ಮಹಾದಾಯಿ ವಿವಾದ ಇತ್ಯರ್ಥಕ್ಕೆ ಮೋದಿ ಮುಂದಾಗಲಿ: ಪಿಜಿಆರ್ ಸಿಂಧ್ಯಾ

Update: 2018-02-28 12:56 GMT

ಬೆಂಗಳೂರು, ಫೆ. 28: ಪ್ರಧಾನಿ ಮೋದಿಯವರು ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ, ಹಸಿರು ಶಾಲು ಹೊದ್ದು ಸಂತರ ಹೆಸರೇಳುವುದರಿಂದ ರಾಜ್ಯದ ಜನರಿಗೆ ಯಾವುದೇ ಅನುಕೂಲವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿಜಿಆರ್ ಸಿಂಧ್ಯಾ ಟೀಕಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದ ನಾಲ್ಕು ಬಜೆಟ್‌ಗಳಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ನ್ಯಾಯಬದ್ಧವಾಗಿ ದೊರೆಯುವ ಪಾಲನ್ನಷ್ಟೇ ನೀಡಿದೆ ಎಂದ ಅವರು, ನೆರೆ ರಾಜ್ಯಗಳನ್ನು ಎತ್ತಿಕಟ್ಟುವುದನ್ನು ಬಿಟ್ಟು ಸೌಹಾರ್ದದಿಂದ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕೆಂದು ಕೋರಿದರು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾನೂನು ನೀರಾವರಿ ತಜ್ಞರು ಹಾಗೂ ವಿಪಕ್ಷಗಳ ನಾಯಕರನ್ನೊಳಗೊಂಡ ಸಭೆ ಕರೆದು ಸಮಾಲೋಚಿಸಬೇಕು ಎಂದ ಅವರು, ಸುಪ್ರೀಂ ಕೋರ್ಟಿನ ಅಂತಿಮ ತೀರ್ಪಿನಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಸಂಶಯ ವ್ಯಕ್ತಪಡಿಸಿದರು.

ಮೈತ್ರಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್‌ಪಿ ಮತ್ತು ಎನ್‌ಸಿಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ಓವೈಸಿ ಜತೆ ಮಾತುಕತೆ ನಡೆಸಿದ್ದು, ಈ ಸಂಬಂಧ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News