2100 ರೌಡಿ, ಕೋಮು ಗೂಂಡಾಗಳ ವಿರುದ್ದ ಮುನ್ನೆಚ್ಚರಿಕೆ ಕೇಸ್: ರಾಜ್ಯದಲ್ಲಿಯೇ ಅತ್ಯದಿಕ

Update: 2018-03-03 14:24 GMT

ಶಿವಮೊಗ್ಗ, ಮಾ.3: ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಪೂರ್ವಭಾವಿ ಸಿದ್ದತೆಗಳು ಭರದಿಂದ ನಡೆಯುತ್ತಿವೆ. ಶಾಂತಿ-ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸಮರೋಪಾದಿಯಲ್ಲಿ ತಯಾರಿ ನಡೆಸುತ್ತಿದೆ. ರೌಡಿಗಳು, ಮತೀಯ ಗೂಂಡಾಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮತಗಟ್ಟೆಗಳ ಭದ್ರತೆಗೂ ಏರ್ಪಾಡು ಮಾಡಿಕೊಳ್ಳಲಾರಂಭಿಸಿದೆ. 

ವಿಧಾನಸಭೆ ಚುನಾವಣೆಯ ಕಾರಣದಿಂದಲೇ ಇಲ್ಲಿಯವರೆಗೂ ಸುಮಾರು 2100 ರೌಡಿಗಳು ಹಾಗೂ ಮತೀಯ ಗೂಂಡಾಗಳ ವಿರುದ್ದ ಕ್ರಿಮಿನಲ್ ದಂಡ ಪ್ರಕ್ರಿಯ ಸಂಹಿತೆ (ಸಿ.ಆರ್.ಪಿ.ಸಿ.) ಕಲಂ 107ರ ಅಡಿ ಪೊಲೀಸ್ ಇಲಾಖೆ ಎಫ್‍ಐಆರ್ ದಾಖಲಿಸಿಕೊಂಡಿದೆ. ಈ ಮೂಲಕ ಚುನಾವಣೆಯ ವೇಳೆ ಶಾಂತಿ - ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಕೃತ್ಯಗಳಲ್ಲಿ ಭಾಗಿಯಾದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡುತ್ತಿದೆ. 

ಚುನಾವಣೆಯ ಹಿನ್ನೆಲೆಯಲ್ಲಿ, ಸಾವಿರಾರು ಸಂಖ್ಯೆಯ ರೌಡಿ ಹಾಗೂ ಮತೀಯ ಗೂಂಡಾಗಳ ವಿರುದ್ದ ಕೇಸ್ ದಾಖಲಿಸಿರುವುದರಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಇಲಾಖೆಯ ಕಟ್ಟುನಿಟ್ಟಿನ ಕ್ರಮವು ಪಾತಕ ಲೋಕದಲ್ಲಿ ಸಂಚಲನ ಉಂಟು ಮಾಡಿದ್ದು, ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕಳೆದ ಕೆಲ ತಿಂಗಳುಗಳ ಹಿಂದೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ತಮ್ಮ ಕೆಳಹಂತದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿ ಹಾಗೂ ಮತೀಯ ಗೂಂಡಾಗಳ ವಿರುದ್ದ ಮುನ್ನೆಚ್ಚರಿಕೆ ಕೇಸ್ ದಾಖಲಿಸಬೇಕು. ರೌಡಿ ಪರೇಡ್‍ಗಳನ್ನು ನಡೆಸಬೇಕು. ಚುನಾವಣೆಯ ವೇಳೆ ಕುಕೃತ್ಯಗಳಲ್ಲಿ ಭಾಗಿಯಾಗದಂತೆ ಸ್ಪಷ್ಟ ಸೂಚನೆ ನೀಡುವಂತೆ ತಿಳಿಸಿದ್ದರು. 

ಅದರಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ನಿರಂತರವಾಗಿ ರೌಡಿಗಳ ಪರೇಡ್ ನಡೆಸಲಾಗುತ್ತಿದೆ. ಮುನ್ನೆಚ್ಚರಿಕೆ ಕೇಸ್ ದಾಖಲಿಸಿಕೊಳ್ಳಲಾರಂಭಿಸಿದ್ದಾರೆ. ಕೇಸ್ ದಾಖಲಿಸಿಕೊಂಡ ನಂತರ ಸಂಬಂಧಿಸಿದ ತಹಶೀಲ್ದಾರ್ ಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ. ಇದರ ಆಧಾರದ ಮೇಲೆ ತಹಶೀಲ್ದಾರ್ ಗಳು ಸಂಬಂಧಿಸಿದವರಿಗೆ ಸಮನ್ಸ್ ಕಳುಹಿಸುತ್ತಾರೆ. 

ಅವರನ್ನು ವಿಚಾರಣೆ ನಡೆಸಿ 5 ಲಕ್ಷ ರೂ. ಮೊತ್ತದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಗುತ್ತದೆ. ಚುನಾವಣೆಯ ವೇಳೆ ಏನಾದರೂ ಶಾಂತಿ-ಸುವ್ಯವಸ್ಥೆ ಹದಗೆಡಿಸುವ ಕೃತ್ಯಗಳಲ್ಲಿ ಭಾಗಿಯಾದರೆ 5 ಲಕ್ಷ ರೂ. ಮೊತ್ತದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ಬಂಧಿಸುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

ವ್ಯಾಪಕ ಕ್ರಮ: ಈ ಕುರಿತಂತೆ ಶನಿವಾರ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, 'ಜಿಲ್ಲೆಯಲ್ಲಿ ಸುಗಮ, ಶಾಂತಿಯುತ ವಿಧಾನಸಭೆ ಚುನಾವಣಾ ಪ್ರಕ್ರಿಯೆ ನಡೆಸಲು ಪೊಲೀಸ್ ಇಲಾಖೆಯ ಈಗಾಗಲೇ ನಾನಾ ರೀತಿಯ ಭದ್ರತಾ ಏರ್ಪಾಡುಗಳನ್ನು ಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ರೌಡಿ, ಮತೀಯ ಗೂಂಡಾಗಳ ವಿರುದ್ದವೂ ನಿಯಮಾನುಸಾರ ಮುನ್ನೆಚ್ಚರಿಕೆ ಕೇಸ್ ದಾಖಲಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಸುಮಾರು 2100 ಜನರ ವಿರುದ್ದ ಕೇಸ್ ದಾಖಲಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. 

ಚುನಾವಣಾ ವೇಳೆ ಕಾನೂನು- ವ್ಯವಸ್ಥೆಗೆ ಭಂಗ ಉಂಟಾಗದ ರೀತಿಯಲ್ಲಿ ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಈಗಾಗಲೇ ಇಲಾಖೆ ಮಾಡಿಕೊಂಡಿದೆ. ಎಲ್ಲೆಲ್ಲಿ ಮತದಾರರಿಗೆ ಆಮಿಷವೊಡ್ಡಬಹುದು ಎಂಬುವುದನ್ನು ಕೂಡ ಪರಿಶೀಲಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಯಾವ ರೀತಿಯ ಭದ್ರತಾ ಏರ್ಪಾಡು ಮಾಡಬಹುದು ಎಂಬುದರ ಕುರಿತಂತೆಯೂ ಚರ್ಚೆಗಳು ನಡೆಸಲಾಗುತ್ತಿದೆ. 

ಹಾಗೆಯೇ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಮತಗಟ್ಟೆಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆಯ ನೀಲನಕ್ಷೆ ಕೂಡ ಸಿದ್ದಪಡಿಸಲಾಗಿದೆ. ಚುನಾವಣೆಯ ವೇಳೆ ಜಿಲ್ಲೆಗೆ ಆಗಮಿಸಲಿರುವ ಕೇಂದ್ರಿಯ ಪೊಲೀಸ್ ಪಡೆಯನ್ನು ಎಲ್ಲೆಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಬೇಕಾಗಬಹುದು ಎಂಬುವುದರ ಮಾಹಿತಿಯನ್ನು ಸಿದ್ದಪಡಿಸಿಟ್ಟುಕೊಳ್ಳಲಾಗಿದೆ ಎಂದರು. 

ಮುಂದೆ: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಚುನಾವಣಾ ಪೂರ್ವಭಾವಿ ಸಿದ್ದತೆಗಳಲ್ಲಿ ಮುಂದಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಘೋಷಣೆಗೂ ಮುನ್ನವೇ ಭಾರೀ ಪ್ರಮಾಣದ ಭದ್ರತಾ ಏರ್ಪಾಡುಗಳನ್ನು ಮಾಡಿಕೊಂಡು ಗಮನ ಸೆಳೆಯುತ್ತಿದ್ದು, ಇದು ಹಿರಿಯ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

'ಸಮರೋಪಾದಿ ಸಿದ್ದತೆ'
'ಕಾನೂನು- ಸುವ್ಯವಸ್ಥೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ವಿಧಾನಸಭೆ ಚುನಾವಣೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ರೌಡಿಗಳು, ಮತೀಯ ಗೂಂಡಾಗಳ ವಿರುದ್ದ ಕಾನೂನು ರೀತಿಯ ಎಚ್ಚರಿಕೆ ನೀಡಲಾಗುತ್ತಿದೆ' ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News