ಭೂಮಿ, ವಸತಿ ರಹಿತರ ಸಮಸ್ಯೆ ಪರಿಹಾರಕ್ಕೆ ಸರಕಾರ ಒಪ್ಪಿಗೆ: ಗೌಸ್ ಮೊಹಿದ್ದೀನ್

Update: 2018-03-05 14:30 GMT

ಚಿಕ್ಕಮಗಳೂರು, ಮಾ.5: ರಾಜ್ಯದ ಭೂಮಿ ಮತ್ತು ವಸತಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರಕಾರ ತಳೆದ ತೀರ್ಮಾನ ಒಂದು ದಿಟ್ಟ ನಡೆಯಾಗಿದ್ದು, ಜಿಲ್ಲಾಡಳಿತ ಸರಕಾರದ ಈ ತೀರ್ಮಾನದ ನಿರ್ಣಯಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಮುಂದಾಗುವ ಮೂಲಕ ಜಿಲ್ಲೆಯ ನಿವೇಶನ ರಹಿತರ, ಭೂಹೀನರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ಗೌಸ್ ಮೊಹಿದ್ದೀನ್ ಮನವಿ ಮಾಡಿದ್ದಾರೆ.

ಸೋಮರ ನಗರದ ಪ್ರೆಸ್ ಕ್ಲಬ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಭೂಮಿ, ನಿವೇಶನ ಮತ್ತು ವಸತಿ ರಹಿತರ ಹಕ್ಕುಗಳಿಗಾಗಿ ಕಳೆದ ಎರಡು ವರ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮುಂದಾಳತ್ವದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಹೋರಾಟಗಳನ್ನು ನಡೆಸಲಾಗಿದೆ. ರಾಜ್ಯಮಟ್ಟದಲ್ಲಿ 6 ಸುತ್ತು ಚಳವಳಿ ನಡೆಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ 'ಸರಕಾರ ಕೊಟ್ಟ ಮಾತು ಈಡೇರಿಸುವವರೆಗೂ ಮನೆಗೆ ಮರಳುವುದಿಲ್ಲ' ಎಂಬ ಪ್ರತಿಜ್ಞೆಯೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಸತ್ಯಾಗ್ರಹಿಗಳು ದೊರೆಸ್ವಾಮಿ ಅವರ ನೇತೃತ್ವದಲ್ಲಿ ಕಳೆದ 18 ದಿನಗಳಿಂದ ಬೆಂಗಳೂರಿನಲ್ಲಿ ಅನಿದಿಷ್ಟಾವಧಿ ಧರಣಿ ಆರಂಭಿಸಿದ್ದರು.

ಈ ನಿರಂತರ ಹೋರಾಟದ ಫಲವಾಗಿ ಜ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೋರಾಟದ ಪ್ರತಿನಿಧಿಗಳನ್ನೊಳಗೊಂಡಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ವಸತಿ ಸಚಿವ ಕೃಷ್ಣಪ್ಪ, ಸರಕಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಹಾಗೂ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯು ಮುಂದಿಟ್ಟ 11 ಪ್ರಸ್ತಾಪಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದ ಭೂಮಿ ಮತ್ತು ವಸತಿ ಹೀನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ರಾಜ್ಯ ಎಲ್ಲ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಆದೇಶಿಸಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಈ ಸಂಬಂಧ ಜಿಲ್ಲೆಯ ವಸತಿ, ಭೂ ವಂಚಿತರ ಸಮಸ್ಯೆಗಳ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅವರು ತಿಳಿಸಿದರು.

ರಾಜ್ಯ ಸರಕಾರ ಜಿಲ್ಲಾ ಮಟ್ಟದಲ್ಲಿ ವಸತಿ, ಭೂ ರಹಿತರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಲು ಅಡಿಷನಲ್ ಚೀಪ್ ಸೆಕ್ರೇಟರಿ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿಯನ್ನು ರಚಿಸುತ್ತದೆ. ಕಂದಾಯ, ಅರಣ್ಯ, ವಸತಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು  ಈ ಸಮಿತಿಯ ಸದಸ್ಯರಾಗಿದ್ದು, ನಾಗರಿಕ ಸಮಾಜದಿಂದಲೂ ನಾಲ್ವರು ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಜಿಲ್ಲಾಡಳಿತ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಪರಿಶೀಲನೆ ನಡೆಸಿ ಸರಕಾರದ ಮುಂದಿಟ್ಟಿರುವ ವಿವಿಧ ಬೇಡಿಕೆ, ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಮುಂದಿನ 15 ದಿನದೊಳಗೆ ಈ ಸಮಿತಿ ಮೂಲಕ ಬಗೆಹರಿಸಿಕೊಡಬೇಕೆಂದರು.

ಸಮಿತಿಯು ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಪೈಕಿ, ಬಡಜನರು ಪಾರಂ 50, 53, 94ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ ತಿಂಗಳ ಒಳಗೆ ವಿಲೇವಾರಿಗೆ ಕ್ರಮವಹಿಸುವುದು, ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಅವಕಾಶ ಸಿಗದ ಬಗರ್‍ಹುಕುಂ ಸಾಗುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಹೋರಾಟ ಸಮಿತಿಯ ಇಬ್ಬರು ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸುವುದು, ಲಬ್ಯ ಇರುವ ಹೆಚ್ಚುವರಿ ಭೂಲಿಯನ್ನು ಪತ್ತೆ ಹಚ್ಚಿ ಭೂ ಹೀನರಿಗೆ ಹಂಚುವುದು, ಲಕ್ಷಾಂತರ ಭೂ ರಹಿತರಿಗೆ ನಿವೇಶನ ಹಂಚುವುದು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆಗೆ ಇರುವ ನಿರ್ಬಂಧ ಸಡಿಲಿಸುವುದು, ಭೂಮಿ ಮತ್ತು ವಸತಿ ನಿವೇಶನಕ್ಕಾಗಿ ಹೋರಾಟ ಮಾಡಿದ ಸಂದರ್ಭದಲ್ಲಿ ಸಂತ್ರಸ್ತರು, ಹೋರಾಟಗಾರರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ ಎಂದು ಗೌಸ್ ಮೊಹಿದ್ದೀನ್ ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಜಿಲ್ಲಾ ಘಟಕದ ಹಾಂದಿ ಲಕ್ಷ್ಮಣ, ಗಣೇಶ್, ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News