ನೌಕಾದಳದ ಮೆಗಾ ಕವಾಯತ್: ಭಾರತದ ಆಹ್ವಾನ ನಿರಾಕರಿಸಿದ ಮಾಲ್ದೀವ್ಸ್

Update: 2018-02-27 13:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ.27: ದೇಶದಲ್ಲಿ ವಿಧಿಸಲಾಗಿರುವ ತುರ್ತು ಪರಿಸ್ಥಿತಿಯನ್ನು ತೆರವುಗೊಳಿಸಬೇಕೆಂಬ ಭಾರತದ ಸತತ ಮನವಿಯನ್ನು ಕಡೆಗಣಿಸಿರುವ ಮಾಲ್ದೀವ್ಸ್, ಇದೀಗ 16 ರಾಷ್ಟ್ರಗಳು ಭಾಗವಹಿಸಲಿರುವ ನೌಕಾದಳದ ಬೃಹತ್ ಕವಾಯತ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಭಾರತದ ಆಹ್ವಾನವನ್ನು ತಿರಸ್ಕರಿಸಿದೆ.

 ಮುಂದಿನ ತಿಂಗಳು 16 ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಿರುವ ನೌಕಾದಳದ ಬೃಹತ್ ಕವಾಯತ್ ‘ಮಿಲನ್’ನಲ್ಲಿ ಆಸ್ಟ್ರೇಲಿಯಾ, ಮಲೇಶ್ಯಾ, ಮಾರಿಷಸ್, ಮ್ಯಾನ್ಮಾರ್, ನ್ಯೂಝಿಲ್ಯಾಂಡ್, ಒಮಾನ್ ಸೇರಿದಂತೆ ಹಲವು ರಾಷ್ಟ್ರಗಳು ಭಾಗವಹಿಸುವುದನ್ನು ಖಚಿತಪಡಿಸಿವೆ. ಆದರೆ ಮಾಲ್ದೀವ್ಸ್ ಮಾತ್ರ ಯಾವುದೇ ಕಾರಣ ನೀಡದೆ ಆಹ್ವಾನವನ್ನು ತಿರಸ್ಕರಿಸಿದೆ ಎಂದು ನೌಕಾದಳದ ಚೀಫ್ ಅಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ.

  1995ರಲ್ಲಿ ಐದು ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಲ್ಲಿ ಆರಂಭವಾದ ಈ ದ್ವೈವಾರ್ಷಿಕ ನೌಕಾ ಕವಾಯತ್‌ನಲ್ಲಿ ಇದೀಗ 16 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಪ್ರಾದೇಶಿಕ ಸಹಕಾರ ಸಂಬಂಧವನ್ನು ವೃದ್ಧಿಸುವ ಹಾಗೂ ಸಮುದ್ರದ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ನೌಕಾ ಕವಾಯತ್ ನಡೆಯುತ್ತಿದ್ದು ಈ ಬಾರಿ ಮಾರ್ಚ್ 6ರಿಂದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ನಡೆಯಲಿದೆ.

   ಇತ್ತೀಚಿನ ದಿನಗಳಲ್ಲಿ ಭಾರತ- ಮಾಲ್ದೀವ್ಸ್ ನಡುವಿನ ಸಂಬಂಧ ಹದಗೆಡುತ್ತಿದ್ದು ನೌಕಾದಳದ ಕವಾಯತ್‌ನಲ್ಲಿ ಪಾಲ್ಗೊಳ್ಳಲು ಮಾಲ್ದೀವ್ಸ್ ನಿರಾಕರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ ಎನ್ನಲಾಗುತ್ತಿದೆ. ಮಾಲ್ದೀವ್ಸ್‌ನಲ್ಲಿ ವಿಧಿಸಲಾಗಿರುವ ತುರ್ತುಪರಿಸ್ಥಿತಿಯನ್ನು 30 ದಿನಕ್ಕೆ ವಿಸ್ತರಿಸಿದ ಬಗ್ಗೆ ಅಸಮಾಧಾನ ಸೂಚಿಸಿದ್ದ ಭಾರತ, ಈ ಬೆಳವಣಿಗೆ ಗೊಂದಲಕ್ಕೆ ಕಾರಣವಾಗಿದೆ ಎಂದಿತ್ತು ಹಾಗೂ ಪ್ರಜಾಪ್ರಭುತ್ವ ಮರುಸ್ಥಾಪಿಸುವಂತೆ ಮಾಲ್ದೀವ್ಸ್‌ಗೆ ಮನವಿ ಮಾಡಿತ್ತು.

 ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿದ್ದ ಮಾಲ್ದೀವ್ಸ್‌ನ ವಿದೇಶ ವ್ಯವಹಾರ ಇಲಾಖೆ, ದೇಶದಲ್ಲಿರುವ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡಿರುವ ಕ್ರಮಕ್ಕೆ ಅಡ್ಡಿಯಾಗುವ ಯಾವುದೇ ಕ್ರಮದಿಂದ ದೂರ ಇರುವಂತೆ ಭಾರತವೂ ಸೇರಿದಂತೆ ಜೊತೆಗಾರರು ಹಾಗೂ ಮಿತ್ರ ರಾಷ್ಟ್ರಗಳಿಗೆ ಸೂಚಿಸುವುದಾಗಿ ತಿಳಿಸಿದ್ದರು. ಮಾಲ್ದೀವ್ಸ್‌ನಲ್ಲಿರುವ ಪರಿಸ್ಥಿತಿಯನ್ನು ವಾಸ್ತವಿಕವಾಗಿ ಅವಲೋಕಿಸುವಂತೆ ಮಾಲ್ದೀವ್ಸ್‌ನ ವಿದೇಶ ವ್ಯವಹಾರ ಇಲಾಖೆ ತಿಳಿಸಿತ್ತು.

 ಮಾಲ್ದೀವ್ಸ್‌ನ 9 ಪ್ರಮುಖ ವಿಪಕ್ಷಗಳ ನಾಯಕರ ವಿರುದ್ಧ ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡಿದ ಅಪರಾಧ ಹೊರಿಸಿದ್ದ ಸರಕಾರದ ಕ್ರಮವನ್ನು ಮಾಲ್ದೀವ್ಸ್‌ನ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಇದರಿಂದ ದೇಶಭ್ರಷ್ಟ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್‌ಗೆ ಮರಳಿ ದೇಶ ಪ್ರವೇಶಿಸಲು ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ನ ತೀರ್ಪನ್ನು ಒಪ್ಪದ ಮಾಲ್ದೀವ್ಸ್‌ನ ಅಧ್ಯಕ್ಷ ಅಬ್ದುಲ್ಲಾ ಯಮೀನ್, ಫೆ.5ರಂದು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ಅಲ್ಲದೆ ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಹಾಗೂ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಅಬ್ದುಲ್ ಗಯೂಮ್‌ರನ್ನು ಬಂಧಿಸಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಉಳಿದ ಮೂವರು ನ್ಯಾಯಾಧೀಶರೂ ನ್ಯಾಯತೀರ್ಮಾನಿಸುವ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News