ಗುಂಡ್ಲುಪೇಟೆ: 'ಮೂಲ ಕಾನೂನುಗಳ ಬಗ್ಗೆ ಕಾನೂನು ಅರಿವು ನೆರವು' ಕಾರ್ಯಕ್ರಮ

Update: 2018-02-28 12:04 GMT

ಗುಂಡ್ಲುಪೇಟೆ,ಫೆ.28: ಪ್ರಪಂಚದ ವಿದ್ಯಮಾನಗಳು ವೇಗವಾಗಿ ಸಾಗುತ್ತಿದ್ದು ನಮ್ಮ ಸುತ್ತಮುತ್ತಲಿನ ಬೆಳವಣಿಗೆಗಳ ಬಗ್ಗೆ ಅರಿವು ಪಡೆಯಲು ಸುದ್ದಿಗಳನ್ನು ನೋಡುವಂತಾಗಬೇಕು ಎಂದು ಪಟ್ಟಣದ ಹಿರಿಯ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾಸಮಿತಿ ಹಾಗೂ ವಕೀಲರ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ “ಮೂಲ ಕಾನೂನುಗಳ ಬಗ್ಗೆ ಕಾನೂನು ಅರಿವು ನೆರವು” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗಿದ್ದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಸ್ಪಷ್ಟವಾದ ಅರಿವಿಲ್ಲದಂತಾಗಿದೆ. ಆದ್ದರಿಂದ ವಾಟ್ಸಪ್ ಹೊಂದಿದ ಸ್ಮಾರ್ಟ್ ಫೋನುಗಳು ಪ್ರಸ್ತುತ ಬೆಳವಳಿಗೆಗಳ ಮಾಹಿತಿ ನೀಡಿ ನಮ್ಮನ್ನು ಸ್ಮಾರ್ಟ್ ಮಾಡಬೇಕೇ ಹೊರತು ಅವುಗಳಿಗೆ ನಾವು ಅಡಿಯಾಳಾಗಬಾರದು. ಅಂತರ್ಜಾಲದ ಮೂಲಕ ಅಪಾರ ಜ್ಞಾನ ಸಂಪತ್ತನ್ನು ಗಳಿಸಿ ಉನ್ನತ ಸ್ಥಾನಕ್ಕೇರಬಹುದಾದ ಸಾಧ್ಯತೆಗಳಿದ್ದರೂ ವಿದ್ಯಾರ್ಥಿಗಳು ಗಮನಹರಿಸುತ್ತಿಲ್ಲ. ಆದ್ದರಿಂದ ಕನಿಷ್ಟ ಕಾನೂನಿನ ಅರಿವು ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಅಪರ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಶರತ್ ಚಂದ್ರ ಮಾತನಾಡಿ, ಪ್ರಪಂಚದಲ್ಲಿ ಯಶಸ್ವಿಯಾದವರಿಗೆ ಮಾತ್ರ ಗೌರವ ದೊರಕಲಿದೆ. ಹಣ, ಅಧಿಕಾರ, ಶಕ್ತಿ ಗಳಿಸುವುದರಿಂದ ಯಶಸ್ಸಾಗುವುದಿಲ್ಲ. ಬದಲಾಗಿ ನಾವು ಯಾವುದೇ ರಂಗದಲ್ಲಿದ್ದರೂ ಅಲ್ಲಿ ಉತ್ಕೃಷ್ಟ ಮಟ್ಟಕ್ಕೇರುವುದನ್ನು ಗುರಿಯಾಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅನಪೇಕ್ಷಿತ ಆಕರ್ಷಣೆಗೆ ಒಳಗಾಗದೆ ಉತ್ತಮ ಗುರಿ ಸಾಧನೆಗೆ ನಿರ್ಧರಿಸಿ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕು. ಈ ದಿಕ್ಕಿನಲ್ಲಿ ಪತ್ರಿಕೆಗಳು, ಸದಭಿರುಚಿಯ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡು ಭವಿಷ್ಯದ ಸನ್ನಿವೇಶಗಳನ್ನು ಎದುರಿಸಲು ಸಿದ್ದರಾಗಬೇಕು. ಈ ಮೂಲಕ ಪ್ರತಿಯೊಬ್ಬರೂ ಅಭಿವೃದ್ದಿ ಹೊಂದಿದರೆ ಸಮಾಜ ಹಾಗೂ ದೇಶ ತನ್ನಿಂತಾನೇ ಅಭಿವೃದ್ದಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ವೆಂಕಟೇಶ್, ಬಿ.ಪಿ.ಪುಟ್ಟಸ್ವಾಮಿ, ನಂದೀಶ್, ಕಾಲೇಜಿನ ಪ್ರಾಂಶುಪಾಲ ಕೆ.ಮಲ್ಲೇಶ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಹೇಮಲತಾ, ಅರ್ಥಶಾಸ್ತ್ರ ವಿಭಾಗದ ಚಾಮರಾಜು, ನ್ಯಾಯಾಲಯ ಸಿಬ್ಬಂದಿ ಉಮೇಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News