ಬಿಜೆಪಿ ನಾಯಕರು ಸಂವಿಧಾನ ಬದಲಿಸುವ ಹಿಂದಿನ ಉದ್ದೇಶ ಬಹಿರಂಗಪಡಿಸಲಿ: ಪ್ರಕಾಶ್ ಅಂಬೇಡ್ಕರ್

Update: 2018-02-28 13:23 GMT

ಬೆಂಗಳೂರು, ಫೆ. 28: ಭಾರತೀಯ ಜನತಾ ಪಕ್ಷದ ನಾಯಕರು ಸಂವಿಧಾನ ಬದಲಿಸುತ್ತೇವೆ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ದೇಶದಲ್ಲಿ ಮನುಸ್ಮತಿಯನ್ನು ಮರು ಸ್ಥಾಪಿಸುವ ಹುನ್ನಾರ ಮಾಡುತ್ತಿದ್ದಾರೆ. ಹೀಗಾಗಿ, ಸಂವಿಧಾನ ಬದಲಿಸುವ ಹಿಂದಿರುವ ಉದ್ದೇಶವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬೇರೆ ದಾರಿ ಕಾಣುತ್ತಿಲ್ಲ. ಆದುದರಿಂದ ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳುವ ಸಲುವಾಗಿ ಮಾಧ್ಯಮವನ್ನು ಬಳಕೆ ಮಾಡಿಕೊಂಡು ಪ್ರಚಾರ ಪಡೆಯಲು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ ಮಾತನಾಡುವ ಬಿಜೆಪಿ, ಸಂವಿಧಾನ ಬದಲಾವಣೆಯ ಹಿಂದಿನ ಉದ್ದೇಶ ಬಹಿರಂಗಪಡಿಸಬೇಕು ಎಂದು ಕರೆ ಆಗ್ರಹಿಸಿದರು.

ಚುನಾವಣೆ ಘೋಷಣೆಗೂ ಪೂರ್ವದಲ್ಲಿ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಹಾಗೂ ದೇಶ ಉಳಿಸಿ ಎಂಬ ಸಮಾವೇಶ ಮಾಡುವ ಅಗತ್ಯವಿದೆ. ಈ ಮೂಲಕ ಬಿಜೆಪಿಗೆ ಸೂಕ್ತ ಎಚ್ಚರಿಕೆ ನೀಡಬೇಕಿದೆ. ಕರ್ನಾಟಕದ ಚುನಾವಣೆಗೆ ಮೂರು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಹೇಳಿವೆ. ಜೆಡಿಎಸ್‌ನವರು ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ರಾಜ್ಯದ ಶೇ.30ರಿಂದ 32ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಮಾನ್ಯತೆ ಯಾವುದೇ ಪಕ್ಷದಲ್ಲಿ ನೀಡಿಲ್ಲ. ಈ ಸಮುದಾಯಗಳು ಅಸಂಘಟಿವಾಗಿರುವುದರಿಂದ ರಾಜಕೀಯ ಪಕ್ಷಗಳು ಮಾನ್ಯತೆ ನೀಡುತ್ತಿಲ್ಲ. ಹಿಂದುಳಿದವರಿಗೆ ಮಾನ್ಯತೆ ನೀಡುವುದೇ ರಾಜಕೀಯ ಪಕ್ಷದ ಪ್ರಮುಖ ಅಜೆಂಡವಾಗಬೇಕು ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಜಾತೀಯತೆ ಹೆಚ್ಚಾಗುತ್ತಿದೆ ಎಂದ ಅವರು, ಪ್ರಬಲ ದಲಿತ ನಾಯಕರು ಎಂದೆನಿಸಿಕೊಂಡಿರುವ ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಇನ್ನಿತರೆ ದಲಿತ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಿಲ್ಲ. ಆದರೂ, ಅವರ ಸುಳ್ಳು ಭರವಸೆಗಳ ನಡುವೆ ದಲಿತ ಸಮುದಾಯ ಬಿಜೆಪಿ ಕಡೆಗೆ ವಾಲುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಹಾಗೂ ಮುಸ್ಲಿಂ ಸಮುದಾಯಗಳನ್ನು ಕಾಂಗ್ರೆಸ್ ಪಕ್ಷ ಗಣನೆಗೆ ತೆಗೆದುಕೊಂಡು ಮುನ್ನಡೆಯಬೇಕು. ಇಲ್ಲದಿದ್ದರೆ, ಕರ್ನಾಟಕ ಕೋಮುವಾದಿಗಳ ಕೈಗೆ ಸೇರುತ್ತದೆ. ನಾಲ್ಕನೇ ರಂಗ ರೂಪಗೊಳ್ಳುವ ಸೂಕ್ತ ಸಂದರ್ಭ ಈಗಿಲ್ಲ. ಆದುದರಿಂದ ಕಾಂಗ್ರೆಸ್ ಎಲ್ಲರನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News