ಒತ್ತಡ, ಖಿನ್ನತೆಯಿಂದ ಹೊರಬರಲು ಧ್ಯಾನ, ಸಹಜ ಶಿವಯೋಗದಿಂದ ಸಾಧ್ಯ: ಶ್ರೀ ಡಾ.ಶಿವಮೂರ್ತಿ ಮುರುಘಾ

Update: 2018-03-03 17:12 GMT

ದಾವಣಗೆರೆ,ಮಾ.3: ಆಧುನಿಕ ಯುಗದಲ್ಲಿ ಒತ್ತಡ, ಉದ್ವೇಗ, ಖಿನ್ನತೆ ಮನುಷ್ಯನಿಗೆ ಕಾಡುವ ಪ್ರಮುಖ ಕಾಯಿಲೆಗಳಾಗಿವೆ. ಇವುಗಳಿಂದ ಹೊರಬರಲು ಧ್ಯಾನ, ಸಹಜ ಶಿವಯೋಗದಿಂದ ಸಾಧ್ಯ ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶಿವಯೋಗ ಮಂದಿರದಲ್ಲಿ ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 61ನೇ ಪುಣ್ಯಸ್ಮರಣೆ, ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಖಿನ್ನತೆ ಎಂಬುದು ಪ್ರಮುಖ ಕಾಯಿಲೆಯಾಗಿದೆ. ಇದರಿಂದ ಹೊರಬರಬೇಕೆಂದ ಅವರು, ಖಿನ್ನತೆಯಿಂದಾಗಿ ಪತಿ-ಪತ್ನಿಯರ, ಸಂಬಂಧಿಗಳ ಮಧ್ಯೆ ವಿರಸ ಉಂಟಾಗುತ್ತದೆ. ಕೆಲವು ಸಮಸ್ಯೆಗಳು ಹೇಳದಂತಹ ಪರಿಸ್ಥಿತಿ ಉಂಟಾಗಿ ಮತ್ತಷ್ಟೂ ಖಿನ್ನತೆಗೆ ಕಾರಣವಾಗುತ್ತದೆ. ಖಿನ್ನತೆಯು ಮನುಷ್ಯನ ಬದುಕನ್ನೆ ಕಾಡುತ್ತದೆ ಎಂದು ವಿವರಿಸಿದರು.

ಶಿರಸಂಗಿ ಮುರುಘಾ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಮಾತನಾಡಿ, ಇತ್ತೀಚೆಗೆ ಮೊಬೈಲ್ ಎಂಬುದು ದೊಡ್ಡ ಭೂತವಾಗಿ ಕಾಡುತ್ತಿದೆ. ಎದ್ದ ತಕ್ಷಣ ದೇವರನ್ನು ನೋಡುವ ಬದಲು ಮೊಬೈಲ್ ನೋಡುತ್ತೇವೆ. ಇದು ಇಡೀ ದಿನದ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಇದರಿಂದ ಹೊರಬರಬೇಕಾದರೆ ಎದ್ದ ತಕ್ಷಣ ಇಷ್ಟಲಿಂಗ ದರ್ಶನ ಮಾಡಬೇಕು. ಚೈತನ್ಯ, ಉತ್ಸಾಹ ದೊರೆತು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಒತ್ತಡದಿಂದ ಮುಕ್ತರಾಗುತ್ತೇವೆ ಎಂದರು.

ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿದರು.

ಶಿಕಾರಿಪುರ ವಿರಕ್ತಮಠದ ಚನ್ನಬಸವಶ್ರೀ, ದೊಡ್ಡಮೇಟಿಕುರ್ಕಿ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿಗಳು, ಜಿ.ಪಂ. ಸದಸ್ಯ ಬಸವಂತ್ಪಪ, ಬಾಡದ ಆನಂದರಾಜ್, ಅಮರೇಶ್ ಮಿಣಜಗಿ ಇದ್ದರು.

ಧ್ಯಾನದಲ್ಲಿ ಭಾಗವಹಿಸಿದ ವಿದೇಶಿಗರು
ಇಂಗ್ಲೇಡ್ ದೇಶದ ಆಂಡ್ರ್ಯೋ ಹಾಗೂ ಫಿನ್ ಲ್ಯಾಂಡ್ ನ ಮರಿಯಾ ಇಂದು ಶಿವಯೋಗಾಶ್ರಮದಲ್ಲಿ ನಡೆದ ಸಹಜ ಶಿವಯೋಗದಲ್ಲಿ ಭಾಗವಹಿಸಿ ಧ್ಯಾನದಲ್ಲಿ ನಿರತರಾಗಿದ್ದರು. ರಾವಂದೂರು ಮಠಕ್ಕೆ ಹಲವು ಬಾರಿ ಆಗಮಿಸಿ ವಾರಗಳ ಕಾಲ ನೆಲೆಸಿ ಧ್ಯಾನ ಹಾಗೂ ಯೋಗದ ತರಬೇತಿಯನ್ನು ಇವರು ಪಡೆಯುತ್ತಿದ್ದಾರೆ. ವಿದೇಶಿಗರಾದರು ಭಾರತೀಯ ಸಂಸ್ಕೃತಿಯತ್ತ ಆಕರ್ಷಿತರಿದ್ದಾರೆ. ಮಾನಸಿಕ ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗ ಮದ್ದು ಎನ್ನುವುದು ಇವರ ಅಭಿಪ್ರಾಯ. ಅದಕ್ಕೆಂದೆ ಇಂದಿನ ಸಹಜ ಶಿವಯೋಗದಲ್ಲಿ ಭಾಗವಹಿಸಿದ್ದೇವೆ ಎನ್ನುತ್ತಾರೆ ಅವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News