ನಂಜನಗೂಡು: ನೂತನ ಕನಕ ಸಮುದಾಯ ಭವನ ಲೋಕಾರ್ಪಣೆ

Update: 2018-03-05 12:35 GMT

ಮೈಸೂರು,ಮಾ.5: ನಂಜನಗೂಡಿನಲ್ಲಿ ನಿರ್ಮಿಸಿರುವ ಅತ್ಯಂತ ಸುಸಜ್ಜಿತವಾದ ಎರಡು ಅಂತಸ್ತಿನ ಕನಕ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಲೋಕಾರ್ಪಣೆ ಮಾಡಿದರು.

ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿನಿಲಯ ಟ್ರಸ್ಟ್, ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾಸಂಸ್ಥೆ ಹಾಗೂ ತಾಲೂಕು ಕುರುಬರ ಸಂಘ ಇವುಗಳ ವತಿಯಿಂದ ನಿರ್ಮಿಸಿರುವ ಭವನವನ್ನು ಉದ್ಘಾಟಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕ ಸಮುದಾಯ ಭವನ ನಿರ್ಮಾಣದ ವಿಚಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 2.5 ಕೋಟಿ ರೂ. ಅನುದಾನ ನೀಡಲಾಗಿದೆ. ದಿ.ಎನ್.ರಾಚಯ್ಯ ಅವರು ಪಟ್ಟಣದಲ್ಲಿ ಕುರುಬ ಸಮುದಾಯಕ್ಕಾಗಿ ವಿದ್ಯಾರ್ಥಿನಿಲಯ, ಶಾಲೆಗಳನ್ನು ನಿರ್ಮಿಸಿದ್ದರು. ಸಮುದಾಯದ ಅಭಿವೃದ್ಧಿಗಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಅವರು ಒಮ್ಮೆ ಶಾಸಕರೂ ಆಗಿದ್ದರು. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. 

ಈ ಭವನ ನಿರ್ಮಾಣಕ್ಕೆ ಕುರುಬ ಸಮುದಾಯದ ಬಹಳಷ್ಟು ದಾನಿಗಳು ಕೊಡುಗೆ ನೀಡಿದ್ದಾರೆ. ಒಟ್ಟಾರೆ ಸಮುದಾಯದ ಎಲ್ಲರ ಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ. ಇದನ್ನು ಸಮಾಜದವರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಪುರಸಭೆಗೆ ನಗರೋತ್ಥಾನ ಯೋಜನೆಯಡಿ 25 ಕೋಟಿ ರೂ. ಮಂಜೂರು ಮಾಡಿದ್ದು, ಆ ಸಂಬಂಧ ಕಾಮಗಾರಿಗಳಿಗೂ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತಾಲೂಕಿನಾದ್ಯಂತ 8 ಶಾದಿ ಮಹಲ್‍ಗಳನ್ನು ನಿರ್ಮಿಸಲಿದ್ದು, ತಲಾ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ. ಮುಸ್ಲಿಂ ಜನಾಂಗದ ಬೀದಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೂ 4.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದಲ್ಲದೆ, 2 ಕ್ರಿಶ್ಚಿಯನ್ ಭವನಗಳಿಗೆ ತಲಾ ಒಂದು ಕೋಟಿ ರೂ., ಜೈನ ಸಮುದಾಯ ಭವನಕ್ಕೆ 60 ಲಕ್ಷ ರೂ. ನೀಡಲಾಗಿದೆ. ಎಪಿಎಂಸಿ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಬೆಳ್ಳಿ ಗದೆ ನೀಡಿ ಅಭಿನಂದನೆ: ಇದೇ ಸಂದರ್ಭದಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ಟ್ರಸ್ಟ್ ವತಿಯಿಂದ ಸಿದ್ದರಾಮಯ್ಯ ಅವರನ್ನು ಬೆಳ್ಳಿ ಗದೆ ನೀಡಿ, ಹಾರ ಹಾಕಿ ಅಭಿನಂದಿಸಲಾಯಿತು. 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ.30 ವೇತನ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಹಾರ ಹಾಕಿ ಧನ್ಯವಾದ ಅರ್ಪಿಸಲಾಯಿತು. 

ವಿವಿಧ ಕಾಮಗಾರಿಗಳಿಗೆ ಚಾಲನೆ: ಪಟ್ಟಣದಲ್ಲಿ ಶಾದಿಮಹಲ್, ಕ್ರಿಶ್ಚಿಯನ್ ಸಮುದಾಯ ಭವನ, ಜೈನ್ ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿದರು.

ಕಾಗಿನೆಲೆ ಕನಕಗುರುಪೀಠ ಮೈಸೂರು ಶಾಖೆಯ ಶ್ರೀ ಶಿವಾನಂದಪುರಿ ಸ್ವಾಮೀಜಿ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕಳಲೆ ಎನ್.ಕೇಶವಮೂರ್ತಿ, ಸಂಸದ ಆರ್. ದ್ರುವನಾರಾಯಣ, ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸೇಗೌಡ, ವರುಣ ಕ್ಷೇತ್ರ ವಸತಿ ಯೋಜನೆಗಳ ಅನುಷ್ಠಾನ ಜಾಗೃತ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ನಗರ ಸಭೆ ಉಪಾಧ್ಯಕ್ಷ ಪ್ರದೀಪ್ ಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ನೀಲಿಸಿದ್ದು ಮುಂತಾದವರು ವೇದಿಕೆಯಲ್ಲಿದ್ದರು.

ಮಾಜಿ ಅಧ್ಯಕ್ಷ ಎನ್.ಇಂದ್ರ, ಮಾಜಿ ಉಪಾಧ್ಯಕ್ಷರಾದ ಗಾಯತ್ರಿ, ಎನ್.ಎಂ.ಮಂಜುನಾಥ್, ಸದಸ್ಯರಾದ ಡಿ.ರಾಜು, ಮಟನ್ ಬಾಬು, ಮಾಜಿ ಸದಸ್ಯೆ ಸೌಭಾಗ್ಯ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷ ಚಾಮರಾಜು, ಕಾಂಗ್ರೆಸ್ ಮುಖಂಡರಾದ ಇಂಧನ್‍ಬಾಬು, ಹೆಜ್ಜಿಗೆ ಕೃಷ್ಣ, ಸೋಮಣ್ಣ, ಡಾ.ಡಿ.ತಿಮ್ಮಯ್ಯ, ಎಂ.ಬಿ.ಬಸವಣ್ಣ, ನೇರಳೆ ಎನ್.ಎಸ್.ಮಹದೇವು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ.ಬಿ.ಸ್ವಾಮಿ, ಕೆ.ಮಾರುತಿ, ಗೋಳೂರು ಕಾಳಶೆಟ್ಟಿ, ಕೆ.ನಾಗೇಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಂಜನಗೂಡಿನಿಂದ ಸಚಿವ ಎಚ್.ಸಿ.ಮಹದೇವಪ್ಪಗೆ ಟಿಕೆಟ್ ನೀಡಲು ಸಿಎಂಗೆ ಮನವಿ
ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಹದೇವಪ್ಪ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಂಜನಗೂಡಿನಲ್ಲಿ ಸೋಮವಾರ ನೂತನ ಕನಕ ಸಮುದಾಯ ಭವನದ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಸ್ತೆ ಮೂಲಕ ನಂಜನಗೂಡಿಗೆ ಆಗಮಿಸುತ್ತಿದ್ದ ವೇಳೆ ನಂಜನಗೂಡು ಪ್ರವೇಶ ಗಡಿ(ಟೋಲ್‍ಗೇಟ್) ಬಳಿ ಮಹದೇವಪ್ಪ ಬೆಂಬಲಿಗರು ಮನವಿ ಸಲ್ಲಿಸಿದರು.

ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸಲಾಯಿತು. ಆದರೆ ಅವರ ಗೆಲುವಿಗೆ ದುಡಿದಂತಹ ಅನೇಕ ಮುಖಂಡರುಗಳನ್ನು ಕಡೆಗಣಿಸಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲು ಶಾಸಕ ಕಳಲೆ ಕೇಶವಮೂರ್ತಿ ವಿಫಲರಾಗಿದ್ದಾರೆ. ಜೊತೆಗೆ ಮಹದೇವಪ್ಪ ಅವರಿಗೆ ನಂಜನಗೂಡಿನಲ್ಲಿ ಟಿಕೆಟ್ ನೀಡಿದರೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟ ಬಲಪಡಿಸಬಹುದು ಎಂದು ಬುಲೆಟ್ ಮಹದೇವಪ್ಪ, ಇಂದನ್ ಬಾಬು, ದೇಬೂರು ಸಿದ್ದಲಿಂಗಪ್ಪ, ರವಿಪ್ರಕಾಶ್, ಕೆ.ಬಿ.ಸ್ವಾಮಿ, ಚಾಮರಾಜು, ಸೇರಿದಂತೆ ಹಲವರು ಸಹಿ ಮಾಡಿದ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News