮೋದಿ ನಡೆಸಿದ ವಿದೇಶ ಪ್ರವಾಸದ ವೆಚ್ಚದ ಬಗ್ಗೆ ವಿವರ ಸಲ್ಲಿಸುವಂತೆ ವಿದೇಶ ವ್ಯವಹಾರ ಇಲಾಖೆಗೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ನಿರ್ದೇಶನ ನೀಡಿದೆ.

    ವೆಚ್ಚದ ವಿವರ, ಉಲ್ಲೇಖ ಸಂಖ್ಯೆ, ಪ್ರಧಾನಿ ವಿದೇಶ ಪ್ರವಾಸ ಮಾಡಿದ್ದಕ್ಕೆ ಭಾರತೀಯ ವಾಯುಪಡೆ ಹಾಗೂ ಏರ್ ಇಂಡಿಯಾ ಸಂಸ್ಥೆಗಳು ಬಿಲ್ ನೀಡಿದ ದಿನಾಂಕ. ಇತ್ಯಾದಿ ವಿವರಗಳು ಹಲವು ದಾಖಲೆಪುಸ್ತಕ ಹಾಗೂ ಫೈಲ್‌ಗಳಲ್ಲಿ ಹಂಚಿ ಹೋಗಿವೆ . ಆದ್ದರಿಂದ ವೆಚ್ಚದ ವಿವರ ಸಲ್ಲಿಸಲು ಹಲವು ಅಧಿಕಾರಿಗಳು ಅಗಾಧ ಪ್ರಮಾಣದ ದಾಖಲೆಪತ್ರಗಳನ್ನು ಪರಿಶೀಲನೆ ಮತ್ತು ತುಲನೆ ನಡೆಸಬೇಕಾಗುತ್ತದೆ ಎಂಬ ವಿದೇಶ ವ್ಯವಹಾರ ಇಲಾಖೆಯ ಹೇಳಿಕೆಯನ್ನು ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ತಳ್ಳಿ ಹಾಕಿದರು.

 2013-14ರಆರ್ಥಿಕ ವರ್ಷದಿಂದ 2016-17ರ ಆರ್ಥಿಕ ವರ್ಷದ ಅವಧಿಯಲ್ಲಿ ಪ್ರಧಾನಿ ಮೋದಿ ನಡೆಸಿರುವ ವಿದೇಶ ಪ್ರವಾಸದ ವೆಚ್ಚದ ವಿವರ ಕೋರಿ ನಿವೃತ್ತ ಅಧಿಕಾರಿ ಲೋಕೇಶ್ ಬಾತ್ರ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ ಅರ್ಜಿದಾರರು, ಮಾಹಿತಿ ಹಕ್ಕು ಕಾಯ್ದೆಯಡಿ ತಾನು ಕೇಳಿದ್ದ ಮಾಹಿತಿಯ ಅಪೂರ್ಣ ವಿವರ ನೀಡಲಾಗಿದೆ ಎಂದು ತಿಳಿಸಿದರು.

 ಏರ್ ಇಂಡಿಯಾ ಸಂಸ್ಥೆಗೆ ಹಣದ ಕೊರತೆಯಿದೆ. ಹೀಗಿರುವಾಗ ಇಂತಹ ಬೃಹತ್ ಮೊತ್ತದ ಬಿಲ್‌ಗಳ ಪಾವತಿಗೆ ವಿಳಂಬಿಸಿದರೆ ಆಗ ಬಡ್ಡಿ ಮೊತ್ತ ಹೆಚ್ಚಾಗುತ್ತದೆ ಮತ್ತು ಈ ಮೊತ್ತವನ್ನು ತೆರಿಗೆ ಪಾವತಿಸುವವರೇ ಭರಿಸಬೇಕಾಗುತ್ತದೆ ಎಂದು ಬಾತ್ರ ಅರ್ಜಿಯಲ್ಲಿ ತಿಳಿಸಿದ್ದರು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಇಂತಹ ಮಾಹಿತಿಗಳನ್ನು ನಿರಾಕರಿಸುವಂತಿಲ್ಲ. ಯಾಕೆಂದರೆ ಏರ್ ಇಂಡಿಯಾದ ಸೇವೆಯನ್ನು ಬಳಸಿಕೊಂಡ ಮೇಲೆ ಪಾವತಿ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದೆ ಎಂದವರು ಹೇಳಿದ್ದಾರೆ.

 ಅರ್ಜಿಯ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತರು, ಯಾವುದೇ ಬಿಲ್‌ಗಳನ್ನು ಪಾವತಿಸುವ ಮೊದಲು ಬಿಲ್/ಇನ್‌ವಾಯ್ಸ್ ಗಳನ್ನು ಸಂಗ್ರಹಿಸಬೇಕು ಮತ್ತು ಪರಿಶೀಲಿಸಬೇಕು . ಈ ಹಿನ್ನೆಲೆಯಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಯನ್ನು ವಿದೇಶ ವ್ಯವಹಾರ ಇಲಾಖೆ ಒದಗಿಸಬೇಕು ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News