ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೈಡ್ರಾಮಾ: ಮತ್ತೆ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ

Update: 2018-03-03 16:22 GMT

ಶಿವಮೊಗ್ಗ, ಮಾ. 3: ಭಾರೀ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ, ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಅಂತಿಮ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಗದ್ದುಗೆಯು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದೆ. ನಿರೀಕ್ಷಿಸಿದಂತೆ ಮತ್ತೆ ಜೆಡಿಎಸ್ 'ಕಿಂಗ್' ಆಗಿ ಹೊರಹೊಮ್ಮಿದೆ. ಮತ್ತೊಂದೆಡೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದ ಸದಸ್ಯನಿಗೆ ಆ ಪಕ್ಷದ ಯಾವೊಬ್ಬ ಸದಸ್ಯರು ಕೂಡಾ ಬೆಂಬಲ ವ್ಯಕ್ತಪಡಿಸದ ಘಟನೆ ಕೂಡ ನಡೆಯಿತು.

ಶನಿವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆ ಬಿ.ಸಿ.ಎಂ. (ಎ) ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‍ನ ವಿಜಯಲಕ್ಷ್ಮೀ ಪಾಟೀಲ್‍ರವರು ಆಯ್ಕೆಯಾದರು. ಮೈತ್ರಿ ಕೂಟಕ್ಕೆ ಎಸ್‍ಡಿಪಿಐನ ಓರ್ವ ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಕಳೆದ ಬಾರಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿಯಲ್ಲಿ ಭಾಗಿಯಾಗಿದ್ದ ಬಿಜೆಪಿ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಕೂರುವಂತಾಗಿದೆ. ಚುನಾವಣಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಲೋಕೇಶ್, ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಉಪಸ್ಥಿತರಿದ್ದರು.

ಕುತೂಹಲ: ಜೆಡಿಎಸ್-ಕಾಂಗ್ರೆಸ್ ನಾಯಕರ ಮೈತ್ರಿ ಮಾತುಕತೆಯಂತೆ ಮೇಯರ್ ಸ್ಥಾನವು ಜೆಡಿಎಸ್‍ಗೆ ಹಾಗೂ ಉಪ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ನೀಡುವ ಒಪ್ಪಂದ ಮಾಡಿಕೊಂಡಿದ್ದರು. ಉಳಿದಂತೆ ನಾಲ್ಕು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಗಳಲ್ಲಿ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ ಇಬ್ಬರು ಪಕ್ಷೇತರರಿಗೆ, ತಲಾ ಒಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ನೇಮಿಸುವ ನಿರ್ಧಾರ ಮಾಡಲಾಗಿತ್ತು.  ಒಪ್ಪಂದದಂತೆ ಮೇಯರ್ ಸ್ಥಾನಕ್ಕೆ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾಗಿ ನಾಗರಾಜ್ ಕಂಕಾರಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ವಿಜಯಲಕ್ಷ್ಮೀ ಪಾಟೀಲ್‍ರವರು ನಾಮಪತ್ರ ಸಲ್ಲಿಸಿದ್ದರು. ಮತ್ತೊಂದೆಡೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಎಸ್.ರಾಜಶೇಖರ್‍ರವರು ಎರಡು ದಿನ ಮುಂಚಿತವಾಗಿಯೇ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದರು. ಉಳಿದಂತೆ ಬಿಜೆಪಿಯಿಂದ ಮೇಯರ್ - ಉಪ ಮೇಯರ್ ಸ್ಥಾನಗಳಿಗೆ ಕ್ರಮವಾಗಿ ಸುನೀತ ಅಣ್ಣಪ್ಪ ಹಾಗೂ ರೇಣುಕಾ ನಾಗರಾಜ್‍ರವರು ನಾಮಪತ್ರ ಸಲ್ಲಿಸಿದ್ದರು.

ಕಸರತ್ತು: ನಾಮಪತ್ರ ವಾಪಾಸ್ ಪಡೆಯಲು 5 ನಿಮಿಷ ಕಾಲಾವಾಕಾಶ ನೀಡಲಾಗಿತ್ತು. ಮೇಯರ್ ಸ್ಥಾನಕ್ಕೆ ಸಲ್ಲಿಸಿದ್ದ ಉಮೇದುವಾರಿಕೆ ಅರ್ಜಿ ವಾಪಾಸ್ ಪಡೆಯುವಂತೆ ಎಸ್.ರಾಜಶೇಖರ್ ರವರಿಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಪರಿಪರಿಯಾಗಿ ಮನವಿ ಮಾಡಿದರು. ಆದರೆ ಎಸ್.ರಾಜಶೇಖರ್ ಮಾತ್ರ ತಮ್ಮ ಉಮೇದುವಾರಿಕೆ ಅರ್ಜಿ ಹಿಂಪಡೆಯಲು ಸುತಾರಂ ಒಪ್ಪಲಿಲ್ಲ. ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ ಅವಧಿ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು. ಜೊತೆಗೆ ನಿಯಮಾನುಸಾರ ಮೇಯರ್ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ಎಸ್.ರಾಜಶೇಖರ್ ಅಖಾಡದಲ್ಲಿಳಿದುಕೊಂಡಿದ್ದು ಕಾಂಗ್ರೆಸ್-ಜೆಡಿಎಸ್ ಸದಸ್ಯರಲ್ಲಿ ತೀವ್ರ ತಳಮಳ ಸೃಷ್ಟಿಸಿತ್ತು. ಏನಾಗುವುದೊ ಎಂಬ ಆತಂಕ ಆವರಿಸಿತ್ತು. ಚುನಾವಣಾಧಿಕಾರಿಗಳು ಮೊದಲು ಎಸ್.ರಾಜಶೇಖರ್ ರವರಿಗೆ ಬೆಂಬಲ ವ್ಯಕ್ತಪಡಿಸುವ ಸದಸ್ಯರು ಕೈ ಎತ್ತುವಂತೆ ಸೂಚಿಸಿದರು. ಈ ವೇಳೆ ಎಸ್.ರಾಜಶೇಖರ್ ಹೊರತಾಗಿ ಯಾರೊಬ್ಬರು ಕೈ ಎತ್ತಲಿಲ್ಲ. ಅವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದ ಸದಸ್ಯರು 'ಕೈ' ಕೊಟ್ಟಿದ್ದರು. ಇದು ಸ್ವತಃ ರಾಜಶೇಖರ್ ರವರಲ್ಲಿ ಅಚ್ಚರಿ ಮೂಡಿಸಿತ್ತು. ಇನ್ನೊಂದೆಡೆ ಕಾಂಗ್ರೆಸ್-ಜೆಡಿಎಸ್ ಸದಸ್ಯರಲ್ಲಿ ನಿರಾಳ ಭಾವನೆ ಮೂಡಿಸಿತು.

ನಾಗರಾಜ್ ಕಂಕಾರಿಯವರ ಪರವಾಗಿ ಕಾಂಗ್ರೆಸ್‍ನ 13, ಜೆಡಿಎಸ್‍ನ 7, ಎಸ್‍ಡಿಪಿಐನ ಓರ್ವ, ನಾಲ್ವರು ಪಕ್ಷೇತರರು ಸೇರಿದಂತೆ 25 ಸದಸ್ಯರ ಬೆಂಬಲ ವ್ಯಕ್ತವಾಯಿತು. ನಂತರ ಬಿಜೆಪಿ ಅಭ್ಯರ್ಥಿ ಸುನೀತಾ ಅಣ್ಣಪ್ಪ ಪರವಾಗಿ ಆ ಪಕ್ಷದ 12 ಸದಸ್ಯರು ಕೈ ಎತ್ತಿದರು. ಕಾಂಗ್ರೆಸ್ ಸದಸ್ಯ ಎಸ್.ರಾಜಶೇಖರ್ ಕೂಡ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರು. ಬಹುಮತದ ಆಧಾರದ ಮೇಲೆ ನಾಗರಾಜ್ ಕಂಕಾರಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಗಳು ಪ್ರಕಟಿಸಿದರು.

ನಂತರ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ನಡೆಯಿತು. ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಜಯಲಕ್ಷ್ಮೀ ಪಾಟಿಲ್ ಪರವಾಗಿ ಮೇಯರ್ ಸ್ಥಾನಕ್ಕೆ ಕಣಕ್ಕಿಳಿದಿದ್ದ ಎಸ್.ರಾಜಶೇಖರ್ ಸೇರಿದಂತೆ ಕಾಂಗ್ರೆಸ್‍ನ 14, ಜೆಡಿಎಸ್‍ನ 7, ಎಸ್‍ಡಿಪಿಐನ 1 ಹಾಗೂ ನಾಲ್ವರು ಪಕ್ಷೇತರರು ಕೈ ಎತ್ತುವ ಮೂಲಕ ಬೆಂಬಲಿಸಿದರು. ಇವರಿಗೆ 26 ಸದಸ್ಯರ ಬೆಂಬಲ ವ್ಯಕ್ತವಾಯಿತು. ಮೇಯರ್ ಗಿಂತ ಒಂದು ಹೆಚ್ಚಿನ ಮತ ಇವರಿಗೆ ಸಂದಾಯವಾಯಿತು. ನಂತರ ಬಿಜೆಪಿ ಅಭ್ಯರ್ಥಿ ರೇಣುಕಾ ನಾಗರಾಜ್‍ರವರ ಪರವಾಗಿ 12 ಸದಸ್ಯರು ಕೈ ಎತ್ತಿದರು. ಬಿಜೆಪಿ ಅಭ್ಯರ್ಥಿಗಿಂತ 14 ಕ್ಕೂ ಹೆಚ್ಚು ಸದಸ್ಯರ ಬೆಂಬಲ ಪಡೆದ ವಿಜಯಲಕ್ಷ್ಮೀ ಪಾಟೀಲ್‍ರವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.

ಸಭೆಯಲ್ಲಿಯೇ ಕಣ್ಣೀರಿಟ್ಟ ಕಾಂಗ್ರೆಸ್ ಸದಸ್ಯ

ಒಂದೆಡೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟು ಕೊಡುವ ನಿರ್ಧಾರ ಮಾಡಿತ್ತು. ಇನ್ನೊಂದೆಡೆ ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡಬಾರದು ಎಂದು ಆಗ್ರಹಿಸಿದ್ದ ಕಾಂಗ್ರೆಸ್ ಸದಸ್ಯ ಎಸ್.ರಾಜಶೇಖರ್ ಮೇಯರ್ ಸ್ಥಾನಕ್ಕೆ ಆಯ್ಕೆ ಕೋರಿ ನಾಮಪತ್ರ ಸಲ್ಲಿಸಿದ್ದರು. ಎಷ್ಟೆ ಮನವೊಲಿಸಿದರು ಅವರು ನಾಮಪತ್ರ ಹಿಂಪಡೆಯಲಿಲ್ಲ. ಇನ್ನೊಂದೆಡೆ ಅವರು ಮೂರು ಸೆಟ್ ನಾಮಪತ್ರ ಕೂಡ ಸಲ್ಲಿಸಿದ್ದು, ಆ ಪತ್ರಗಳಿಗೆ ಕಾಂಗ್ರೆಸ್ ಪಕ್ಷದ ಮೂವರು ಹಾಗೂ ಮೂವರು ಪಕ್ಷೇತರ ಸದಸ್ಯರು ಸೂಚಕ, ಅನುಮೋದಕರಾಗಿ ಸಹಿ ಮಾಡಿದ್ದರು.

ಇದರಿಂದ ಎಸ್.ರಾಜಶೇಖರ್ ಕೂಡ ತಮಗೆ ಪಕ್ಷದ ಸದಸ್ಯರು ಬೆಂಬಲ ವ್ಯಕ್ತಪಡಿಸುವ ಇರಾದೆಯಲ್ಲಿದ್ದರು. ಆದರೆ ಮೇಯರ್ ಆಯ್ಕೆಯ ಅವರದೊಂದು ಮತ ಹೊರತುಪಡಿಸಿದರೆ, ಯಾರೊಬ್ಬರು ಅವರ ಪರವಾಗಿ ಕೈ ಎತ್ತಲಿಲ್ಲ. ಈ ದಿಢೀರ್ ಬೆಳವಣಿಗೆಯಿಂದ ಎಸ್.ರಾಜಶೇಖರ್ ತೀವ್ರ ಇರುಸುಮುರಿಸಿಗೊಳಗಾಗುವಂತಾಯಿತು. ಮೇಯರ್ - ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಭೆಯಿಂದ ಹೊರ ನಡೆಯುವ ವೇಳೆ ಅವರು ತೀವ್ರ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಡುತ್ತಲೇ ಸಭೆಯಿಂದ ಹೊರನಡೆದರು. ಬಿಜೆಪಿ ಸದಸ್ಯರು ನಿಮ್ಮ ಪರವಾಗಿ ನಾವಿದ್ದೆವೆ ಎಂದು ಈ ವೇಳೆ ಹೇಳಿದರು. ಈ ಬೆಳವಣಿಗೆಯಿಂದ ಎಸ್.ರಾಜಶೇಖರ್ ರವರು ಕಾಂಗ್ರೆಸ್ ತೊರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಉತ್ತಮ ಆಡಳಿತ: ಮೇಯರ್ ನಾಗರಾಜ್ ಕಂಕಾರಿ

'ಶಿವಮೊಗ್ಗ ನಗರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೆನೆ. ಸೀಮಿತಾವಧಿಯ ಅಧಿಕಾರಾವಧಿಯಲ್ಲಿ ಗುರುತರವಾದ ಕೆಲಸ ಮಾಡಬೇಕೆಂಬ ವಿಶ್ವಾಸ ಹೊಂದಿದ್ದೆನೆ' ಎಂದು ಮೇಯರ್ ನಾಗರಾಜ್ ಕಂಕಾರಿಯವರು ತಿಳಿಸಿದ್ದಾರೆ.

'ಮೂಲಸೌಕರ್ಯಕ್ಕೆ ಒತ್ತು' : ಉಪ ಮೇಯರ್ ವಿಜಯಲಕ್ಷ್ಮೀ ಪಾಟೀಲ್

'ತನ್ನ ಮೇಲೆ ವಿಶ್ವಾಸವಿಟ್ಟು ಗುರುತರ ಜವಾಬ್ದಾರಿಯನ್ನು ಪಕ್ಷದ ನಾಯಕರು ವಹಿಸಿದ್ದಾರೆ. ಮುಖಂಡರು ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೆನೆ. ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೆನೆ. ವಾರ್ಡ್‍ಗಳಿಗೆ ಭೇಟಿಯಿತ್ತು ನಾಗರಿಕರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತೇನೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತೇನೆ' ಎಂದು ಉಪ ಮೇಯರ್ ವಿಜಯಲಕ್ಷ್ಮೀ ಪಾಟೀಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News