ಮೇಘಾಲಯದಲ್ಲಿ ಸರಕಾರ ರಚನೆಗೆ ಎನ್‌ಪಿಪಿ ಹಕ್ಕು ಮಂಡನೆ

Update: 2018-03-04 18:43 GMT

ಹೊಸದಿಲ್ಲಿ, ಮಾ.4: ನ್ಯಾಶನಲ್ ಪೀಪಲ್ಸ್ ಪಕ್ಷದ (ಎನ್‌ಪಿಪಿ) ಮುಖ್ಯಸ್ಥ ಕೊನ್ರಾಡ್ ಸಂಗ್ಮಾ ರವಿವಾರದಂದು ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್‌ರನ್ನು ಭೇಟಿಯಾಗಿ ತನ್ನ ಪಕ್ಷಕ್ಕೆ 34 ಶಾಸಕರ ಬೆಂಬಲವಿರುವ ಬಗ್ಗೆ ತಿಳಿಸಿ ರಾಜ್ಯದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ 6ರಂದು ನೂತನ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿಯ ಹಿಮಾಂತಾ ಬಿಶ್ವ ಶರ್ಮಾ, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಕೊನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ನೂತನ ಸರಕಾರ ದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ರವಿವಾರದಂದು ಎನ್‌ಪಿಪಿ, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ಬಿಜೆಪಿ ಮತ್ತು ಎಚ್‌ಎಸ್‌ಪಿಡಿಪಿ ಪಕ್ಷದ ಶಾಸಕರು ರಾಜ್ಯಪಾಲರನ್ನು ಶಿಲ್ಲಾಂಗ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಯಾಗಿ ಸರಕಾರ ರಚಿಸುವ ಬಗ್ಗೆ ಸಮಾಲೋಚನೆ ನಡೆಸಿದರು. ಎನ್‌ಪಿಪಿಯ 19 ಶಾಸಕರ ಜೊತೆಗೆ ಬಿಜೆಪಿಯ 2, ಯುಡಿಪಿಯ2, ಎಚ್‌ಎಸ್‌ಪಿಡಿಪಿಯ 2, ಪಿಡಿಎಫ್‌ನ 4 ಹಾಗೂ ಒಂದು ಸ್ವತಂತ್ರ ಶಾಸಕ ಸೇರಿ ಒಟ್ಟು 34 ಶಾಸಕರ ಬೆಂಬಲದ ಜೊತೆಗೆ ಸರಕಾರ ರಚಿಸಲು ಸಂಗ್ಮಾ ಮುಂದಾಗಿದ್ದಾರೆ.

ತನ್ನ ಸರಕಾರ ರಾಜ್ಯದ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಮೈತ್ರಿ ಸರಕಾರ ನಡೆಸುವುದು ಸುಲಭವಲ್ಲ. ಆದರೆ ನಮ್ಮ ಜೊತೆ ಕೈಜೋಡಿಸಿರುವ ಶಾಸಕರು ರಾಜ್ಯದ ಮತ್ತು ಜನತೆಯ ಏಳಿಗೆಗೆ ಬದ್ಧರಾಗಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದು ಸಂಗ್ಮಾ ತಿಳಿಸಿದ್ದಾರೆ.

ಮುಂದಿನ 2-3 ದಿನಗಳು ಅತ್ಯಂತ ಪ್ರಮುಖವಾಗಿವೆ. ಮಾರ್ಚ್ 7ರಂದು ಸದನದ ಅವಧಿ ಮುಗಿಯುತ್ತದೆ. ಅದಕ್ಕೂ ಮೊದಲು ಎಲ್ಲವನ್ನೂ ಅಂತಿಮಗೊಳಿಸಬೇಕಿದೆ. ಹಾಗಾಗಿ ನಾಳೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಸಂಗ್ಮಾ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News