ಶಿವಮೊಗ್ಗ ಮಹಾನಗರ ಪಾಲಿಕೆ: 'ಕಿಂಗ್ ಮೇಕರ್' ಅಲ್ಲ, ಮತ್ತೆ 'ಕಿಂಗ್' ಆಯ್ತು ಜೆಡಿಎಸ್

Update: 2018-03-03 16:29 GMT

ಶಿವಮೊಗ್ಗ, ಮಾ. 3: ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಸ್ಥಿತಿ ಮಾಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ, ಕಾಂಗ್ರೆಸ್ - ಬಿಜೆಪಿ ಪಕ್ಷಗಳು ಅಧಿಕಾರದ ಗದ್ದುಗೆಯೇರಲು ಜೆಡಿಎಸ್ ಪಕ್ಷದ ಬೆಂಬಲ ಪಡೆಯುವುದು ಅನಿವಾರ್ಯವಾಗಿತ್ತು. ಈ ಕಾರಣದಿಂದಲೇ ಜೆಡಿಎಸ್ ಪಕ್ಷವು ಮೂರು ಹಂತಗಳಲ್ಲಿ 'ಕಿಂಗ್ ಮೇಕರ್' ಆಗಿತ್ತು. ಆದರೆ ಕಳೆದೆರೆಡು ಅವಧಿಯಲ್ಲಿ ತಾನೇ 'ಕಿಂಗ್' ಆಗಿ ಹೊರಹೊಮ್ಮುವ ಮೂಲಕ ರಾಜಕೀಯ ತಂತ್ರಗಾರಿಕೆ ಮೆರೆದಿದೆ.

ಜೆಡಿಎಸ್ ತಂತ್ರಗಾರಿಕೆ, ಬಿಗಿಪಟ್ಟಿನ ಕಾರಣದಿಂದಲೇ ಆ ಪಕ್ಷ ಅಂತಿಮ ಅವಧಿಯಲ್ಲಿಯೂ ಮೇಯರ್ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಶರಣಾಗಿ, ಆ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟು ಕೊಟ್ಟಿದೆ. ಇನ್ನೊಂದೆಡೆ ಬಿಜೆಪಿ ಪಕ್ಷವು ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದಿಲ್ಲವೆಂದು ಹೇಳಿ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಗಿದೆ.

ಬಲಾಬಲವೇನು?: ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ನಗರ ವ್ಯಾಪ್ತಿಯ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೂ ಮತದಾನ ಮಾಡುವ ಹಕ್ಕಿದೆ. ಕಾಂಗ್ರೆಸ್‍ನಲ್ಲಿ 13 ಸದಸ್ಯರಿದ್ದು, ತಲಾ ಓರ್ವ ಶಾಸಕ - ವಿಧಾನಪರಿಷತ್ ಸದಸ್ಯರಿದ್ದಾರೆ. ಆದರೆ ಶಾಸಕ ಪ್ರಸನ್ನಕುಮಾರ್ ರವರು ಪಾಲಿಕೆಯ ಸದಸ್ಯರೂ ಆಗಿರುವುದರಿಂದ ಒಂದೇ ಮತದ ಪರಿಗಣನೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಬಲ 14 ಆಗಲಿದೆ. ಉಳಿದಂತೆ ಬಿಜೆಪಿಯಲ್ಲಿ 11 ಸದಸ್ಯರಿದ್ದಾರೆ. ಓರ್ವ ಸಂಸದ, ಮೂವರು ವಿಧಾನಪರಿಷತ್ ಸದಸ್ಯರಿದ್ದಾರೆ. ಒಟ್ಟಾರೆ ಆ ಪಕ್ಷದ ಬಲ 15 ಆಗಿತ್ತು. ಜೆಡಿಎಸ್‍ನಲ್ಲಿ 6 ಸದಸ್ಯರಿದ್ದು, ಓರ್ವ ಶಾಸಕರಿದ್ದಾರೆ. ಆ ಪಕ್ಷದ ಬಲಾಬಲ ಏಳು ಆಗಲಿದೆ. ಎಸ್‍ಡಿಪಿಐನ ಓರ್ವ ಹಾಗೂ ಉಳಿದಂತೆ ಇತರೆ ನಾಲ್ವರು ಸದಸ್ಯರಿದ್ದಾರೆ. ಒಟ್ಟಾರೆ ಸದಸ್ಯರ ಬಲಾಬಲ 41 ಆಗಲಿದೆ. ಅಧಿಕಾರದ ಗದ್ದುಗೆಯೇರಲು 21 ಸದಸ್ಯರ ಬಲ ಬೇಕಾಗಿತ್ತು.

ಅನಿವಾರ್ಯವಾಗಿತ್ತು: ಈ ಕಾರಣದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷವು ಪಾಲಿಕೆಯ ಅಧಿಕಾರದ ಗದ್ದುಗೆಯೇರಲು ಜೆಡಿಎಸ್ ಬೆಂಬಲ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಮೊದಲ ಹಂತದ ಮೂರು ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ನಾಲ್ಕನೇ ಅವಧಿಯಲ್ಲಿ 'ಕಿಂಗ್ ಮೇಕರ್' ಆಗಲೊಪ್ಪದ ಜೆಡಿಎಸ್ ತನಗೆ ಮೇಯರ್ ಹುದ್ದೆ ಬಿಟ್ಟು ಕೊಟ್ಟರೆ ಮಾತ್ರ ಬೆಂಬಲಿಸುವುದಾಗಿ ಕಾಂಗ್ರೆಸ್‍ಗೆ ತಿಳಿಸಿತ್ತು. ಈ ನಡುವೆ ಬಿಜೆಪಿ ಪಕ್ಷವು ಮೇಯರ್ ಹುದ್ದೆಗೆ ಬೆಂಬಲ ವ್ಯಕ್ತಪಡಿಸುವ ಆಫರ್ ನೀಡಿತ್ತು. ಅದರಂತೆ ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಆಡಳಿತ ಅಸ್ತಿತ್ವಕ್ಕೆ ಬಂದಿತ್ತು. ಜೆಡಿಎಸ್‍ನ ಕೇಬಲ್ ಬಾಬು ಮೇಯರ್ ಆಗಿದ್ದರು. ಅಂತಿಮ ಅವಧಿಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟು ಕೊಡುವ ಒಪ್ಪಂದ ಎರಡು ಪಕ್ಷಗಳ ನಡುವೆ ನಡೆದಿತ್ತು.

ಕಾರ್ಯತಂತ್ರ: ಅಂತಿಮ ಅವಧಿಯಲ್ಲಿಯೂ ಜೆಡಿಎಸ್ ಪಕ್ಷ ತನಗೆ ಮೇಯರ್ ಹುದ್ದೆ ಬಿಟ್ಟು ಕೊಡುವಂತೆ ಬಿಜೆಪಿಗೆ ಡಿಮ್ಯಾಂಡ್ ಮಾಡಿತ್ತು. ಆದರೆ ಬಿಜೆಪಿಯು ತನಗೆ ಮೇಯರ್ ಸ್ಥಾನ ಬಿಟ್ಟು ಕೊಡುವಂತೆ ಆಗ್ರಹಿಸಿತ್ತು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನ ಬಿಟ್ಟು ಕೊಡುವ ಆಫರ್ ನೀಡಿತ್ತು. ಇದರಿಂದ ಬಿಜೆಪಿ ಸಖ್ಯ ತೊರೆದ ಜೆಡಿಎಸ್ ಮತ್ತೆ 'ಕೈ' ಹಿಡಿದಿತ್ತು. ಈ ಮೂಲಕ ಸೀಮಿತ ಸಂಖ್ಯೆಯ ಸದಸ್ಯರಿನ್ನಿಟ್ಟುಕೊಂಡೇ ಮತ್ತೊಮ್ಮೆ 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ.

ಗೇಮ್‍ಪ್ಲ್ಯಾನ್: ಪಾಲಿಕೆಯ ಜೆಡಿಎಸ್ ಸದಸ್ಯರು ಆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‍ರವರ ಬೆಂಬಲಿಗರಾಗಿದ್ದಾರೆ. ಐದು ಹಂತಗಳಲ್ಲಿಯೂ ಪಾಲಿಕೆಯಲ್ಲಿ ಜೆಡಿಎಸ್‍ಗೆ ಪ್ರಾತಿನಿದ್ಯ ದೊರಕುವಂತೆ ಮಾಡುವಲ್ಲಿ ಎಂ. ಶ್ರೀಕಾಂತ್‍ರವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಗೇಮ್‍ಪ್ಲ್ಯಾನ್ ಕಾರಣದಿಂದಲೇ ಇದೀಗ ಜೆಡಿಎಸ್ ಪಕ್ಷವು ಕಿಂಗ್ ಸ್ಥಾನದಿಂದ ಕಿಂಗ್‍ಮೇಕರ್ ಆಗಿ ಹೊರಹೊಮ್ಮುವಲ್ಲಿ ಸಫಲವಾಗಲು ಮುಖ್ಯ ಕಾರಣವಾಗಿದೆ ಎಂದು ಆ ಪಕ್ಷದ ಕಾರ್ಪೋರೇಟರ್ ಗಳು ಅಭಿಪ್ರಾಯಪಡುತ್ತಾರೆ.

'ಪಕ್ಷದ ಹಿತಾಸಕ್ತಿ ಮುಖ್ಯ'

'ತನಗೆ ಪಕ್ಷದ ಹಿತಾಸಕ್ತಿ ಮುಖ್ಯವಾಗಿದೆ. ಪಕ್ಷದ ಹಿತಕ್ಕೆ ಧಕ್ಕೆಯಾಗುವಂತಹ ಸನ್ನಿವೇಶ ಎದುರಾದ ಕಾರಣದಿಂದ ಬಿಜೆಪಿ ಜೊತೆ ಮೈತ್ರಿ ಮಾತುಕತೆ ಮುರಿದು ಬೀಳುವಂತಾಯಿತು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಮತ್ತೆ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದಿದ್ದೇವೆ. ಇದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಏಳು ತಿಂಗಳ ಆಡಳಿತಾವಧಿಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ದಿಗೆ ಮೈತ್ರಿಕೂಟ ಆಡಳಿತ ಪ್ರಾಮಾಣಿಕವಾಗಿ ಶ್ರಮಿಸಲಿದೆ. ನಾಗರೀಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಕೆಲಸ ಮಾಡಲಿದೆ' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‍ರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಮಾತು ತಪ್ಪಿದ ಜೆಡಿಎಸ್' 

'ನಾಲ್ಕನೇ ಹಂತದ ಅವಧಿಯಲ್ಲಿ ಜೆಡಿಎಸ್ - ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಈ ವೇಳೆ ನಡೆದ ಒಪ್ಪಂದದಂತೆ ಅಂತಿಮ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಮೇಯರ್ ಹುದ್ದೆ ಬಿಟ್ಟು ಕೊಡುವುದಾಗಿ ಜೆಡಿಎಸ್ ಭರವಸೆ ನೀಡಿತ್ತು. ಆ ಕಾರಣದಿಂದಲೇ ನಾಲ್ಕನೇ ಅವಧಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು. ಆದರೆ ಜೆಡಿಎಸ್ ಪಕ್ಷವು ಅಧಿಕಾರ ಲಾಲಾಸೆಯಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಗೆ ಕೊಟ್ಟ ಮಾತು ತಪ್ಪಿದೆ. ಮುಂಬರುವ ಚುನಾವಣೆಯಲ್ಲಿ ಆ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಬಿಜೆಪಿ ಪಕ್ಷದ ಕಾರ್ಪೋರೇಟರ್ ಸಿ.ಹೆಚ್.ಮಾಲತೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News