ಉದ್ಯೋಗ ಸೃಷ್ಟಿ ಆದ್ಯತೆಯ ವಿಷಯವಾಗಬೇಕಿದೆ: ಟಿ.ಬಿ.ಜಯಚಂದ್ರ

Update: 2018-03-04 13:28 GMT

ತುಮಕೂರು,ಮಾ.04: ಉದ್ಯೋಗ ಸೃಷ್ಟಿಯಾಗದೆ ಕೈಗಾರಿಕೆಗಳು ಬೆಳೆಯವಣಿಗೆಯಾದರೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಯನ್ನು ಒಂದು ಆದ್ಯತೆಯ ವಿಷಯವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ ಜಿಲ್ಲಾ ಮಟ್ಟದ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ಬಿ ಟೆಕ್, ಎಂ.ಟೆಕ್ ಮಾಡಿಕೊಂಡಂತಹ ಯುವಜನರು ಕೆ.ಎಸ್.ಆರ್.ಟಿ.ಸಿ. ಡ್ರೈವರ್, ಕಂಡೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಶಿಕ್ಷಣ ನೀಡುತ್ತಿದ್ದೇವೆಯೇ ಹೊರತು, ಉದ್ಯೋಗ ಸೃಷ್ಟಿಸುತ್ತಿಲ್ಲ. ಹಾಗಾಗಿ ಉದ್ಯೋಗ ಸೃಷ್ಟಿಯನ್ನು ಆದ್ಯತೆಯ ವಿಷಯವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.

ದೊಡ್ಡ ಬಂಡವಾಳ ಹೂಡಿದ ಉದ್ದಿಮೆಗಳಲ್ಲಿ ಯಂತ್ರೋಪಕರಣಗಳೇ ಹೆಚ್ಚು ಸದ್ದು ಮಾಡುವುದರಿಂದ ಅಲ್ಲಿ ಉದ್ಯೋಗ ಸೃಷ್ಟಿಯಾಗುವ ಪ್ರಮಾಣ ಕಡಿಮೆ. ಇತ್ತೀಚಗೆ ದೊಡ್ಡ ಉದ್ದಿಮೆದಾರರ ಹೆಸರಿನಲ್ಲಿ ಜನರ ಹಣವನ್ನು ಸಾಲ ಪಡೆದು, ತೀರಿಸದೆ ದೇಶ ಬಿಡುವವರ ಸಂಖ್ಯೆಯೇ ಹೆಚ್ಚಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ತಮ್ಮ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಖಾದಿಯನ್ನು ಧರಿಸಿ, ಗಾಂಧಿ ಯಾರು ಎಂದು ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಯಾಗಲು ಗ್ರಾಮೀಣ ಜನರ ಜೀವನಾಡಿಯಾಗಿರುವ ಗುಡಿ ಕೈಗಾರಿಕೆಗಳಿಂದ ಮಾತ್ರ ಸಾಧ್ಯ. ಇದನ್ನು ಅರಿತಿದ್ದ ಗಾಂಧೀಜಿ ಗ್ರಾಮ ಸ್ವರಾಜ್ ಪರಿಕಲ್ಪನೆಯಲ್ಲಿ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಸಚಿವ ಟಿ.ಬಿ.ಜಯಚಂದ್ರ ನುಡಿದರು.

ಶನಿವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಸಮವಸ್ತ್ರಗಳನ್ನು ಕೈಮಗ್ಗ ಅಭಿವೃದ್ದಿ ಮಂಡಳಿಯಿಂದ ಖರೀದಿಸಲು ತೀರ್ಮಾನಿಸಲಾಗಿದೆ. ಇದರಿಂದ ಕೈಮಗ್ಗಗಳನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಅರ್ಥಿಕ ಭದ್ರತೆಯನ್ನು ಒದಗಿಸಿದಂತಾಗುತ್ತದೆ ಎಂದು ಸಚಿವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ ಮಾತನಾಡಿ, ಮಹಾತ್ಮಗಾಂಧಿಜೀ ಅವರ ಅನೇಕ ಕನಸುಗಳನ್ನು ಕರ್ನಾಟಕದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ನನಸು ಮಾಡಲಾಗಿದೆ. ಖಾದಿ ಮತ್ತು ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ. ತುಮಕೂರು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 1028 ಗುಡಿ ಕೈಗಾರಿಕೆಗಳಲು 1834 ಜನರಿಗೆ ಉದ್ಯೋಗ ನೀಡಿದ್ದು, ವಾರ್ಷಿಕ 11.28 ಕೋಟಿ ವಹಿವಾಟು ನಡೆಸುತ್ತಿದ್ದು, ಇದನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್.ರಮೇಶ್, 1957ರಲ್ಲಿ ಮಹಾತ್ಮಗಾಂಧಿ ಅವರಿಂದ ಪ್ರಾರಂಭವಾದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಇಂದು ಸುಮಾರು 148 ಖಾದಿ ಸಂಸ್ಥೆಗಳು ಕೆಲಸ ಮಾಡುತಿದ್ದು, 29 ಸಾವಿರ ಜನರಿಗೆ ಉದ್ಯೋಗ ನೀಡಿವೆ. ಅಲ್ಲದೆ 8600 ಗುಡಿ ಕೈಗಾರಿಕೆಗಳಿದ್ದು 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದು, ಇವರಲ್ಲಿ ಶೇ70ರಷ್ಟು ಮಹಿಳೆಯರೇ ಇದ್ದಾರೆ. ಖಾದಿ ಸಂಸ್ಥೆ ಮತ್ತು ಗ್ರಾಮೋದ್ಯೋಗ ಮಂಡಳಿಗಳಿಂದ ತಯಾರಾಗುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಖಾದಿ ಉತ್ಸವಗಳನ್ನು ಆಯೋಜಿಸುತ್ತಿದ್ದು, ರಾಜ್ಯಮಟ್ಟದ ಉತ್ಸವದಲ್ಲಿ ದಾಖಲೆಯ 38 ಕೋಟಿ ರೂ ವಹಿವಾಟು ನಡೆದಿದೆ. ಕೋಲಾರದಲ್ಲಿ ನಡೆದ ಜಿಲ್ಲಾ ಉತ್ಸವದಲ್ಲಿ 1.90 ಕೋಟಿ ರೂ ವಹಿವಾಟು ನಡೆದಿದ್ದು, ತುಮಕೂರುನಲ್ಲಿ ನಿರೀಕ್ಷೆ ಮೀರಿ ಹೊರರಾಜ್ಯದ 20, ಹೊರ ಜಿಲ್ಲೆಯ 72 ಹಾಗೂ ತುಮಕೂರು ಜಿಲ್ಲೆಯ 5 ಮಳಿಗೆ ಸೇರಿ ಒಟ್ಟು 97 ಖಾದಿ ಮಳಿಗೆಗಳು ಉತ್ಸವದಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದರು.

ವೇದಿಕೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರಾದ ಪರ್ವತಪ್ಪ, ರಾಜಶೇಖರ್,ಜಿ.ಪಂ.ಸದಸ್ಯರಾದ ಕೆಂಚಮಾರಯ್ಯ, ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯವಿಭವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಮಾರ್ಚ್ 04 ರಿಂದ 13ರವರೆಗೆ ಗಾಜಿನ ಮನೆಯಲ್ಲಿ ಜಿಲ್ಲಾ ಖಾದಿ ಉತ್ಸವ ಜರುಗಲಿದ್ದು, ಅರಳೇ ಖಾದಿ, ಪಾಲಿ ಖಾದಿ ಉಣ್ಣೆ ಖಾದಿ ಉತ್ಪನ್ನಗಳ ಮೇಲೆ ಶೇ35ರ ರಿಯಾಯಿತಿಯಿದೆ. ರೇಷ್ಮೆ ಖಾದಿಯ ಮೇಲೆ ಶೇ25ರಷ್ಟು ರಿಯಾಯಿತಿ ಇದೆ. ಇದರ ಜೊತೆಗೆ ಗುಡಿ ಕೈಗಾರಿಕೆಗಳಲ್ಲಿ ತಯಾರಾದ ಹಲವು ಉತ್ಪನ್ನಗಳು ದೊರೆಯಲಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಳಿಗೆಗಳು ತೆರದಿದ್ದು, ಉಚಿತ ಪ್ರವೇಶವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News