ಅಲಕ್ಷಿತ ಸಮುದಾಯಕ್ಕೆ ನೆರವು ಎನ್ನುವುದು ಮರೀಚಿಕೆ: ಡಾ.ಬರಗೂರು ರಾಮಚಂದ್ರಪ್ಪ

Update: 2018-03-05 17:14 GMT

ತುಮಕೂರು,ಮಾ.05: ಅಲಕ್ಷಿತ ಸಮುದಾಯದಲ್ಲಿ ಸಂಘಟಿತರು ಮತ್ತು ಅಸಂಘಟಿತರು ಇಬ್ಬರು ಇದ್ದು, ಅಸಂಘಟಿತ ವಲಯಕ್ಕೆ ಸೇರಿದ ಮಹಿಳೆಯರು, ದಲಿತರಿಗೆ ನೆರವಾಗುವವರೇ ಇಲ್ಲವಾಗಿದ್ದಾರೆ. ದೇಶದ ಶೇ50ರಷ್ಟು ಜನತೆಯ ದಿನದ ಅದಾಯ 20 ರೂ ಎಂದು ಅರ್ಜುನ್‍ ಸೇನ್ ಗುಪ್ತ ವರದಿಯೇ ಬಹಿರಂಗ ಪಡಿಸಿದೆ. ಇವರ ಬದುಕಿನ ತುಲನಾತ್ಮಕ ಅಧ್ಯಯನ ಅಗತ್ಯ ಎಂದು ಹಿರಿಯ ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ತುಮಕೂರು ವಿವಿಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ಅಧುನಿಕ ಸಾಹಿತ್ಯದಲ್ಲಿ ಅಲಕ್ಷಿತ ಸಮುದಾಯಗಳ ಸಂಕಥನ ಎಂಬ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಲಕ್ಷಿತ ವಲಯದ ಅಧ್ಯಯನ ಸಾಮಾಜಿಕ ಪ್ರಜ್ಞೆಯ ಶೋಧನೆಯಾಗಬೇಕು ಎಂದರು.

ಫುಟ್‍ಪಾತ್‍ನಲ್ಲಿ ವಾಸಿಸುವವರು, ರಸ್ತೆ ಬದಿ ಕರಕುಶಲ ವಸ್ತು ತಯಾರಿಸಿ ಮಾರಾಟ ಮಾಡಿ ಬದುಕುವವರು, ಎಳೆ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆಯಲ್ಲಿ ಭಿಕ್ಷೆ ಬೇಡುವವರು,ಸ್ವಾತಂತ್ರ್ಯ ಸಂಭ್ರಮದ ವೇಳೆ ತ್ರಿವರ್ಣ ಧ್ವಜ ಮಾರುವ ಮಕ್ಕಳು, ಇವರ ಹೀನಾಯ ಸ್ಥಿತಿ, ಸುಧಾರಣೆ ಮಾರ್ಗಗಳ ಬಗ್ಗೆ ಸಂಶೋಧನಾಕಾರ ಸಾಹಿತ್ಯ ಬೆಳಕು ಚೆಲ್ಲಬೇಕು. ಅಲಕ್ಷಿತ ಲೋಕದಲ್ಲಿ ಅನೇಕ ಶ್ರೇಣಿಗಳಿರುವ ಆರ್ಥಿಕ, ಸಾಮಾಜಿಕ ಸಂಕಥದಲ್ಲಿ ಅಂದಿನ ಚಾರಿತ್ರ್ಯಿಕ ಸಂದರ್ಭದ ಸವಾಲುಗಳು, ಇಂದಿನ ಆಡಳಿತ ವ್ಯವಸ್ಥೆ ಎರಡನ್ನೂ ತುಲನೆ ಮಾಡಬೇಕಿರುವುದು ಇಂದಿನ ವಿವೇಕ. ಇತಿಹಾಸ, ಮನಃಶಾಸ್ತ್ರ, ರಾಜಕೀಯಶಾಸ್ತ್ರ ಒಳಗೊಂಡ, ಆಧುನಿಕತೆ ಹಾಗೂ ಆಗಿನ ಜಾನಪದದ ನಡುವಿನ ಅಂತರದೊಳಗೆ ಶಿಸ್ತಿನ ಅಧ್ಯಯನ ಆಗಬೇಕು ಎಂದು ಡಾ.ಬರಗೂರು ರಾಮಚಂದ್ರಪ್ಪ ಸಂಶೋಧಕರಿಗೆ ಸಲಹೆ ನೀಡಿದರು. 

ಏಕರೂಪ ನಾಗರಿಕ ಸಂಹಿತೆ ಹುಸಿ ಮತ್ತು ಅವಾಸ್ತವಿಕ. ಬಹುತ್ವದ ಜೀವನ ಹೊಂದಿರುವ ಭಾರತದಲ್ಲಿ ಅಂತಹ ಸಂಹಿತೆಯಿಂದ ಅಲಕ್ಷಿತ ಸಮುದಾಯಗಳಿಗೆ ನ್ಯಾಯ ದೊರೆಯುವುದಿಲ್ಲ. ಇಂತಹ ಸಂಹಿತೆಯನ್ನು ಜಾರಿಗೆ ತರಲು ಸದ್ಯದಲ್ಲೇ ವಿಷಯ ಮುನ್ನೆಲೆಗೆ ಬರುವ ಲಕ್ಷಣವಿದೆ. ಏಕ ಧರ್ಮ, ಏಕ ಭಾಷೆ, ಏಕ ಅಧಿಪತ್ಯ ಸ್ಥಾಪಿಸುವ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಸಂಘರ್ಷಕ್ಕೆ ಕಾರಣವಾಗಿಸುವ ರಾಜಕೀಯ ತಂತ್ರವಿದು. ಧರ್ಮ ಮತ್ತು ಧಾರ್ಮಿಕತೆ ಬೇರೆ,ಬೇರೆ. ಧರ್ಮಕ್ಕೆ ಬೈಲಾ ಇದೆ. ಭಕ್ತಿಗೆ ಕಟ್ಟುಪಾಡುಗಳಿಲ್ಲ. ಆದರೆ, ಮತೀಯ ವಾದಿಗಳು ಭಕ್ತಿಗೂ ಸಂಹಿತೆಯನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.

ಲೇಖಕಿ, ಹೋರಾಟಗಾರ್ತಿ ಬಿ.ಟಿ. ಲಲಿತಾನಾಯ್ಕ ಮಾತನಾಡಿ, ಅಲಕ್ಷಿತ ಸಮುದಾಯಗಳು ತಮ್ಮದೇ ಕಟ್ಟುಪಾಡು, ನೀತಿ ನಿಯಮಗಳನ್ನು ಅಳವಡಿಸಿಕೊಂಡು ಬಾಳಿದ್ದರು. ಮಾನವೀಯ ಮೌಲ್ಯಗಳೇ ಅವರ ಆಚಾರ ವಿಚಾರಗಳ ಪ್ರಮುಖ ಅಂಶಗಳಾ ಗಿದ್ದವು. ಮಾನವೀಯ ಚೌಕಟ್ಟು ಮೀರಿ ಹೋಗದಂತೆ ತಡೆಯಲು ದೇವರು, ದೆವ್ವಗಳನ್ನು ಪೊಲೀಸರು, ನ್ಯಾಯಾಧೀಶರಂತೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದರು 

ವಿವಿ ಕುಲಪತಿ ಪ್ರೊ. ಜಯಶೀಲ,ಸಾಹಿತಿ ರಹಮತ್ ತರೀಕೆರೆ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್. ಶಾಲಿನಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೀತಾವಂಸತ್, ಸಾಹಿತಿಗಳಾದ ಡಾ.ನಟರಾಜ್‍ಬೂದಾಳ್, ಕೆ.ಬಿ. ಸಿದ್ದಯ್ಯ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News