ಹಿಂದೂಧರ್ಮ ತ್ಯಜಿಸಿ ಬೌದ್ಧದಮ್ಮಕ್ಕೆ ಮತಾಂತರಗೊಂಡ 58 ದಲಿತ ಕುಟುಂಬಗಳು

Update: 2018-02-28 14:24 GMT

ಕಲಬುರಗಿ, ಫೆ.28: ಸವರ್ಣೀಯರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದ 58 ದಲಿತ ಕುಟುಂಬಗಳ ಸದಸ್ಯರು ಹಿಂದೂ ಧರ್ಮವನ್ನು ತ್ಯಜಿಸಿ ಸಾಮೂಹಿಕವಾಗಿ ಬೌದ್ಧದಮ್ಮಕ್ಕೆ ಮತಾಂತರಗೊಂಡರು.

ಬುಧವಾರ ಕೊಂಡಗೂಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ದಲಿತ ಸಮುದಾಯದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಶ್ವೇತವರ್ಣದ ಉಡುಪು ಧರಿಸಿ ‘ಅಸ್ಪ್ರಶ್ಯರ ನಡಿಗೆ ಬುದ್ಧನೆಡೆಗೆ’ ಘೋಷಣೆಯಡಿ ಬೌದ್ಧದಮ್ಮಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಹೊಸದಿಲ್ಲಿ ಹಾಗೂ ಕಲಬುರಗಿ ಬುದ್ಧ ವಿಹಾರದಿಂದ ಆಗಮಿಸಿದ್ದ ಬೌದ್ಧಬಿಕ್ಕುಗಳು ಬೌದ್ಧದಮ್ಮ ದಿಕ್ಷೆಯನ್ನು ಬೋಧಿಸಿದರು. ಇದೇ ವೇಳೆ ಗ್ರಾಮದ ದಲಿತರು ಬುದ್ಧನ ಪುತ್ಥಳಿ ಹಾಗೂ ಭಾವಚಿತ್ರಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.

ಬೌದ್ಧದಮ್ಮ ಸ್ವೀಕರಿಸಿದ ಬಳಿಕ ಮಾತನಾಡಿದ ದಲಿತ ಸೇನೆ ರಾಜಾಧ್ಯಕ್ಷ ಹಣಮಂತ ಯಳಸಂಗಿ, ದಲಿತರು ಜಾತಿ ದೌರ್ಜನ್ಯದ ವಿರುದ್ಧ ಪ್ರಕರಣ ದಾಖಲಿಸುವುದು, ಕೋರ್ಟ್ ಮೆಟ್ಟಿಲೇರುವುದನ್ನು ಬಿಟ್ಟು ಹಿಂದೂಧರ್ಮ ತ್ಯಜಿಸಿ ಬೌದ್ಧ ದಮ್ಮಕ್ಕೆ ಮತಾಂತರಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

58 ದಲಿತ ಕುಟುಂಬಗಳ ಸದಸ್ಯರು ಸಾಮೂಹಿಕವಾಗಿ ಇಂದು ಹಿಂದೂಧರ್ಮ ತ್ಯಜಿಸಿ ಬೌದ್ಧದಮ್ಮ ಸ್ವೀಕರಿಸಿದ್ದಾರೆ. ಇದರಿಂದ ಈ ಗ್ರಾಮದ ದಲಿತರಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಂತೆ ಆಗಿದೆ. ಜಾತಿ ದೌರ್ಜನ್ಯದ ವಿರುದ್ಧ ಎಲ್ಲ ದಲಿತರು ಹಿಂದೂಧರ್ಮ ತ್ಯಜಿಸಿ ಬೌದ್ಧದಮ್ಮದತ್ತ ಸಾಗಬೇಕು ಎಂದು ಯಳಸಂಗಿ ಕರೆ ನೀಡಿದರು.

ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ವಿಠ್ಠಲ್ ದೊಡ್ಡಮನಿ, ದಿನೇಶ್ ದೊಡ್ಡಮನಿ, ಸಂತೋಷ್, ನಾಗೇಶ್ ಕೊಳ್ಳಿ, ನಾಗೇಂದ್ರ ಜವಳಿ, ಹುಸನಪ್ಪ ತಳಕೇರಿ ಸೇರಿದಂತೆ ಗ್ರಾಮದ ದಲಿತ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

ಘಟನೆಯ ಹಿನ್ನೆಲೆ: ಜಿಲ್ಲೆಯ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಗ್ರಾಮದೇವ ದ್ಯಾಮವ್ವನ ಜಾತ್ರೆಯ ತೇರು ಎಳೆಯುವ ವೇಳೆ ಉಂಟಾದ ನೂಕು-ನುಗ್ಗಲು ಜಾತಿ ಸಂಘರ್ಷಕ್ಕೆ ತಿರುಗಿತ್ತು. ಅನಂತರ ದಲಿತ ಮತ್ತು ಸವರ್ಣೀಯರ ಮಧ್ಯೆ ನಡೆದ ಘರ್ಷಣೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರತಿ 3 ವರ್ಷಗಳಿಗೊಮ್ಮೆ ಗ್ರಾಮದೇವತೆ ಜಾತ್ರೆಯನ್ನು ದಲಿತ ಮತ್ತು ಸವರ್ಣೀಯರು ಸೇರಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ, ಫೆ.9ರಂದು ಸಂಜೆ ದಲಿತರು ಪ್ರಾಣಿ ಬಲಿ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿ ತೇರು ಎಳೆಯಲು ಅವಕಾಶ ಕೋರಿದ್ದರು. ಆದರೆ ಇದನ್ನು ಸವರ್ಣೀಯರು ವಿರೋಧಿಸಿದ್ದರು. ನಂತರ ಸಂಘರ್ಷವೇರ್ಪಟ್ಟಿತ್ತು. ಇದರಿಂದ ಬೇಸತ್ತ ದಲಿತರು ತಮ್ಮ ಮನೆಯಲ್ಲಿದ್ದ ದೇವರ ಫೋಟೋಗಳನ್ನು ಬೀದಿಗೆಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.

"ಸಾಮಾಜಿಕ ಬಹಿಷ್ಕಾರ, ದೇವಸ್ಥಾನ-ಹೊಟೇಲ್ ಪ್ರವೇಶ ನಿರಾಕರಣೆಯಂತಹ ಘೋರ ಅನ್ಯಾಯವನ್ನು ಇನ್ನೂ ಎಷ್ಟು ದಿನ ಸಹಿಸಬೇಕು. ಇತ್ತೀಚೆಗೆ ನಡೆದ ಗ್ರಾಮ ದೇವತೆ ಜಾತ್ರೆ ವೇಳೆ ತೇರು ಏಳೆಯಲು ದಲಿತರಿಗೆ ಅವಕಾಶವಿಲ್ಲ. ಹೀಗಾಗಿ ಬೇಸತ್ತು ಬೌದ್ಧದಮ್ಮಕ್ಕೆ ಮತಾಂತರಗೊಂಡಿದ್ದು ಖುಷಿ ತಂದಿದೆ"
-ಹುಸನಪ್ಪ ತಳಕೇರಿ, ದಲಿತ ಸೇವೆ ತಾಲೂಕು ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News