ಪ್ರಜಾಸತ್ತೆ ಬಿಕರಿಗೆ

Update: 2018-03-06 04:14 GMT

 ಈಶಾನ್ಯ ಭಾರತದಲ್ಲಿ ಬಿಜೆಪಿ ನಡೆಸುತ್ತಿರುವ ರಾಜಕೀಯ ಭಾರತದ ಪ್ರಜಾಸತ್ತೆಯ ಮಾನವನ್ನು ವಿಶ್ವದ ಮುಂದೆ ಹರಾಜಿಗಿಟ್ಟಿದೆ. ಮೇಘಾಲಯದಲ್ಲಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡ ಬಿಜೆಪಿ ಅಲ್ಲಿ ನಡೆಸುತ್ತಿರುವ ಕುತಂತ್ರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಬಹಿರಂಗವಾಗಿ ಹಣ ಚೆಲ್ಲಿ ತನ್ನ ಬೆಂಬಲದ ಸರಕಾರವನ್ನು ನಿರ್ಮಾಣ ಮಾಡಲು ಬಿಜೆಪಿ ಯತ್ನಿಸಿದೆ. ಅದರ ಭಾಗವಾಗಿ, ಬರೇ 19 ಕ್ಷೇತ್ರಗಳನ್ನಷ್ಟೇ ಗೆದ್ದಿರುವ ನ್ಯಾಶನಲ್ ಪೀಪಲ್ಸ್ ಪಕ್ಷ ಅಧಿಕಾರ ಹಿಡಿಯುವ ಹಾದಿಯಲ್ಲಿದೆ. ಮೇಘಾಲಯ ರಾಜ್ಯಪಾಲ ಗಂಗಾಪ್ರಸಾದ್ ತಮ್ಮ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಕೊನ್ರಾಡ್ ಸಂಗ್ಮಾ ತಿಳಿಸಿದ್ದಾರೆ. ಕಾಂಗ್ರೆಸ್ 21 ಸ್ಥಾನಗಳನ್ನುತನ್ನದಾಗಿಸಿಕೊಂಡಿದ್ದರೂ ಅಧಿಕಾರ ಹಿಡಿಯುವುದು ಅದಕ್ಕೆ ಕಷ್ಟವಾಗಿದೆ. ಒಂದು ವೇಳೆ ಅದು ಮೈತ್ರಿಯ ಮೂಲಕ ಸರಕಾರ ರಚನೆ ಮಾಡಿದರೂ ಅದಕ್ಕೆ ಆಯಸ್ಸು ತೀರಾ ಕಡಿಮೆ. ಈಗಾಗಲೇ ಅರುಣಾಚಲ, ಉತ್ತರಾಖಂಡದಂತಹ ರಾಜ್ಯಗಳಲ್ಲಿ ಹಣದ ಮೂಲಕ ಶಾಸಕರನ್ನು ಕೊಂಡುಕೊಂಡು ಅಸ್ತಿತ್ವದಲ್ಲಿದ್ದ ಸರಕಾರವನ್ನು ಬೀಳಿಸಲು ಹವಣಿಸಿದ ಕಪ್ಪು ಇತಿಹಾಸ ಬಿಜೆಪಿಗಿದೆ. ಹೀಗಿರುವಾಗ, ಅಲ್ಪ ಬಹುಮತದೊಂದಿಗೆ ಸರಕಾರ ರಚಿಸಿದರೆ ಅದು ಉಳಿಯುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೂ, ಸರಕಾರ ರಚಿಸುವಲ್ಲಿ ಅತ್ಯುತ್ಸಾಹವನ್ನು ತೋರಿಸಿಲ್ಲ.

ನಾಗಾಲ್ಯಾಂಡ್‌ನಲ್ಲಿಯೂ ಬಿಜೆಪಿ ಸಮಯ ಸಾಧಕತನ ರಾಜಕೀಯ ನಡೆಸಲು ಹೊರಟಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಪಿಎಫ್ 29 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿ ಮತ್ತು ಎನ್‌ಡಿಪಿಪಿ ಪಕ್ಷ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು 24 ಸ್ಥಾನಗಳನ್ನು ಗೆದ್ದಿದೆ. ಆದರೆ ಇದೀಗ ಮೈತ್ರಿಯನ್ನು ಮುರಿದು, ತನ್ನ ಎದುರಾಳಿಯಾಗಿರುವ ಎನ್‌ಪಿಎಫ್‌ಗೆ ಬೆಂಬಲ ನೀಡುವ ಮೂಲಕ ಬಿಜೆಪಿ ನಾಗಾಲ್ಯಾಂಡ್‌ನಲ್ಲಿ ಸರಕಾರ ರಚಿಸಲು ಹೊರಟಿದೆ. ಅಂದರೆ ಎಲ್ಲ ರಾಜಕೀಯ ವೌಲ್ಯಗಳನ್ನು ಗಾಳಿಗೆ ತೂರಿ, ಅಧಿಕಾರ ಹಿಡಿಯಲು ಯಾವ ಪಾತಾಳಕ್ಕಿಳಿಯಲೂ ಸಿದ್ಧ ಎನ್ನುವುದನ್ನು ಬಿಜೆಪಿ ಸಾಬೀತು ಮಾಡುತ್ತಿದೆ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಿಗೇ ಅಲ್ಲಿಯ ಪ್ರಬಲ ಬುಡಕಟ್ಟು ಸಮುದಾಯ ‘ಬಹುಸಂಖ್ಯಾತ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ತ್ರಿಪುರಾ ರಾಜ್ಯವನ್ನು ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದೆ.

ಬಿಜೆಪಿ ಕಳೆದ ಚುನಾವಣೆಯಲ್ಲಿ ಇಲ್ಲಿನ ಪ್ರತ್ಯೇಕತಾ ವಾದಿಗಳ ಜೊತೆಗೆ ಕೈ ಜೋಡಿಸಿತ್ತು. ಇದೀಗ ಚುನಾವಣಾ ಫಲಿತಾಂಶದಿಂದ ತ್ರಿಪುರಾವನ್ನು ಪ್ರತ್ಯೇಕಗೊಳಿಸುವ ಧ್ವನಿಗೆ ಬಲಬಂದಂತಾಗಿದೆ. ಈ ಬೇಡಿಕೆ ಮುಂದಿನ ದಿನಗಳಲ್ಲಿ ತ್ರಿಪುರಾದಲ್ಲಿರುವ ದಲಿತ ಮತ್ತು ಅಲ್ಪಸಂಖ್ಯಾತರ ಅಸ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ. ಎಡರಂಗ ಸರಕಾರ ಅಲ್ಲಿನ ದಲಿತ ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಗರಿಷ್ಠ ಮಟ್ಟದಲ್ಲಿ ಯತ್ನಿಸಿತ್ತು. ಇದೀಗ ಬಲಾಢ್ಯ ಬುಡಕಟ್ಟು ಸಮುದಾಯವೇ ಸರಕಾರದ ಭಾಗವಾಗಿರುವುದರಿಂದ, ಅಲ್ಲಿನ ದುರ್ಬಲ ಸಮುದಾಯ ಆತಂಕದಲ್ಲಿ ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಯಾವ ಬೆಲೆ ತೆತ್ತಾದರೂ ಅಧಿಕಾರ ಹಿಡಿಯಬೇಕು ಎನ್ನುವ ಆಸಕ್ತಿಯನ್ನು ಹೊಂದಿದೆ. ಈ ಆಸಕ್ತಿಯ ಹಿಂದೆ ಸ್ಪಷ್ಟವಾಗಿ ಕಾರ್ಪೊರೇಟ್ ಶಕ್ತಿಗಳು ಇವೆ. ಈಶಾನ್ಯ ಭಾರತದಲ್ಲಿ ತಮ್ಮ ಉದ್ದಿಮೆಗಳು ನೆಲೆ ನಿಲ್ಲಬೇಕಾದರೆ ತಮ್ಮ ಹಿತ ಕಾಯುವ ಸರಕಾರ ಅಲ್ಲಿರಬೇಕು ಎನ್ನುವುದು ಅವುಗಳ ಉದ್ದೇಶ. ಈ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯದ ಜೊತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚನೆ ಮಾಡಿದ್ದೇ ಆದರೆ, ಅದರಿಂದ ಈ ಕಾರ್ಪೊರೇಟ್ ಧನಿಗಳಿಗೆ ಸಾಕಷ್ಟು ಲಾಭಗಳಿವೆ. ಅತ್ಯಂತ ಸೂಕ್ಷ್ಮ ಭಾಗವಾಗಿರುವ ಈಶಾನ್ಯದಲ್ಲಿ ಬೃಹತ್ ಉದ್ಯಮಿಗಳು ಮತ್ತು ಸಂಘಪರಿವಾರ ಜೊತೆಯಾಗಿ ಅಲ್ಲಿ ರಾಡಿ ಎಬ್ಬಿಸಲು ಹೋದರೆ ಮತ್ತೊಂದು ಕಾಶ್ಮೀರವಾಗಿ ಅದು ಬದಲಾಗುವುದರಲ್ಲಿ ಅನುಮಾನವಿಲ್ಲ.

ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮೃದು ನಿಲುವು ತಳೆದಿರುವ ಪಿಡಿಪಿಯ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಮತ್ತು ಸಂಘಪರಿವಾರ ಮಾಡಿಟ್ಟಿರುವ ಅನಾಹುತವನ್ನು ಇಂದು ದೇಶ ಉಣ್ಣುತ್ತಿದೆ. ಕಾಶ್ಮೀರದಲ್ಲಿ ಹಿಂಸೆ ಉಲ್ಬಣಿಸಿದೆ. ನಮ್ಮ ಯೋಧರ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಈಶಾನ್ಯ ಭಾರತವೂ ಮಗದೊಂದು ಕಾಶ್ಮೀರವಾಗಿ ಕಾಡಿದರೆ ಅಚ್ಚರಿಯೇನೂ ಇಲ್ಲ.

 ಈಶಾನ್ಯ ರಾಜ್ಯದ ಕೊಳಕು ರಾಜಕೀಯ ತಂತ್ರವನ್ನು ಬಿಜೆಪಿಯು ಕರ್ನಾಟಕದಲ್ಲಿ ಅನುಷ್ಠಾನಕ್ಕಿಳಿಸುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಹಣ ಮತ್ತು ಕೋಮುವಾದ ಎರಡನ್ನು ಬಳಸಿಕೊಂಡು ಈ ಬಾರಿ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸಲು ಅದು ಮುಂದಾಗಿದೆ. ಕರಾವಳಿಯನ್ನು ಕೇಂದ್ರವಾಗಿಟ್ಟುಕೊಂಡು ಕೋಮು ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಲು ಶತ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕರ್ನಾಟಕದಲ್ಲಿ ಪ್ರವಾಸಗೈಯಲು ಹೊರಟಿದ್ದಾರೆ. ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿಯ ನಾಯಕರು ಅವಾಚ್ಯ ಮಾತುಗಳನ್ನು ಸಾರ್ವಜನಿಕವಾಗಿ ಆಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಮೂಲಕ ಕಾರ್ಯಕರ್ತರಿಗೆ ವ್ಯಾಪಕ ಹಣ ಹಂಚುವ ಕಾರ್ಯವೂ ನಡೆಯುತ್ತಿದೆ ಎನ್ನುವ ಆರೋಪಗಳಿವೆ. ಈಶಾನ್ಯ ಭಾರತದಲ್ಲಿ ಹೇಗೆ ಕಾರ್ಯಕರ್ತರನ್ನು, ರಾಜಕೀಯ ಮುಖಂಡರನ್ನು ಹಣದಿಂದ ಕೊಂಡುಕೊಳ್ಳಲಾಯಿತೋ ಅದೇ ಪ್ರಯೋಗ ಕರ್ನಾಟಕದಲ್ಲಿ ಮುಂದುವರಿಯುವ ಎಲ್ಲ ಸೂಚನೆಗಳಿವೆ. ಒಂದಂತೂ ಸತ್ಯ. ದೇಶಾದ್ಯಂತ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಹಣವನ್ನು ಈ ಬಾರಿ ಚೆಲ್ಲಿರುವುದು ಬಿಜೆಪಿ. ನೋಟು ನಿಷೇಧದ ಬಳಿಕವೂ ಬಿಜೆಪಿ ಈ ಮಟ್ಟಿಗೆ ಹಣ ಚೆಲ್ಲುತ್ತದೆಯೆಂದಾದರೆ ಆ ಹಣ ಯಾವ ಮೂಲದಿಂದ ಅದಕ್ಕೆ ದೊರಕಿದೆ? ಆರೆಸ್ಸೆಸ್‌ನಂತಹ ಸಂಸ್ಥೆಯೂ ನೋಟು ನಿಷೇಧದಿಂದ ಯಾವ ಬಿಕ್ಕಟ್ಟನ್ನೂ ಎದುರಿಸಿಲ್ಲ. ಪರಿಸರ, ಸಮಾಜಕ್ಕಾಗಿ ಹೋರಾಡುವ ಎನ್‌ಜಿಒಗಳ ಆರ್ಥಿಕ ಮೂಲದ ಮೇಲೆ ಕಣ್ಣಿಡುವ ಸರಕಾರ, ಆರೆಸ್ಸೆಸ್‌ನಂತಹ ಸಂಸ್ಥೆಗೆ ಬಂದು ಬೀಳುತ್ತಿರುವ ಹಣದ ಮೂಲದ ಬಗ್ಗೆ ಮಾತ್ರ ಕುರುಡಾಗಿದೆ. ಈ ಹಣ ಚುನಾವಣೆಯಲ್ಲಿ ಬಳಕೆಯಾಗುತ್ತಿರುವುದೂ ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಒಟ್ಟಿನಲ್ಲಿ ಹಣವೇ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದಾದರೆ, ಕರ್ನಾಟಕದಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

 ಈಶಾನ್ಯ ಭಾಗದಲ್ಲಿ ಎಡರಂಗ ಸೋತಾಕ್ಷಣ ಕೆಲವು ಮುಖಂಡರು ‘ಇವಿಎಂ ಮತಯಂತ್ರ’ಗಳ ಕಡೆಗೆ ಬೆಟ್ಟು ಮಾಡಿ ತೋರಿಸಿದರು. ನಿಜಕ್ಕೂ ಚುನಾವಣಾಯಂತ್ರಗಳ ಮೇಲೆ ಅನುಮಾನವಿದ್ದರೆ ಚುನಾವಣೆಗೆ ಮುನ್ನವೇ ಅದರ ವಿರುದ್ಧ ಪ್ರಬಲವಾಗಿ ಧ್ವನಿಯೆತ್ತಬೇಕು. ಚುನಾವಣೆಯ ಫಲಿತಾಂಶಗಳನ್ನು ನೋಡಿ ಅದರ ಪರ-ವಿರುದ್ಧ ಮಾತನಾಡುವುದು ಸಮಯಸಾಧಕತನವಾಗುತ್ತದೆ. ಕರ್ನಾಟಕದಲ್ಲೂ ಜಾತ್ಯತೀತ ಶಕ್ತಿಗಳು ಈ ಬಗ್ಗೆ ಮೊದಲೇ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇವಿಎಂ ಮತಯಂತ್ರಗಳನ್ನು ಅದು ಸಂಶಯಿಸುತ್ತದೆ ಎಂದಾದರೆ, ಚುನಾವಣೆಗೆ ಮುನ್ನವೇ ಅದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಚುನಾವಣಾ ಆಯೋಗದ ಗಮನ ಸೆಳೆಯಬೇಕು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News