ಗೆಲ್ಲುವ ಹಂಬಲದಲ್ಲಿ ಇನ್ನೊಬ್ಬರ ಕಾಲೆಳೆಯುವ ಕೆಲಸ ಮಾಡಬಾರದು: ಸಿ.ಟಿ.ರವಿ

Update: 2018-03-05 14:38 GMT

ಚಿಕ್ಕಮಗಳೂರು,ಮಾ.5: ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಆದರೆ ಗೆಲ್ಲುವ ಹಂಬಲದಲ್ಲಿ ಇನ್ನೊಬ್ಬರ ಕಾಲೆಳೆಯುವ ಕೆಲಸ ಮಾಡಬಾರದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಅವರು ಸೋಮವಾರ ನಗರ ಜಿಲ್ಲಾ ಆಟದ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ಸ್ತ್ರೀಶಕ್ತಿ ಒಕ್ಕೂಟ ಹಾಗೂ ಸ್ವೀಪ್ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವೇಗವಾಗಿ ಓಡಿ ಮತ್ತೊಬ್ಬರನ್ನು ಹಿಂದಿಕ್ಕುವುದರಲ್ಲಿ ತಪ್ಪಿಲ್ಲ. ಆದರೆ ಗೆಲ್ಲುವ ಸಲುವಾಗಿ ಮತ್ತೊಬ್ಬರ ಕಾಲೆಳೆಯುವುದು ತಪ್ಪು. ಕ್ರೀಡಾ ಕೂಟಗಳಿಂದ ಏಕತಾ ಮನೋಭಾವನೆ ಮೂಡುತ್ತದೆ. ಅದಕ್ಕೆ ಆರೋಗ್ಯಕರ ಸ್ಪರ್ಧೆ ಇರಬೇಕು. ಅದು ಬೆಳವಣಿಗೆಗೆ ಪೂರಕವಾಗುತ್ತದೆ. ಅಸೂಯೆ ಮತ್ತು ದ್ವೇಷ ಬೆಳೆಸುವುದನ್ನು ತಪ್ಪಿಸುತ್ತದೆ ಎಂದರು. ಕ್ರೀಡಾಳುಗಳಲ್ಲಿ ಮಾನವೀಯತೆಯೂ ಇರಬೇಕು. ಬಿದ್ದವರನ್ನು ಎಬ್ಬಿಸಿ ಜೊತೆಗೆ ಕರೆದೊಯ್ಯುವ ಮನೋಭಾವನೆ ಬೆಳೆಯಬೇಕು ಎಂದು ಸಲಹೆ ಮಾಡಿದರು.

ನಾರೀ ಶಕ್ತಿ ದೇಶದ ಶಕ್ತಿ ಎಂದು ನಂಬಿದವರು ನಾವು. ಪುರಾಣದಲ್ಲಿ ಎಲ್ಲ ಪ್ರಮುಖ ಖಾತೆಗಳು ಹೆಣ್ಣು ದೇವತೆಗಳ ಕೈಯಲ್ಲೇ ಇದ್ದವು. ಪಾರ್ವತಿ ಕೈಯಲ್ಲಿ ಗೃಹ ಖಾತೆ ಇದ್ದರೆ, ರಕ್ಷಣಾ ಖಾತೆ ದುರ್ಗಾದೇವಿ, ಹಣಕಾಸು ಖಾತೆ ಲಕ್ಷ್ಮಿ ಬಳಿ ಹಾಗೂ ಶಿಕ್ಷಣ ಖಾತೆ ಸರಸ್ವತಿ ಬಳಿ ಇತ್ತು. ಬಹುಷಃ ಅಂತಹದೇ ದಿನಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಬರಬಹುದು ಎಂದರು.

ಸಮಾರಂಭದಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಸತ್ಯಭಾಮ ಮಾತಾನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ತೋರುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರತಿದಿನ ಮಹಿಳಾ ದಿನಾಚರಣೆ ಆಚರಿಸುವಂತಾದರೆ ಮಹಿಳಾ ಸಬಲೀಕರಣ ಸಾಧ್ಯ ಎಂದರು. ಮಹಿಳೆಯರು ಮತದಾನದಲ್ಲಿ ಹೆಚ್ಚು  ಭಾಗವಹಿಸಬೇಕು. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಉಳಿದವರಿಗೂ ತಿಳಿಸಿ ಜಾಗೃತಿ ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಪಿ.ಬಸವರಾಜಯ್ಯ ಸ್ವಾಗತಿಸಿದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಸೋಮಶೇಖರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳ ಹುಲ್ಲಳ್ಳಿ ಉಪಸ್ಥಿತರಿದ್ದರು. ದೇವಾನಂದ್ ನಿರೂಪಿಸಿ ವಂದಿಸಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News