ಪಿಎನ್‌ಬಿ ವಂಚನೆ ಪ್ರಕರಣ: ನೀರವ್ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ಸಿಬಿಐ ವಿರುದ್ಧ ಹೈಕೋರ್ಟ್ ಗೆ ಅರ್ಜಿ !

Update: 2018-03-05 14:44 GMT

 ಮುಂಬೈ, ಮಾ.5: ಸಾವಿರಾರು ಕೋಟಿ ರೂ. ಮೊತ್ತದ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಸಿಬಿಐ ತನ್ನನ್ನು ಕಾನೂನು ಉಲ್ಲಂಘಿಸಿ ಬಂಧಿಸಿದೆ ಎಂದು ವಜ್ರಾಭರಣ ಉದ್ಯಮಿ ನೀರವ್ ಮೋದಿಯ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಫೆ.20ರಂದು ರಾತ್ರಿ 8:00 ಗಂಟೆಗೆ ಸಿಬಿಐ ಅಧಿಕಾರಿಗಳು ತನ್ನನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯರನ್ನು ಸೂರ್ಯ ಮುಳುಗಿದ ಬಳಿಕ ಬಂಧಿಸುವಂತಿಲ್ಲ ಎಂದು ಕಾನೂನಿನಲ್ಲಿ ತಿಳಿಸಲಾಗಿದೆ.ಆದ್ದರಿಂದ ತನ್ನ ಬಂಧನ ಕ್ರಮ ಅಸಾಂವಿಧಾನಿಕ ಹಾಗೂ ಅಕ್ರಮ ಎಂದು ಹೈಕೋರ್ಟ್ ಆದೇಶ ನೀಡಬೇಕು ಎಂದು ಕವಿತಾ ಮಂಕಿಕರ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕವಿತಾ ಸೇರಿದಂತೆ ಐವರು ಉದ್ಯೋಗಿಗಳನ್ನು ಸಿಬಿಐ ಫೆ.20ರಂದು ಬಂಧಿಸಿದ್ದು ಕವಿತಾರಿಗೆ ಮಾ.5ರವರೆಗೆ ಸಿಬಿಐ ಕಸ್ಟಡಿ ವಿಧಿಸಲಾಗಿತ್ತು.

ಕವಿತಾ ಅವರು ನೀರವ್ ಮೋದಿಯ ಕಾರ್ಯನಿರ್ವಾಹಕ ಸಹಾಯಕಿಯಾಗಿದ್ದು ಮೋದಿಯ ಮೂರು ಸಂಸ್ಥೆಗಳಾದ ಡೈಮಂಡ್ ಆರ್ , ಸ್ಟೆಲ್ಲರ್ ಡೈಮಂಡ್ ಹಾಗೂ ಸೋಲಾರ್ ಎಕ್ಸ್‌ಪೋರ್ಟ್ಸ್‌ನ ಅಧಿಕೃತ ಸಹಿದಾರರಾಗಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್, ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿದೆ. ವಂಚನೆ ಎಸಗುವ ಉದ್ದೇಶದಿಂದ ತಿಳುವಳಿಕೆ ಪತ್ರ(ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್)ಕ್ಕೆ ಕವಿತಾ ಸಹಿ ಹಾಕಿದ್ದಾರೆ ಎಂದು ಸಿಬಿಐ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News