ಬಸವಣ್ಣನವರೇ ದಲಿತ ಸಾಹಿತ್ಯದ ನಿಜವಾದ ವಾರಸುದಾರರು: ಡಾ.ಎಲ್.ಹನುಮಂತಯ್ಯ

Update: 2018-03-05 15:37 GMT

ದಾವಣಗೆರೆ,ಮಾ.5: ವಚನ ಚಳವಳಿಯ ಮೂಲಕ ದಲಿತ ಸಾಹಿತ್ಯ ಹುಟ್ಟುಹಾಕಿದ ವಿಶ್ವಗುರು ಬಸವಣ್ಣನವರೇ ದಲಿತ ಸಾಹಿತ್ಯದ ನಿಜವಾದ ವಾರಸುದಾರರು ಎಂದು ಸಾಹಿತಿ ಡಾ.ಎಲ್.ಹನುಮಂತಯ್ಯ ಪ್ರತಿಪಾದಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಇವುಗಳ ಸಹಯೋಗದಲ್ಲಿ ಭಾನುವಾರದಿಂದ ಆರಂಭವಾಗಿರುವ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯತೆ ಹುಟ್ಟು ಹಾಕಿದ್ದ ಪ್ರಧಾನ ಸಂಸ್ಕೃತಿ ಪ್ರಶ್ನಿಸುವ ಉದ್ದೇಶದಿಂದ 12ನೇ ಶತಮಾನದಲ್ಲಿ ಬಸವಣ್ಣನವರು ವಚನ ಚಳವಳಿ ಮೂಲಕ ದಲಿತ ಸಾಹಿತ್ಯ ಹುಟ್ಟು ಹಾಕಿದ್ದರು. ಮಾದಾರ ಚನ್ನಯ್ಯನ ಮನೆಯ ಮಗ ನಾನು ಎಂದು ಪ್ರತಿಪಾದಿಸುವ ಬಸವಣ್ಣ ತಳಮಟ್ಟದ ಜನರೊಂದಿಗೆ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದ ಬಸವ ಮಾರ್ಗ ದಲಿತ ಸಾಹಿತ್ಯಕ್ಕೆ ರಹದಾರಿಯಾಗಿದೆ ಎಂದ ಅವರು, ದಲಿತ ಚಿಂತನೆ ಎಂಬುದು ಸಮಾಜದ ಒಳಿತಿಗೆ ಹಾಗೂ ಉಳುವಿಗೆ ಮಾಡಬೇಕಾದ ಚಿಂತನೆಯಾಗಿದೆ. ಈ ಚಿಂತನೆ ಇಲ್ಲದಿದ್ದರೆ, ಸಮಾಜ ದಿಕ್ಕು ತಪ್ಪುವ ಅಪಾಯಗಳಿವೆ. ಮಾಡಿದ ತಪ್ಪಿಗೆ ತಳಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಶಿಕ್ಷೆ ಅನುಭವಿಸಿದ, ದೌರ್ಜನ್ಯ, ದಬ್ಬಾಳಿಕೆ, ಯಾತನೆಗೆ ಒಳಗಾದ ಕಾರಣಕ್ಕೆ ಕರ್ನಾಟಕದಲ್ಲಿ ಆರೋಗ್ಯಕರ ದಲಿತ ಚಳವಳಿ ಹುಟ್ಟಿಕೊಂಡಿತ್ತು. ಆದರೆ, ಸೈದ್ಧಾಂತಿಕ ಕಾರಣ ಅಥವಾ ಸ್ವಾರ್ಥದ ಕಾರಣಕ್ಕಾಗಿ ದಲಿತ ಚಳವಳಿ ಪ್ರಸ್ತುತ ವಿಫಲವಾಗಿ ನೂರಾರು ಗುಂಪುಗಳಾಗಿವೆ. ಆದ್ದರಿಂದ ದಲಿತ ಚಿಂತಕರು ಹಾಗೂ ಹೋರಾಟಗಾರರು ಇಂಥಹ ಸಮ್ಮೇಳನಗಳ ಮೂಲಕ ನಿರಂತರವಾಗಿ ದಲಿತ ಚಳವಳಿ-ಸಾಹಿತ್ಯದ ಬಗ್ಗೆ ಚಿಂತನೆ ನಡೆಸಬೇಕೆಂದು ಕರೆ ನೀಡಿದರು.

ಪ್ರಗತಿಪರ ಚಿಂತನೆ ಮಾಡುವವರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಆಧುನಿಕ ಮೌಲ್ಯಗಳೊಂದಿಗೆ ಸಂಘರ್ಷ ನಡೆಯುತ್ತಿದೆ ಎಂದ ಅವರು, ಸಮ ಸಮಾಜ ಕಟ್ಟುವ ಕನಸು ಕಾಣುತ್ತಿರುವವರು ಒಂದಾಗಿ, ಅಸ್ಪೃಶ್ಯತಾ  ವಿರೋಧಿ ಆಂದೋಲನ, ಸಹಭೋಜನದಂಥಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವ ಪೀಳಿಗೆಯಲ್ಲಿ ನವ ಭಾರತದ ಕನಸು ಬಿತ್ತಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸಮಾಜದ ಕಟ್ಟಕಡೆಯ ವ್ಯಕ್ತಿಯು ಅನುಭವಿಸಿದ ಕಷ್ಟ, ಕಾರ್ಪಣ್ಯದ ಅನುಭಾವವಾಗಿ ದಲಿತ ಸಾಹಿತ್ಯ ಹುಟ್ಟಿದೆ. ದಲಿತ ವರ್ಗಕ್ಕೆ ಸೇರಿದ ವಾಲ್ಮೀಕಿ, ವ್ಯಾಸ ಮಹರ್ಷಿಗಳು ಮಹಾಗ್ರಂಥಗಳನ್ನು ನೀಡಿದ್ದಾರೆ. ಈ ದಲಿತ ಸಾಹಿತ್ಯ ಸಮ್ಮೇಳನವು ಯಶಸ್ಸಾಗಿ, ಉತ್ತಮ ಆಲೋಚನೆಗಳು ಹುಟ್ಟಿ, ಸಮಾಜವನ್ನು ಸರಿ ಮಾಡುವ ಫಲಿತಾಂಶ ಹೊರ ಬರಲಿ ಎಂದು ಆಶಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧಿಕಾರದ ನಿರ್ದೇಶಕರುಗಳಾದ ಬಿ.ಪಿ. ವಿಜಯೇಂದ್ರ, ದ್ವಾರನಕುಂಟೆ ಪಾತಣ್ಣ, ಸೌಭಾಗ್ಯ, ಡಾ.ಜಯದೇವಿ ಗಾಯಕ್‍ವಾಡ್ ಇದ್ದರು. ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News