ವಿಜ್ಞಾನ-ಇಂಜಿನಿಯರಿಂಗ್ ‘ಪಿಎಚ್‌ಡಿ’ ವಿದ್ಯಾರ್ಥಿಗಳಿಗೆ ಶಿಷ್ಯವೇತನ: ಸಚಿವ ಎಂ.ಆರ್.ಸೀತಾರಾಮ್

Update: 2018-02-28 12:41 GMT

ಬೆಂಗಳೂರು, ಫೆ. 28: ವಿಜ್ಞಾನ ಮತ್ತು ಎಂಜಿನಿಯರಿಂಗ್ ‘ಪಿಎಚ್‌ಡಿ’ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಶಿಷ್ಯವೇತನ ನೀಡುವ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿ.ವಿ.ಗಳಲ್ಲಿನ 3 ಸಾವಿರ ಮಂದಿ ಸಂಶೋಧಕರಿಗೆ ಶಿಷ್ಯವೇತನ ನೀಡಲು 3 ಕೋಟಿ ರೂ.ಮೀಸಲಿಡಲಾಗಿದೆ. ಮೊತ್ತ ಮೊದಲಬಾರಿಗೆ ಸಂಶೋಧಕರನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರ ಹೊಸ ಯೋಜನೆ ರೂಪಿಸಿದೆ ಎಂದು ಹೇಳಿದರು.

ಸಂಚಾರಿ ತಾರಾಲಯ: ಸಂಚಾರಿ ತಾರಾಲಯ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಇನ್ನೂ 7 ಹೊಸ ಸಂಚಾರಿ ತಾರಾಲಯ ವಾಹನಗಳನ್ನು ಖರೀದಿಸಲು ಉದ್ದೇಶಿಸಿದ್ದು, ನಾಳೆಯಿಂದಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಸಂಚಾರಿ ತಾರಾಲಯ ವಾಹನ ಖರೀದಿಗೆ 1.17 ಕೋಟಿ ರೂ. ವೆಚ್ಚವಾಗಲಿದ್ದು, ವಾಹನದ ಜತೆಗೆ ಅತ್ಯಾಧುನಿಕ ಪ್ರೊಜೆಕ್ಷನ್ ಸಿಸ್ಟಮ್, ಡೂಮ್‌ಗಳು ಸೇರಿ ಇನ್ನಿತರ ಪರಿಕರಗಳಿರುತ್ತದೆ. ಈಗಾಗಲೇ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ವ್ಯಾಪ್ತಿಯಲ್ಲಿ 5ಸಂಚಾರಿ ತಾರಾಲಯ ವಾಹನಗಳಿದ್ದು, 1.50ಲಕ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಡ್ರೋಣ್‌ಗೆ ಉತ್ತೇಜನ: ಮಾನವ ರಹಿತ ವೈಮಾನಿಕ ವ್ಯವಸ್ಥೆ/ಡ್ರೋಣ್ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು 20 ಕೋಟಿ ರೂ.ಮೀಸಲಿಟ್ಟಿದ್ದು, ಡ್ರೋಣ್ ಉತ್ಪಾದನೆಗೆ ಸಹಾಯಧನ ನೀಡಲಾಗುವುದು ಎಂದು ಸೀತಾರಾಮ್ ತಿಳಿಸಿದರು.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮತ್ತೊಂದು ದೊಡ್ಡ ಮಟ್ಟದ 15 ಮೀಟರ್ ವ್ಯಾಸವುಳ್ಳ ಡೂಮ್ ಒಳಗೊಂಡ ಸುಸಜ್ಜಿತ ತ್ರಿಡಿ ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆ ಹೊಂದಿರುವ ತಾರಾಲಯವನ್ನು 22 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ವಿವರ ನೀಡಿದರು.

ವೈಜ್ಞಾನಿಕ ಅರಿವು: ರಾಜ್ಯದ ಜನರಲ್ಲಿ ಮೂಢನಂಬಿಕೆಯನ್ನು ಕಡಿಮೆ ಮಾಡಿ ವಿಜ್ಞಾನ, ವೈಜ್ಞಾನಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಸುಮಾರು 1200 ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಪಿಲಿಕುಳ ತಾರಾಲಯ ಲೋಕಾರ್ಪಣೆ:
‘ಮಂಗಳೂರಿನ ಪಿಳಿಕುಳ ನಿಸರ್ಗಧಾಮದಲ್ಲಿ 37.50 ಕೋಟಿ ರೂ.ವೆಚ್ಚದಲ್ಲಿ ಹೊಸದಾಗಿ ಸ್ಥಾಪಿಸಿರುವ ಅತ್ಯಾಧುನಿಕ ಡಿಜಿಟಲ್ ಹೈಬ್ರಿಡ್ ತಾರಾಲಯ ಮಾ.1ಕ್ಕೆ ಉದ್ಘಾಟಿಸಲಾಗುವುದು. ವಾರ್ಷಿಕ 6ಲಕ್ಷ ಮಂದಿ ತಾರಾಲಯ ವೀಕ್ಷಿಸುತ್ತಿದ್ದು, ಈ ಸಂಖ್ಯೆ 8ರಿಂದ 9ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ’
-ಎಂ.ಆರ್.ಸೀತಾರಾಂವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News