ಶಿವಮೊಗ್ಗ: ನವೀಕೃತ ಶರಾವತಿ ವಿದ್ಯುದಾಗಾರ ಲೋಕಾರ್ಪಣೆ

Update: 2018-03-02 18:29 GMT

ಶಿವಮೊಗ್ಗ,ಮಾ.2: ಬೆಂಕಿ ಅನಾಹುತದಿಂದ ಹಾನಿಗೀಡಾಗಿದ್ದ ಶರಾವತಿ ವಿದ್ಯುದಾಗಾರದ ನವೀಕೃತ ಘಟಕವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.

ನೂತನ ವಿದ್ಯುದಾಗಾರ ಲೋಕಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಅನಾಹುತ ಸಂಭವಿಸಿದ ಕೇವಲ 178 ದಿನಗಳ ಒಳಗಾಗಿ ಎಲ್ಲಾ 10ಘಟಕಗಳು ಕಾರ್ಯಾರಂಭ ಮಾಡಿರುವುದು ದಾಖಲೆಯಾಗಿದೆ. ನಮ್ಮ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವತ್ತ ದೃಢ ಹೆಜ್ಜೆ ಇರಿಸಿದೆ. ಈ ವರ್ಷದ ಡಿಸೆಂಬರ್ ಒಳಗಾಗಿ ನಮ್ಮ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲಿದೆ. ಪಾವಗಢದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ವಿದ್ಯುತ್ ಪಾರ್ಕ್ ಲೋಕಾರ್ಪಣೆ ಮಾಡಿದ್ದೇವೆ. ಇದೇ ರೀತಿ ಬೆಂಗಳೂರು ಹೊರವಲಯದ ಯಲಹಂಕದಲ್ಲಿ 1650 ಕೋಟಿ ರೂ. ವೆಚ್ಚದಲ್ಲಿ 375 ಮೆಗಾ ವ್ಯಾಟ್ ಗ್ಯಾಸ್ ಸ್ಟೇಷನ್ ಮುಂದಿನ ಒಂದೆರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಪ್ರಸ್ತುತ ಕೇಂದ್ರದಿಂದ ಕಲ್ಲಿದ್ದಲು ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣ ಸುಮಾರು 900 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದರು.

ಶರಾವತಿ ನೀರನ್ನು ಮರು ಬಳಕೆ ಮಾಡಿ ಮತ್ತೆ ವಿದ್ಯುತ್ ಉತ್ಪಾದಿಸುವ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಲು ಕೇಂದ್ರ ಸರ್ಕಾರದ ಏಜೆನ್ಸಿಗೆ ಈಗಾಗಲೇ ಆದೇಶ ನೀಡಲಾಗಿದೆ. ಕಡಿಮೆ ವೆಚ್ಚದಲ್ಲಿ ಈ ಮೂಲಕ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ ಎಂದರು.

ಪುತ್ಥಳಿ ಅನಾವರಣ: ಶರಾವತಿ ವಿದ್ಯುದಾಗಾರವನ್ನು 1964 ಉದ್ಘಾಟಿಸಿದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಯನ್ನು ಸಚಿವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಕರ್ನಾಟಕ ವಿದ್ಯುತ್ ನಿಗಮದ ಸಂಸ್ಥಾಪನಾ ದಿನವನ್ನು ಮುಂದಿನ ವರ್ಷದಿಂದ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದುವರೆಗೆ ಸಂಸ್ಥಾಪನಾ ದಿನವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿತ್ತು. ನಿಗಮದ ಎಲ್ಲಾ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಜತೆ ಸೇರುವ ಅವಕಾಶ ಇದರಿಂದ ಸಿಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ, ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರ ನಾಯಕ, ತಾಂತ್ರಿಕ ನಿರ್ದೇಶಕ ಭಾಸ್ಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News