ಭೀಮಾ- ಕೊರೇಗಾಂವ್ ಗಲಭೆ ಆರೋಪಿಗೆ ಪದ್ಮ ಪ್ರಶಸ್ತಿ ನೀಡಲು ಮಹಾರಾಷ್ಟ್ರ ಸರ್ಕಾರ ಶಿಫಾರಸು

Update: 2018-03-01 04:00 GMT

ಮುಂಬೈ, ಮಾ.1: ಸಾಂಗ್ಲಿಯ ಮನೋಹರ ಅಲಿಯಾಸ್ ಸಂಭಾಜಿ ಭಿಡೆ ಎಂಬ ಬಲಪಂಥೀಯ ಮುಖಂಡ ಹಾಗೂ ಭೀಮಾ- ಕೊರೇಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗೆ ಪದ್ಮ ಪ್ರಶಸ್ತಿ ನೀಡಲು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಶಿಫಾರಸು ಮಾಡಿರುವುದು ಬೆಳಕಿಗೆ ಬಂದಿದೆ.

ಹತ್ತು ಮಂದಿ ಸಚಿವರ ಉನ್ನತಾಧಿಕಾರ ಸಮಿತಿ ಪದ್ಮಶ್ರೀ ಪ್ರಶಸ್ತಿಗಾಗಿ ಭಿಡೆ ಅವರ ಹೆಸರನ್ನು 2016ರಲ್ಲಿ ಶಿಫಾರಸು ಮಾಡಿತ್ತು. ಕುತೂಹಲದ ಸಂಗತಿಯೆಂದರೆ ಈ ವ್ಯಕ್ತಿ ಪ್ರಶಸ್ತಿಗೆ ಅರ್ಜಿ ಸಲ್ಲಿಸದಿದ್ದರೂ, ಸಮಿತಿ ತನ್ನ ವಿವೇಚನೆಯನ್ನು ಬಳಸಿಕೊಂಡು ಈ ಶಿಫಾರಸು ಮಾಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ರಾಜ್ಯ ಸರ್ಕಾರದ ಶಿಷ್ಟಾಚಾರ ವಿಭಾಗದಿಂದ ಈ ಸಂಬಂಧದ ದಾಖಲೆಗಳನ್ನು ’ಹಿಂದೂಸ್ತಾನ್ ಟೈಮ್ಸ್’ ಪಡೆದಿದೆ.

ಭಿಡೆ ಗುರೂಜಿ ಎಂದು ಕರೆಯಲ್ಪಡುವ 84 ವರ್ಷ ವಯಸ್ಸಿನ ಸಂಭಾಜಿ ಭಿಡೆ ವಿವಾದಾತ್ಮಕ ವ್ಯಕ್ತಿ. ಈತನ ಹೆಸರು ಮಿಲಿಂದ್ ಏಕಬೋಟೆ ಜತೆಗೆ ಭೀಮಾ- ಕೊರೆಗಾಂವ್ ಗಲಭೆಯ ಎಫ್‌ಐಆರ್‌ನಲ್ಲಿದೆ. ಗ್ರಾಮಸ್ಥರಿಗೆ ಪ್ರಚೋದನೆ ನೀಡಿ, ಪೇಶ್ವಾಗಳನ್ನು ಸೋಲಿಸಿದ ಮಹಾರ್ ರೆಜಿಮೆಂಟ್ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ದಲಿತರ ಗುಂಪಿನ ಮೇಲೆ ದಾಳಿ ಮಾಡುವಂತೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ.

ಆರೆಸ್ಸೆಸ್ಸಿನ ಮಾಜಿ ಕಾರ್ಯಕರ್ತ ಭಿಡೆ, ಶಿವ ಪ್ರತಿಷ್ಠಾನ ಹಿಂದೂಸ್ತಾನ ಎಂಬ ಸಂಘಟನೆ ಹುಟ್ಟುಹಾಕಿದ್ದಾನೆ. ಮರಾಠಾ ರಾಜ ಶಿವಾಜಿ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಪ್ರತಿಷ್ಠಾನ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಪಶ್ಚಿಮ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಯುವಕರು ಇವರ ಅನುಯಾಯಿಗಳಾಗಿದ್ದಾರೆ.

ಹತ್ತು ಮಂದಿ ಸಚಿವರು ಹಾಗೂ ಶಿಷ್ಟಾಚಾರ ವಿಭಾಗದ ಕಾರ್ಯದರ್ಶಿ ಸೇರಿದಂತೆ 11 ಸದಸ್ಯರ ಸಮಿತಿ, ಪ್ರತೀ ವರ್ಷ ಸಲ್ಲಿಕೆಯಾಗುವ ಅರ್ಜಿಗಳ ಪೈಕಿ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಅರ್ಜಿ ಸಲ್ಲಿಸದವರನ್ನು ಶಿಫಾರಸು ಮಾಡಲೂ ವಿವೇಚನಾ ಅಧಿಕಾರ ಈ ಸಮಿತಿಗೆ ಇರುತ್ತದೆ. ಗೃಹ ನಿರ್ಮಾಣ ಖಾತೆ ಸಚಿವ ಪ್ರಕಾಶ್ ಮೆಹ್ತಾ ನೇತೃತ್ವದ ಸಮಿತಿ ಭಿಡೆ ಹಾಗೂ ಇತರ 15 ಮಂದಿಯ ಹೆಸರು ಶಿಫಾರಸು ಮಾಡಿ, 2015ರ ಅಕ್ಟೋಬರ್ 12ರಂದು ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ.

ದಲಿತ ಹೋರಾಟಗಾರ ಡಾ.ಪ್ರಕಾಶ್ ಅಂಬೇಡ್ಕರ್ ಸರ್ಕಾರದ ಈ ಕ್ರಮವನ್ನು ಬೌದ್ಧಿಕ ದಿವಾಳಿತನ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News