ಮುಕ್ತ, ಶ್ರೀಮಂತ ಇಂಡೊ-ಪೆಸಿಫಿಕ್ ಪ್ರದೇಶ ನಿರ್ಮಿಸಲು ಭಾರತ, ವಿಯೇಟ್ನಾಂ ಒಪ್ಪಂದ

Update: 2018-03-03 16:17 GMT

ಹೊಸದಿಲ್ಲಿ, ಮಾ.3: ಸಮರ್ಥ ಮತ್ತು ನಿಯಮ ಆಧಾರಿತ ಪ್ರಾದೇಶಿಕ ಭದ್ರತಾ ನಕ್ಷೆಯೊಂದಿಗೆ ಮುಕ್ತ ಮತ್ತು ಶ್ರೀಮಂತ ಇಂಡೊ-ಪೆಸಿಫಿಕ್ ಪ್ರದೇಶವನ್ನು ನಿರ್ಮಿಸಲು ಭಾರತ ಮತ್ತು ವಿಯೇಟ್ನಾಂ ಶನಿವಾರದಂದು ಒಪ್ಪಂದಕ್ಕೆ ಸಹಿ ಹಾಕಿದವು. ಈ ಬೆಳವಣಿಗೆಯು ಈ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಸೇನಾ ವಿಸ್ತರಣೆಯ ವಿರುದ್ಧ ರವಾನಿಸಲಾಗಿರುವ ಸಂದೇಶವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪರಮಾಣು ಶಕ್ತಿ, ವ್ಯಾಪಾರ ಮತ್ತು ಕೃಷಿಯ ಹೊರತಾಗಿ ತೈಲ ಮತ್ತು ಅನಿಲ ಸಂಶೋಧನೆಯಲ್ಲಿ ಸಹಯೋಗವನ್ನು ಗಟ್ಟಿಗೊಳಿಸುವ ಸಲುವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಯೇಟ್ನಾಂ ಅಧ್ಯಕ್ಷ ಟ್ರಾನ್ ದಯಿ ಕ್ವಾಂಗ್ ಮೂರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಸಾರ್ವಭೌಮತೆ ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸುವಂತಹ ಮುಕ್ತ, ಸ್ವತಂತ್ರ ಮತ್ತು ಶ್ರೀಮಂತ ಇಂಡೊ-ಪೆಸಿಫಿಕ್ ಪ್ರದೇಶವನ್ನು ನಿರ್ಮಿಸಲು ನಾವು ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಉಂಟಾಗಿರುವ ವಿವಾದವನ್ನು ಕುರಿತು ಮಾತನಾಡಿದ ಅಧ್ಯಕ್ಷ ಕ್ವಾಂಗ್, ವಿಯೇಟ್ನಾಂ ಭಾರತ ಆಸಿಯಾನ್ ದೇಶಗಳೊಂದಿಗೆ ಹೊಂದಿರುವ ಬಹುಮುಖ ಸಂಪರ್ಕವನ್ನು ಬೆಂಬಲಿಸುತ್ತದೆ. ವಿವಾದಿತ ಪ್ರದೇಶದಲ್ಲಿ ನೌಕಾಯಾನ ಮತ್ತು ವಿಮಾನ ಹಾರಾಟಕ್ಕೆ ಮುಕ್ತ ಅವಕಾಶವಿರಬೇಕು. ವಿವಾದವನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂದು ತಿಳಿಸಿದ್ದಾರೆ. ಸಂಪನ್ಮೂಲ ಶ್ರೀಮಂತವಾಗಿರುವ ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ವಿಯೇಟ್ನಾಂ ಸೇರಿದಂತೆ ಹಲವು ಆಸಿಯಾನ್ ದೇಶಗಳು ಚೀನಾದೊಂದಿಗೆ ಪ್ರಾದೇಶಿಕ ಭಿನ್ನಾಭಿಪ್ರಾಯವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News