ಚಿಕ್ಕಮಗಳೂರು: ಮರಳು ದಂಧೆ ಮಾಫಿಯಾದ ಕರಾಳ ಮುಖ ಬಯಲು

Update: 2018-02-28 11:39 GMT

ದ.ಕ., ಉಡುಪಿಯಲ್ಲಿ ಮರಳು ದಂಧೆಗೆ ನಕಲಿ ಪರ್ಮಿಟ್‍ಗಳ ಬಳಕೆ

ಚಿಕ್ಕಮಗಳೂರು, ಫೆ.28: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ದಂಧೆಯ ಕರಾಳ ಮುಖವನ್ನು ಜಿಲ್ಲಾ ಪೊಲೀಸ್ ಇಲಾಖೆ ಬಯಲು ಮಾಡಿದ್ದು, ಸರಕಾರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಂಚಿಕೆ ಮಾಡಿದ್ದ ಮರಳು ಸಾಗಣೆ ಪರವಾನಿಗೆ (ಎಂಡಿಪಿ-ಮಿನರಲ್ ಡಿಸ್ಪ್ಯಾಚ್ ಪರ್ಮಿಟ್)ಗಳನ್ನು ದುರುಪಯೋಗ ಪಡಿಸಿಕೊಂಡಿರುವ ಶಂಕೆಯ ಮೇಲೆ ಓರ್ವ ಕಾರ್ಯಪಾಲಕ ಅಭಿಯಂತರ, ಓರ್ವ ಸಹಾಯಕ ಕಾರ್ಯಪಾಲಕ ಅಭಿಯಂತರ, ಇಬ್ಬರು ದ್ವಿತೀಯ ದರ್ಜೆ ಸಹಾಯಕರು, ಇಬ್ಬರು ಡಿ ದರ್ಜೆ ನೌಕರರು ಹಾಗೂ ಓರ್ವ ಗುತ್ತಿಗೆದಾರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಈ ಸಂಬಂಧ ಬುಧವಾರ ಎಸ್ಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, 'ಎಂಡಿಪಿಗಳನ್ನು ದುರುಪಯೋಗ ಮಾಡಿಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ಕಾಪು, ಬೆಳ್ತಂಗಡಿ ಹಾಗೂ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರ ಅಕ್ಟೋಬರ್ ತಿಂಗಳಿನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಿದ ಆರೋಪ ಸಂಬಂಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಗುತ್ತಿಗೆದಾರರ ಪರವಾನಿಗೆ ಮೇಲೆ ಶಂಕೆಗೊಂಡ ಅಲ್ಲಿನ ಪೊಲೀಸರು ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ತನಿಖೆಗಾಗಿ ಮನವಿ ಮಾಡಿದ್ದರು. ಇದರ ಬೆನ್ನು ಹತ್ತಿ ಮಂಗಳವಾರ ರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖಾ ಕಚೇರಿಗಳಲ್ಲಿ ಶೋಧ ನಡೆಸಿದಾಗ ಸರಕಾರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಿತರಿಸಲಾದ ಸುಮಾರು 20 ಸಾವಿರ ಎಂಡಿಪಿಗಳ ಪೈಕಿ 4 ಸಾವಿರ ಎಂಡಿಪಿಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಇಲಾಖೆಯ ಇಬ್ಬರು ಇಂಜಿನಿಯರ್ ಗಳು ಮರಳು ಸಾಗಣೆ ಗುತ್ತಿಗೆದಾರರಿಗೆ ಅಕ್ರಮವಾಗಿ ಈ ಪರವಾನಿಗೆಯನ್ನು ವಿತರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 7 ಮಂದಿಯನ್ನು ವಶಕ್ಕೆ ಪಡೆದು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮರಳು ಪರವಾನಿಗೆಗಳು ದಕ್ಷಿಣ ಕನ್ನಡ, ಉಡುಪಿ ಭಾಗಗಳ ಮರಳು ದಂಧೆಕೋರರ ಕೈಗೆ ಸೇರಿದ್ದು ಹೇಗೆಂಬ ಬಗ್ಗೆ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಉಡುಪಿ ಪೊಲೀಸರ ವಶಕ್ಕೆ ನೀಡಲಾಗಿದೆ' ಎಂದು ಹೇಳಿದರು.

ಮರಳು ಸಾಗಣೆಯ ಗುತ್ತಿಗೆ ಪರವಾನಿಗೆಯನ್ನು ಸರಕಾರ ಎಲ್ಲಾ ಜಿಲ್ಲೆಗಳಿಗೆ ವಿತರಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ 20 ಸಾವಿರ ಪರವಾನಿಗೆಗಳನ್ನು ವಿತರಿಸಿದೆ. ಈ ಪೈಕಿ 4 ಸಾವಿರ ಪರವಾನಿಗೆಗಳು ನಾಪತ್ತೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಪ್ರತೀ ಪರವಾನಿಗೆಗೆ ಸರಕಾರ 10 ಸಾವಿರ ರೂ. ಶುಲ್ಕ ವಿಧಿಸುತ್ತದೆ. ಅದರಂತೆ 4 ಸಾವಿರ ಪರವಾನಿಗೆಗಳಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಲಾಗಿದೆ ಎಂದ ಅವರು, ಪ್ರಕರಣ ಸಂಬಂಧ ಉಡುಪಿ, ದ.ಕ.ಜಿಲ್ಲಾ ವ್ಯಾಪ್ತಿಯ ಠಾಣೆಗಳಲ್ಲಿ ಎಎಫ್‍ಐಆರ್ ದಾಖಲಾಗಿದ್ದು, ಚಿಕ್ಕಮಗಳೂರಿನ ಅಕ್ಷಯ್ ಎಂಬ ಗುತ್ತಿಗೆದಾರ ಇಂತಹ ನಕಲಿ ಪರವಾನಿಗೆ ಬಳಸಿ ಮಂಗಳೂರು, ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಿಷಯ ತಿಳಿದು ಬಂದಿದೆ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದರು.

ನಾಪತ್ತೆಯಾದ 4 ಸಾವಿರ ಪರ್ಮಿಟ್‍ಗಳು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದ್ದು, ಅಸಲಿ ಪರ್ಮಿಟ್‍ಗಳನ್ನು ಗುಪ್ತವಾಗಿ ತಿದ್ದಿ ದ.ಕ., ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಣೆ ಮಾಡಲು ಬಳಸಿಕೊಳ್ಳಲಾಗಿದೆ. ಪರ್ಮಿಟ್‍ಗಳನ್ನು ಎಲ್ಲಿ, ಹೇಗೆ ತಿದ್ದಿ ಪ್ರಿಂಟ್ ಮಾಡಲಾಗಿದೆ ಎಂಬ ಮಾಹಿತಿ ಹೆಚ್ಚಿನ ತನಿಖೆಯಿಂದ ತಿಳಿದು ಬರಲಿದೆ ಎಂದ ಅವರು, ಪ್ರಕರಣ ಸಂಬಂಧ ಜಿಲ್ಲೆಯ ಗಣಿ ಇಲಾಖೆಯ ಮುಖ್ಯಸ್ಥರನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ನಕಲಿ ಪರ್ಮಿಟ್ ಬಳಸಿ ಮರಳು ಸಾಗಣೆ ಮಾಡುತ್ತಿರುವ ಶಂಕೆಯ ಮೇಲೆ ಜಿಲ್ಲೆಯ ವಿವಿಧ ಭಾಗಗಳ ಮರಳು ಗುತ್ತಿಗೆದಾರರನ್ನು ಎಸ್ಪಿ ಕಚೇರಿಗೆ ಕರೆಸಿಕೊಂಡಿರುವ ಎಸ್ಪಿ, ಅವರನ್ನು ವಿಚಾರಣೆಗೊಳಪಡಿಸುತ್ತಿದ್ದು, ದಂಧೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮರಳು ಗುತ್ತಿಗೆ ಪರವಾನಿಗೆಗಳು ಅತ್ಯಂತ ಭದ್ರತೆ ಇರುವ ಮುದ್ರಣಾಲಯಗಳಲ್ಲಿ ಮುದ್ರಣವಾಗುತ್ತವೆ. ಅಲ್ಲಿಂದಲೇ ನಕಲಿ ಪರ್ಮಿಟ್‍ಗಳನ್ನು ತಿದ್ದಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಪರವಾನಿಗೆ ಪುಸಕ್ತದ ಮೇಲಿನ ಹಾಳೆಯನ್ನು ಹಾಗೆಯೇ ಉಳಿಸಿಕೊಂಡು ಒಳಗಿನ ಹಾಳೆಗಳನ್ನು ಕಂಪ್ಯೂಟರ್ ನಲ್ಲಿ ತಿದ್ದಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲ ಅಧಿಕಾರಿಗಳು ಭಾಗಿಯಾಗಿರುಯವ ಬಗ್ಗೆ ಹಾಗೂ ಪ್ರಭಾವಿಗಳು, ರಾಜಕಾರಣಿಗಳ ಹಸ್ತಕ್ಷೇಪ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ.

 - ಕೆ.ಅಣ್ಣಾಮಲೈ, ಎಸ್ಪಿ

ಮಾರ್ಚ್ ತಿಂಗಳಿನಲ್ಲಿ ಬಾಬಾಬುಡನ್‍ಗಿರಿಯಲ್ಲಿ ಉರೂಸ್ ನಡೆಯಲಿದ್ದು, ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ನಡೆಸಲು ಹಾಗೂ ಗುಹಯೊಳಗಿನ ಗೋರಿಗಳಿಗೆ ಗಂಧ, ಹಸಿರು ಹೊದಿಕೆ ಹಾಕಲು ಅವಕಾಶ ನೀಡಬೇಕೆಂದು ಹಝ್ರತ್ ದಾದಾ ಹಯಾತ್ ಮೀರ್ ಕಮಿಟಿ ಸದಸ್ಯರು ಮನವಿ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಆದೇಶದ ಪ್ರಕಾರ ಜಿಲ್ಲಾಧಿಕಾರಿ ಕ್ರಮ ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ ಉರೂಸ್ ವೇಳೆ ಅಗತ್ಯವಿರುವ ಬಂದೋಬಸ್ತ್ ಕಲ್ಪಿಸಲಾಗುವುದು.

- ಕೆ.ಅಣ್ಣಾಮಲೈ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News