ರಾಜ್ಯ ಮೇಲೆ ಈಶಾನ್ಯ ರಾಜ್ಯಗಳ ಫಲಿತಾಂಶ ಪರಿಣಾಮ ಬೀರಲ್ಲ: ಖರ್ಗೆ

Update: 2018-03-03 17:07 GMT

ದಾವಣಗೆರೆ,ಮಾ.3: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶವು ಆಯಾ ರಾಮ್, ಗಯಾ ರಾಮ್ ಎಂಬಂತಿದ್ದು, ಈ ಫಲಿತಾಂಶವು ಕರ್ನಾಟಕದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಪುರಾದಲ್ಲಿ ಕಮ್ಯುನಿಷ್ಟ್ ಪಕ್ಷದ ಸರ್ಕಾರವಿತ್ತು. ಅದು ಈಗ ಬಿಜೆಪಿ ಪಾಲಾಗಿದೆ. ಮೇಘಾಲಯದಲ್ಲಿ ಹೆಚ್ಚಿನ ಸ್ಥಾನ ನಮ್ಮ ಪಕ್ಷಕ್ಕೆ ಬಂದಿವೆ. ಅಲ್ಲಿ ನಮ್ಮ ಪಕ್ಷವೇ ದೊಡ್ಡದಾಗಿದೆ. ಮೈತ್ರಿಗೆ ನಮಗೆ ಮೊದಲ ಆದ್ಯತೆಯನ್ನೂ ನೀಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಿಜೆಪಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನೇ ಟಾರ್ಗೆಟ್ ಮಾಡುತ್ತಿದ್ದಾರೆಯೇ ಹೊರತು, ಸಿದ್ದರಾಮಯ್ಯಗೆ ಅಲ್ಲ. ಇಂತಹ ಟಾರ್ಗೆಟ್ ಸಹಿಸಿಕೊಳ್ಳುವಂತಹ ಶಕ್ತಿಯೂ ನಮ್ಮಲ್ಲಿದೆ. ಬಿಜೆಪಿಯವರು ಎಷ್ಟು ಓಡಾಡುತ್ತಾರೋ ಓಡಾಡಲಿ. ರಾಜ್ಯದಲ್ಲಿ ಹೊಸ ವಾತಾವರಣವಿದೆ. ಈ ಬಾರಿಯೂ ರಾಜ್ಯದಲ್ಲಿ ಮತ್ತೆ ನಮ್ಮ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಪಕ್ಷ ಶೀಘ್ರವೇ ಘೋಷಣೆ ಮಾಡಲಿದೆ. ಯಾವ ಕ್ಷೇತ್ರದ ಟಿಕೆಟ್ ಯಾವ ಅಭ್ಯರ್ಥಿಗೆ ಎಂಬುದನ್ನೂ ಶೀಘ್ರವೇ ಪಕ್ಷದಿಂದ ಘೋಷಣೆ ಮಾಡಲಿದ್ದೇವೆ ಎಂದು ಖರ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಮಾಧ್ಯಮದವರು, ಬಿಜೆಪಿಯವರು ಹೊಸ ಸುದ್ದಿ ಹುಟ್ಟು ಹಾಕಿ, ನಮ್ಮ ನಮ್ಮಲ್ಲಿ ವ್ಯತ್ಯಾಸ ತರುತ್ತಿದ್ದಾರೆ. ನಮ್ಮಲ್ಲಿ ಒಡಕು ತರುವ ಪ್ರಯತ್ನವನ್ನು ಬಿಜೆಪಿಯವರು ನಿರಂತರ ಮಾಡುತ್ತಲೇ ಇದ್ದಾರೆ. ಬಿಜೆಪಿಯವರು ಎಷ್ಟೇ ಪ್ರಯತ್ನ ಮಾಡಿದ್ರೂ ಕಾಂಗ್ರೆಸ್ಸಿನಿಂದ ಯಾರು ಎಲ್ಲಿಗೂ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News