ಸಕಲೇಶಪುರ: ಚುನಾವಣಾ ಆಕಾಂಕ್ಷಿಯ ವಿರುದ್ದವೇ ಬಿಜೆಪಿ ಮುಖಂಡರ, ಕಾರ್ಯಕರ್ತರ ಆಕ್ರೋಶ

Update: 2018-03-03 17:03 GMT

ಆಲೂರು,ಮಾ.3: ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಬಿಜೆಪಿ ಪಕ್ಷದ ನವಶಕ್ತಿ ಸಮಾವೇಶದಲ್ಲಿ ಚುನಾವಣಾ ಆಕಾಂಕ್ಷಿ ನಾರ್ವೆ ಸೋಮಶೇಖರ್ ವಿರುದ್ದ ಬಿಜೆಪಿ ಮುಖಂಡರಿಂದ ಹಾಗು ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪಟ್ಟಣದ ಶಾಂಬವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ನವಶಕ್ತಿ ಸಮಾವೇಶ ಸಮಾರಂಭದಲ್ಲಿ ಅಪೇಕ್ಷಿತ ಮುಖಂಡರನ್ನು ಮಾತ್ರ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಬಿಜೆಪಿ ಮುಖಂಡ ಬಾಳ್ಳುಪೇಟೆ ಮಲ್ಲಿಕಾರ್ಜುನ್ ಅವರನ್ನು ವೇದಿಕೆಗೆ ಕರೆಯಲಾಯಿತು. ಮಲ್ಲಿಕಾರ್ಜುನರವರು ವೇದಿಕೆ ಏರುತ್ತಿರುವ ಸಂದರ್ಭದಲ್ಲಿ ನಾರ್ವೆ ಸೋಮಶೇಖರ್ ರವರೂ ಸಹ ಜೊತೆಯಲ್ಲಿ ತೆರಳಿದರು. ಆ ಸಂದರ್ಭದಲ್ಲಿ ಇತರೆ ಚುನಾವಣಾ ಆಕಾಂಕ್ಷಿಗಳ ಬೆಂಬಲಿಗರು ನಾರ್ವೆ ಸೋಮಶೇಖರ್ ವೇದಿಕೆಯಲ್ಲಿರುವುದು ಸರಿಯಲ್ಲ, ವೇದಿಕೆಗೆ ಹೋಗಬಾರದು. ಇದು ಕೇವಲ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ. ಸಭೆಯಲ್ಲಿ ಆಕಾಂಕ್ಷಿಗಳಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಪ್ರತಿಭಟಿಸಿ ಸೋಮಶೇಖರ್ ವಿರುದ್ದ ಧಿಕ್ಕಾರ ಕೂಗಿದರು, 

ಈ ಸಂದರ್ಭದಲ್ಲಿ ಚುನಾವಣಾ ಆಕಾಂಕ್ಷಿಗಳ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು. ಸಮಾರಂಭದಲ್ಲಿ ಸುಮಾರು ಒಂದು ಗಂಟೆ ಕಾಲ ಗೊಂದಲ ನಿರ್ಮಾಣವಾಗಿತ್ತು. ನಂತರ ಬಿಜೆಪಿ ಪಕ್ಷದ ಆಲೂರು ಕಟ್ಟಾಯ ಮಂಡಿಳಿ ಅಧ್ಯಕ್ಷ ಕದಾಳು ಲೋಕೇಶ್ ಮಾತನಾಡಿ, ಈ ಸಮಾವೇಶ ಕೇವಲ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಮೀಸಲಾಗಿದ್ದು. ಯಾವುದೆ ಆಕಾಂಕ್ಷಿಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ. ನಾವು ಅವರನ್ನು ಕರೆದಿರುವುದಿಲ್ಲ ಎಂದು ಘೋಷಣೆ ಮಾಡಿದರು. 

ನಂತರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಆರ್. ಗುರುದೇವ್, ಬಿಜೆಪಿ ಗುಂಡಾಗಿರಿಯ ಪಕ್ಷವಲ್ಲ. ಸ್ವಲ್ಪ ಗಲಾಟೆ ನಡೆದಿದ್ದಕ್ಕೆ ಪಕ್ಷದ ಕಾರ್ಯಕರ್ತರು ನೊಂದು ಸಮಾರಂಭದಿಂದ ಹೊರ ನಡೆದಿದ್ದಾರೆ. ಇದು ಬೇಸರದ ಸಂಗತಿಯಾಗಿದೆ. ಬಿಜೆಪಿ ಸ್ವಾಭಿಮಾನದ ಪಕ್ಷವಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಕಟ್ಟುವುದಕ್ಕೆ ಮಾಜಿ ಶಾಸಕ ಬಿ ಬಿ ಶಿವಪ್ಪ ನವರು ತಮ್ಮ ಮನೆಯ ಹಣವನ್ನು ತಂದು ಬಹಳಷ್ಟು ಶ್ರಮವಹಿಸಿದ್ದಾರೆ. ನಂತರ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದರು, ಅಮಿತ್ ಶಾ ಹೇಳಿಕೆಯಂತೆ ಇಡೀ ರಾಜ್ಯದಲ್ಲಿ ಬಿಜೆಪಿ ಏನಾದರೂ ಎಲ್ಲಾ ಕಡೆ ಅಧಿಕಾರಿಗೆ ಬಂದರೆ ಅದು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ ಮಾತ್ರ ಎಂದ ಅವರು, ಪಕ್ಷದ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ. ಬೂತ್ ಮಟ್ಟದ ಕಾರ್ಯಕರ್ತರು ಬಿಜೆಪಿ ಪಕ್ಷದ ಶಕ್ತಿಯಾಗಿದ್ದಾರೆ. ಪಕ್ಷದಲ್ಲಿ ಗುಂಪುಗಾರಿಕೆ ತಲೆದೋರಿದರೆ ಹಾನಿಯಾಗುತ್ತದೆ. ಪಕ್ಷದಲ್ಲಿ ಗುಂಪುಗಾರಿಕೆಯಾಗಬಾರದು ಎಂದು ತಿಳಿಸಿದರು.

ಕ್ಷೇತ್ರ ಚುನಾವಣಾ ಉಸ್ತುವಾರಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ರವರು ಮಾತನಾಡಿ, ಸಮಾವೇಶ ಮಾಡುವುದು ದೊಡ್ಡದಲ್ಲ. ನೈಜ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿಯುತ ಕಾರ್ಯಕರ್ತರನ್ನು ತಂದು ಕಾರ್ಯಗಾರವನ್ನು ಮಾಡಿದಾಗ ಸಮಾವೇಶ ಮಾಡಿದ್ದು ಸಾರ್ಥಕವಾಗುತ್ತದೆ. ನಮ್ಮ ಪಕ್ಷದಲ್ಲಿ ಅಭ್ಯಾಸ ಬಲವಿದೆ. ಕಾರ್ಯಗಾರವು ಇದೆ. ಕಾರ್ಯಕರ್ತರು ಪಕ್ಷದಲ್ಲಿ ಯಾವ ರೀತಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಮಹಿತಿಯನ್ನು ತರಭೇತಿಯಲ್ಲಿ ನೀಡಲಾಗುತ್ತದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಕಾರ್ಯಕರ್ತನೆ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುತ್ತಾನೆ. ಸಮಾಜ ಒಪ್ಪುವಂತಹ ಕಾರ್ಯಕರ್ತರನ್ನು ಮಾತ್ರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುತ್ತದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ ಹಿಂದೂ ಧರ್ಮೀಯರ ದಮನಕ್ಕೆ ಮುಂದಾಗಿದೆ. ಇದಕ್ಕೆ ತಕ್ಕ ಶಾಸ್ತಿ ಮಾಡುವ ಕಾಲ ಸಮೀಪಿಸುತ್ತಿದೆ. ಇಡಿ ದೇಶದಲ್ಲಿ ಕಾಂಗ್ರೆಸ್ ಆಡಳಿತವನ್ನು ಕಿತ್ತು ಹಾಕಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ದಿ.ಬಿ.ಬಿ. ಶಿವಪ್ಪ ರವರ ಮಗ ಬಿ. ಎಸ್. ಪ್ರತಾಪ್, ಮಲ್ಲಿಕಾರ್ಜುನ, ಪ್ರಸನ್ನ, ಹೇಮಂತ, ಎಚ್. ಬಿ. ಧರ್ಮರಾಜ್, ಈಶ್ವರ್, ಷಣ್ಮುಖ, ಎಚ್. ಜೆ. ಪೃಥ್ವಿ ಮುಂತಾದವರು ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳಾದ ನಾರ್ವೆ ಸೋಮಶೇಖರ್, ಮುರಳಿಮೋಹನ್, ಎಚ್. ಆರ್. ನಾರಾಯಣ, ಮಲ್ಲಿಗೆವಾಳು ದ್ಯಾವಪ್ಪ, ಡಾ. ನಾರಾಯಣಸ್ವಾಮಿ, ಸಿಮೆಂಟ್ ಮಂಜು, ಮುನಿಕೃಷ್ಣ  ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News