ಮಾ.9 ರಿಂದ ಹೊಸ ಚಿತ್ರಗಳ ಬಿಡುಗಡೆ ಇಲ್ಲ: ಸಾ.ರಾ.ಗೋವಿಂದು

Update: 2018-03-03 15:40 GMT

ಬೆಂಗಳೂರು, ಮಾ.3: ಯುಎಫ್‌ಓ ಮತ್ತು ಟ್ಯೂಬ್ ಸಂಸ್ಥೆಗಳ ಜೊತೆಗೆ ಮಾತುಕತೆ ವಿಫಲವಾಗಿರುವುದರಿಂದ ಮಾ.9 ರಿಂದ ಯಾವುದೇ ಹೊಸ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಟ್‌ಲೈಟ್ ಮೂಲಕ ಚಿತ್ರಗಳನ್ನು ಬಿಡುಗಡೆ ಮಾಡುವ ಯುಎಫ್‌ಓ ಮತ್ತು ಟ್ಯೂಬ್ ಸಂಸ್ಥೆಗಳೊಂದಿಗೆ ನಡೆಸಿದ ಸಂಧಾನ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎರಡೂ ಸಂಸ್ಥೆಗಳು ಚಿತ್ರಗಳನ್ನು ಪ್ರಸಾರ ಮಾಡಲು ತೆಗೆದುಕೊಳ್ಳುತ್ತಿದ್ದ ಬೆಲೆಯಲ್ಲಿ ಶೇ.50 ರಷ್ಟು ಕಡಿಮೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ, ಸಂಸ್ಥೆ ಶೇ.9 ರಷ್ಟು ಮಾತ್ರ ಕಡಿಮೆ ಮಾಡಲು ಒಪ್ಪಿದ್ದರು. ಇದರಿಂದಾಗಿ ಚಿತ್ರ ನಿರ್ಮಾಪಕರಿಗೆ ಕಷ್ಟವಾಗಲಿದೆ. ಅಲ್ಲದೆ, ಯಾವುದೇ ಪ್ರಯೋಜನವಾಗುವುದಿಲ್ಲ. ಆದುದರಿಂದ ಹೊಸ ಚಿತ್ರಗಳ ಬಿಡುಗಡೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಮಾ.9 ರಂದು ದುನಿಯಾ 2, ಮುಖ್ಯಮಂತ್ರಿ ಕಳೆದೋದ್ನಪ್ಪ ಚಿತ್ರಗಳು ಸೇರಿದಂತೆ ಸುಮಾರು 6 ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ, ಅವುಗಳನ್ನು ಬಿಡುಗಡೆ ಮಾಡುತ್ತಿಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳೇ ಮುಂದುವರಿಯಲಿದ್ದು, ಯುಎಫ್‌ಓ ಹಾಗೂ ಟ್ಯೂಬ್ ಸಂಸ್ಥೆಗಳಿಗೆ ಹೊರತುಪಡಿಸಿ ಬೇರೆ ಸಂಸ್ಥೆಗಳು ಸ್ಯಾಟಲೈಟ್ ಮೂಲಕ ಚಿತ್ರ ಬಿಡುಗಡೆಗೆ ಮುಂದೆ ಬಂದಿದ್ದು, ಅವುಗಳ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News