ಚುನಾವಣೆಗೆ ಸ್ಪರ್ಧಿಸದಿರಲು ಸಿ.ಎಂ. ಇಬ್ರಾಹಿಂ ನೀಡಿದ ಕಾರಣ ಏನು ಗೊತ್ತೇ ?

Update: 2018-02-28 13:12 GMT

ಬೆಂಗಳೂರು, ಫೆ. 28: ಪ್ರಸ್ತುತ ರಾಜಕಾರಣದಲ್ಲಿ ಸಜ್ಜನರಿಗೆ ಕಾಲವಿಲ್ಲ. ಹೀಗಾಗಿ, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ ಹೇಳಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ವಿಶ್ವಪರ್ಯಟನ ಕನ್ನಡ ಮತ್ತು ಇಂಗ್ಲಿಷ್ ಬಳಗ, ಹಿರಿಯ ಪತ್ರಕರ್ತರ ವೇದಿಕೆ ಹಾಗೂ ಸಿವಿಜಿ ಪಬ್ಲಿಕೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ.ಎನ್.ಜಿ. ಕೋಟೇಶ್ ಅವರ ‘ಎಷ್ಟು ಚಕ್ರ ಭಾರತಾಂಬೆ ನಿನ್ನ ಹಿರಿಯ ತೇರಿಗೆ’ ಹಾಗೂ ‘ವಿಶ್ವಾಂತರಾಳ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಸಜ್ಜನರಿಗೆ ಕಾಲವಿಲ್ಲ. ಮಹಾತ್ಮಾ ಗಾಂಧೀಜಿ ಚುನಾವಣೆಗೆ ನಿಂತರೂ 10 ಕೋಟಿ ಖರ್ಚು ಮಾಡಬೇಕಾದ ಸ್ಥಿತಿಯಲ್ಲಿದ್ದೇವೆಂದು ವಿಷಾದ ವ್ಯಕ್ತಪಡಿಸಿದರು.

ಮಠದಲ್ಲಿ ಓದಿದ್ದನ್ನು ನೆನಪಿಸಿಕೊಂಡ ಇಬ್ರಾಹೀಂ, ಶಿಕ್ಷಣ ನೀಡಬೇಕಾದ ಸಂಸ್ಥೆಗಳು ಇಂದು ಹಣಗಳಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇನ್ನು ಇತ್ತೀಚಿನ ದಿನಗಳಲ್ಲಿ ಗುರು-ಶಿಕ್ಷಕರು ಒಟ್ಟಿಗೆ ಬಾರಿನಲ್ಲಿ ಕುಳಿತು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಶಿಕ್ಷಣದ ಗುಣಮಟ್ಟ ಎತ್ತ ಸಾಗುತಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಹೇಳಿದರು.

ಭಾರತ ಅನೇಕತೆಯಲ್ಲೇ ಏಕತೆ ಹೊಂದಿದ ದೇಶ. ಇಲ್ಲಿ ರಾಮರಾಜ್ಯ ಸ್ಥಾಪಿಸುತ್ತೇವೆ ಎನ್ನುತ್ತಾರೆ, ಬೇಡ ಎನ್ನಲಾಗುವುದಿಲ್ಲ. ರಾಮರಾಜ್ಯವಾದರೆ ಯಾರು ಬೇಡವೆನ್ನುತ್ತಾರೆ ಎಂದ ಅವರು ಮೋದಿ ಬಗ್ಗೆ ನಮಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಅವರ ಜನವಿರೋಧಿ ಯೋಜನೆಳ ಬಗ್ಗೆ ಅಸಮಾಧಾನವಿದೆ ಎಂದರು.

ಡಾ.ಎನ್.ಜಿ.ಕೋಟೇಶ್ ನನ್ನ ಹಳೆಯ ಸ್ನೇಹಿತ. ಆತನ ಎರಡು ಪುಸ್ತಕಗಳು ಇಂದು ಬಿಡುಗಡೆಯಾಗಿವೆ. ಆತನ ಪುಸ್ತಕಗಳು ದಾಖಲೆ ನಿರ್ಮಿಸಲಿ ಎಂದು ಶುಭ ಹಾರೈಸಿದರು.

ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, 'ಎಷ್ಟು ಚಕ್ರ ಭಾರತಾಂಬೆ ನಿನ್ನ ಹಿರಿಯ ತೇರಿಗೆ' ಹಾಗೂ 'ವಿಶ್ವಾಂತರಾಳ' ಪುಸ್ತಕಗಳು ಪ್ರವಾಸ ಮತ್ತು ದೇವಸ್ಥಾನ ಕುರಿತಾಗಿ ವಿಶೇಷವಾಗಿದೆ. ಸಂಶೋಧನಾತ್ಮಕವಾದ ಲೇಖನಗಳು ಮತ್ತು ಅನುಭವವನ್ನು ವಿಸ್ತರಿಸುವ ಹಾಗೂ ಒಳನೋಟ ಕೊಡುವಂತಹ ಲೇಖನಗಳಾಗಿವೆ. ಜೊತೆಗೆ ಹೊಸದಾಗಿ ಪ್ರಯಾಣ ಮಾಡಬಯಸುವವರಿಗೆ ಉತ್ತಮ ಅಂಶಗಳನ್ನು ಒದಗಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ನಟ ರಾಜೇಶ್, ಡಾ.ಎನ್.ಬಿ. ಕೋಟೇಶ್ ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಡಾ. ಬಿ.ಕೆ. ರವಿ, ಹಿರಿಯ ಪತ್ರಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಆರ್.ಸಿ. ಸಾಂಬ ಸದಾಶಿವರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

ಸಮಾಜದಲ್ಲಿ ರಾಜಕೀಯ ಕುರ್ಚಿಗಾಗಿ ಹಿಂದೂ, ಮುಸ್ಲಿಂ ಎಂಬ ಕಂದಕ ನಿರ್ಮಿಸಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ನನಗೆ 8 ಜನ ಹೆಣ್ಣು ಮಕ್ಕಳಿದ್ದಾರೆ. ಅವರ ಸ್ನೇಹಿತರು ಮನೆಗೆ ಬರುತ್ತಿರುತ್ತಾರೆ. ಅವರ ಗೆಳೆತನದಲ್ಲಿ ನಾನೆಂದೂ ಹಿಂದೂ, ಮುಸ್ಲಿಂ ಎಂಬ ಭೇದ ಕಂಡಿಲ್ಲ.

-ಸಿಎಂ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News