ಎರಡು ದಶಕಗಳ ತ್ರಿಪುರಾದ ‘ಕೆಂಪು ನೆಲ’ ನಾಲ್ಕು ವರ್ಷಗಳಲ್ಲಿ ‘ಕೇಸರಿ’ ಆದ ಬಗೆ...

Update: 2018-03-05 18:32 GMT

2014ರ ನಂತರ ಬಿಜೆಪಿ ಮುಂದಕ್ಕೆ ತಂದ ಈ ನವಚುನಾವಣಾ ತಂತ್ರಗಾರಿಕಾ ಮಾದರಿ ಮತ್ತು ಅದಕ್ಕಿಂತ ಹಿಂದಿದ್ದ ತತ್ವ ಸಿದ್ಧಾಂತಗಳ ಮಾದರಿಗಳಲ್ಲಿ ಯಾವ ಮಾದರಿ ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂಬ ಅಂಶ ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಅದು ಏನೇ ಇದ್ದರೂ ತ್ರಿಪುರಾದ ಚುನಾವಣೆಯಲ್ಲಿ ಎಡರಂಗದ ಸೋಲಿಗೆ ಚುನಾವಣಾ ತಂತ್ರಗಾರಿಕೆ ಕುರಿತ ಅವರ ಈ ಹಿಂದಿನ ಸಾಂಪ್ರದಾಯಿಕ ಧೋರಣೆ ಪ್ರಮುಖ ಕಾರಣವಾಗಿದೆ ಅನ್ನಿಸುತ್ತಿದೆ.

1988ರಿಂದ 1993 ರ ಅವಧಿಯಲ್ಲಿ ಕಾಂಗ್ರೆಸ್ ಮತ್ತು TUJS  ಒಕ್ಕೂಟದ ಸರಕಾರ ರಚನೆಯಾಗಿದ್ದು ಬಿಟ್ಟರೆ ತ್ರಿಪುರಾದಲ್ಲಿ ಎಡರಂಗ 1978ರ ಕಾಲದಿಂದಲೂ ಆಡಳಿತ ನಡೆಸುತ್ತಿತ್ತು. 1993ರ ನಂತರದ ಕಳೆದ 25 ವರ್ಷಗಳಿಂದ ನಿರಂತರವಾಗಿ ತ್ರಿಪುರಾವನ್ನು ಭಾರತದ ಅತ್ಯಂತ ಸರಳ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಎಡರಂಗ ಮುನ್ನಡೆಸಿತ್ತು ಆದರೆ ಈ ಬಾರಿ ಅದು ಸೋಲನ್ನು ಒಪ್ಪಿಕೊಂಡಿದೆ. ಪರಿಣಾಮ ಭಾರತದಲ್ಲಿ ಮತ್ತೊಂದು ಕಮ್ಯುನಿಸ್ಟ್ ಆಡಳಿತವಿರುವ ರಾಜ್ಯ ಕಮ್ಯುನಿಸ್ಟರ ಕೈ ತಪ್ಪಿದೆ. ಈ ಕುರಿತ ಸಾಕಷ್ಟು ಚರ್ಚೆಗಳು ವಿಶ್ಲೇಷಣೆಗಳು ನಡೆಯುತ್ತಿವೆ.

ಮೇಲ್ನೋಟಕ್ಕೆ ತ್ರಿಪುರಾ ಚುನಾವಣೆಯಲ್ಲಿ ವ್ಯಕ್ತವಾದ ಒಟ್ಟು ಫಲಿತಾಂಶದಲ್ಲಿ ಮತಹಂಚಿಕೆ ಪ್ರಮಾಣ ಗಮನಿಸಿದಾಗ ತ್ರಿಪುರಾದ ಎಡರಂಗ ಕಳೆದ ಬಾರಿಗಿಂತ ಈ ಬಾರಿ ಕೇವಲ ಮೂರು ಪ್ರತಿಶತ ಮತಗಳ ಕೊರತೆ ಅನುಭವಿಸಿದೆ ಎಂಬ ಚರ್ಚೆಗಳು ಪ್ರಭಾವಿಯಾಗಿದ್ದರೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮತಗಳನ್ನು (ಶೇ. 50)ಪಡೆಯಲು ಸಾಧ್ಯವಾಗಿದ್ದು ಹೇಗೆ? ಈ ಬೆಳವಣಿಗೆಗೆ ನಿರಂತರ 25 ವರ್ಷಗಳ ಕಾಲ ತ್ರಿಪುರಾವನ್ನು ಆಳಿದ ಎಡರಂಗದ ಕೊಡುಗೆ ಎಷ್ಟಿದೆ ಎಂಬ ಆತ್ಮವಿಮರ್ಶೆ ಇಂದಿನ ತುರ್ತಾಗಿದೆ.

ಹಾಗೆ ನೋಡಿದರೆ 1978 ಮತ್ತು ಅದಕ್ಕೂ ಹಿಂದಿನ ತ್ರಿಪುರಾದ ಚರಿತ್ರೆ, ಅದರ ಭೌಗೋಳಿಕ ರಚನೆಯ ಮಿತಿಗಳನ್ನೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳ ಅಸಹಕಾರ, ಪ್ರತ್ಯೇಕತಾವಾದಿ ಹೋರಾಟ, ರಾಜಕೀಯ ಕಗ್ಗೊಲೆಗಳು, ರಾಜ ಮನೆತನದ ಹಿಂಸಾತ್ಮಕ ನಡವಳಿಕೆಗಳ ಕಾರಣಕ್ಕೆ ರಕ್ತಸಿಕ್ತ ಚರಿತ್ರೆಯಿಂದ ಕೆಂಪಾಗಿತ್ತು. ಇಂತಹ ನೆಲವನ್ನು ಪ್ರಜಾತಂತ್ರ ಹೋರಾಟ ಮತ್ತು ಶಿಕ್ಷಿತ ತ್ರಿಪುರಾವಾಗಿ ಮಾರ್ಪಡಿಸಿ ಎಡರಂಗ ಪ್ರತಿಪಾದಿಸುವ ಪ್ರಗತಿಯ ಕೆಂಪಾಗಿಸಿದ ಕೀರ್ತಿ ಮಾಣಿಕ್ ಸರ್ಕಾರ್ ನೇತೃತ್ವದ ಸರಕಾರಕ್ಕೆ ಸಲ್ಲುತ್ತದೆ. ಒಂದು ಅರ್ಥದಲ್ಲಿ ಇಂದು ಬಿಜೆಪಿ ಮೈತ್ರಿಕೂಟ ಇಷ್ಟು ದೊಡ್ಡ ಪ್ರಮಾಣದ ವಿಜಯವನ್ನು ದಾಖಲಿಸಲು ತ್ರಿಪುರಾದಲ್ಲಿ ಕಳೆದ ಅರ್ಧ ದಶಕದಲ್ಲಿ ಬೆಳೆದ ಪ್ರಜಾತಂತ್ರ ಚಳವಳಿಯ ಕೊಡುಗೆ ಅಪಾರವಾಗಿದೆ ಎಂಬುದನ್ನು ನಾವು ಗುರುತಿಸಬೇಕಿದೆ. ಆದರ ಜೊತೆ ಜೊತೆಗೆ ಸ್ವತಃ ಈ ಚಳುವಳಿಯನ್ನು ಕಟ್ಟಿದ ಎಡರಂಗಕ್ಕೆ ಅದರ ಲಾಭ ಏಕೆ ಆಗಲಿಲ್ಲ? ಎಂಬ ಮಹತ್ವದ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ.

ನನಗೆ ಅನ್ನಿಸುವಂತೆ ಆ ಮಹತ್ವದ ಪ್ರಶ್ನೆಗಳಿಗೆ ಈ ಕ್ಷಣದಲ್ಲಿ ಎರಡು ಉತ್ತರಗಳನ್ನು ಗುರುತಿಸಬಹುದು... 1. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸೇರಿದಂತೆ ಚುನಾವಣಾ ರಾಜಕೀಯದ/ ತಂತ್ರಗಾರಿಕೆ ಕುರಿತು ಎಡಪಕ್ಷಗಳ ಸಾಂಪ್ರದಾಯಿಕ ದೃಷ್ಟಿಕೋನ.

2. ತ್ರಿಪುರಾ ಚರಿತ್ರೆಯಲ್ಲಿನ ಜನ ಸಂಗ್ರಾಮಗಳ ಯಾವ ಪರಿಚಯವೂ ಇಲ್ಲದ ಹೊಸ ತಲೆಮಾರಿನ ಜನರಿಗೆ ಅದರಲ್ಲೂ ಮುಖ್ಯವಾಗಿ ಯುವಕರಿಗೆ ತ್ರಿಪುರಾದ ಈ ಹೋರಾಟದ ಚರಿತ್ರೆಯ ದಾರಿ ಮತ್ತು ಆ ನೆಲ ಇಂದು ಬಂದು ನಿಂತಿರುವ ಸ್ಥಿತಿಯ ಕುರಿತು ಸಮರ್ಥ ಲೋಕದೃಷ್ಟಿಯನ್ನು ಕಟ್ಟಿಕೊಡುವುವಲ್ಲಿ ಎಡರಂಗ ಸೋತಿರುವುದು.

ಮೊದಲನೇ ಅಂಶವನ್ನು ನಾವು ಚರ್ಚಿಸುವುದಾದರೆ, 21ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಗೆದ್ದ ರಾಜ್ಯಗಳು ಮತ್ತು ಅದು ಅಲ್ಲಿ ರೂಪಿಸಿದ ಚುನಾವಣಾ ತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ತನ್ನ ತತ್ವ ಸಿದ್ಧಾಂತಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸುತ್ತಿಲ್ಲ. ಅವುಗಳ ಗರಿಷ್ಠ ಬಳಕೆ ಏನಿದ್ದರೂ ಚುನಾವಣೆ ಗೆದ್ದ ನಂತರ ರಚನೆಯಾಗುವ ಸರಕಾರಗಳ ನೀತಿ, ನಿರೂಪಣೆಗಳ ರಚನೆ ಮತ್ತು ಅವುಗಳು ಜಾರಿಗೊಳಿಸುವ ಮಟ್ಟದಲ್ಲಿ ಮಾತ್ರ ಎಂಬ ಧೋರಣೆ ಹೊಂದಿರುವುದು ಸ್ಪಷ್ಟವಾಗುತ್ತದೆ.

ಆ ಕಾರಣಕ್ಕೆ ಬಿಜೆಪಿ ಚುನಾವಣೆಗಳಲ್ಲಿ ತನ್ನ ತತ್ವ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಿರುವ ಗುಂಪುಗಳ ನಡುವೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಾದ ಪಿಡಿಪಿ ಜೊತೆ ಒಪ್ಪಂದ, ತ್ರಿಪುರಾದಲ್ಲಿ ಪ್ರತ್ಯೇಕ ತ್ರಿಪುರಾಭೂಮಿಗೆ (TwipalandIPFT) ಬೇಡಿಕೆ ಇಟ್ಟು ಹೋರಾಡುತ್ತಿರುವ  ಸಂಘಟನೆಯ ಜೊತೆ ಒಪ್ಪಂದ ಮತ್ತು ತ್ರಿಪುರಾದಲ್ಲಿ 1971ರ ನಂತರ ವಲಸೆ ಬಂದ ಬಹುಸಂಖ್ಯಾತ ಸಮುದಾಯವಾದ ‘ಬೆಂಗಾಳಿ ಹಿಂದೂ’ ಅಸ್ಮಿತೆಯನ್ನು ಪ್ರಭಾವಿಸಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿ ಗೆಲುವು ಸಾಧಿಸಿದೆ. ಈ ಸಾಲಿಗೆ ಹಿಂದೆ ಗುಜರಾತ್ ಚುನಾವಣೆಯಲ್ಲಿ ಅಲ್ಲಿನ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಸೆಳೆದದ್ದು, ಉತ್ತರ ಪ್ರದೇಶದಲ್ಲಿ ಗುಂಪುನಾಯಕ(Mobleader) ಆದಿತ್ಯನಾಥರನ್ನು ಅಧಿಕಾರದಲ್ಲಿ ಕೂರಿಸಿದ್ದು, ಬಿಹಾರದಲ್ಲಿ ನಿತೀಶ್ ಕುಮಾರ್ ಪಕ್ಷದೊಂದಿಗೆ ಚುನಾವಣೋತ್ತರ ರಾಜಕೀಯ ಹೊಂದಾಣಿಕೆ, ಉತ್ತರ ಪ್ರದೇಶ, ಬಿಹಾರ ಚುನಾವಣೆಯಲ್ಲಿ ಗೋಹತ್ಯಾ ನಿಷೇಧ ಪ್ರಸ್ತಾಪ, ಅರುಣಾಚಲ ಮತ್ತು ಗೋವಾ ಚುನಾವಣೆಯಲ್ಲಿ ಅದಕ್ಕೆ ತದ್ವಿರುದ್ಧ ನಿಲುವನ್ನು ಸಾರ್ವಜನಿಕವಾಗಿ ಪ್ರದಶಿರ್ಸಿದ ಧೋರಣೆ ಎಲ್ಲವನ್ನು ಸೇರಿಸಬಹುದು.

ಈ ಮೇಲಿನ ಎಲ್ಲಾ ಅಂಶಗಳು ಬಿಜೆಪಿ ವಿವಿಧ ರಾಜ್ಯಗಳಲ್ಲಿನ ತನ್ನ ಚುನಾವಣಾ ತಂತ್ರವನ್ನು ತಾನು ಪ್ರತಿಪಾದಿಸುವ ಮುಖ್ಯ ಸಿದ್ಧಾಂತವನ್ನು ಬದಿಗಿಟ್ಟು ಸಂಪೂರ್ಣ ಗೆಲ್ಲುವ ಆಟವಾಗಿ ನೋಡುತ್ತಿದೆ ಮತ್ತು ಅದಕ್ಕೆ ಪೂರಕವಾದ ಯಾವ ಹಂತದ ಹೊಂದಾಣಿಕೆಗೂ ಸಜ್ಜಾಗಿದೆ ಎಂಬ ಅಂಶವನ್ನು ತಿಳಿಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್, ಎಡಪಕ್ಷ ಆದಿಯಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಮತ್ತು ನಂತರದ ಹೊಂದಾಣಿಕೆಗಳಲ್ಲಿ ತತ್ವ ಸಿದ್ಧಾಂತಗಳನ್ನು ಮುಂದುಮಾಡಿ ಚರ್ಚಿಸಿ ಸೋಲನ್ನು ಕಾಣುತ್ತಿರುವ ವಿದ್ಯಮಾನವನ್ನು ನಾವು ಗುರುತಿಸುತ್ತಿದ್ದೇವೆ. 2014ರ ನಂತರ ಬಿಜೆಪಿ ಮುಂದಕ್ಕೆ ತಂದ ಈ ನವಚುನಾವಣಾ ತಂತ್ರಗಾರಿಕಾ ಮಾದರಿ ಮತ್ತು ಅದಕ್ಕಿಂತ ಹಿಂದಿದ್ದ ತತ್ವ ಸಿದ್ಧಾಂತಗಳ ಮಾದರಿಗಳಲ್ಲಿ ಯಾವ ಮಾದರಿ ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂಬ ಅಂಶ ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಅದು ಏನೇ ಇದ್ದರೂ ತ್ರಿಪುರಾದ ಚುನಾವಣೆಯಲ್ಲಿ ಎಡರಂಗದ ಸೋಲಿಗೆ ಚುನಾವಣಾ ತಂತ್ರಗಾರಿಕೆ ಕುರಿತ ಅವರ ಈ ಹಿಂದಿನ ಸಾಂಪ್ರದಾಯಿಕ ಧೋರಣೆ ಪ್ರಮುಖ ಕಾರಣವಾಗಿದೆ ಅನ್ನಿಸುತ್ತಿದೆ.

ಇನ್ನು ತ್ರಿಪುರಾದ ಎಡರಂಗಗಳ ಸೋಲಿಗೆ ನಾನು ಗುರುತಿಸುವ ಮತ್ತೊಂದು ಪ್ರಮುಖ ಕಾರಣ ಅಲ್ಲಿನ ಸರಕಾರ 1978 -1980ರ ದಶಕದಲ್ಲಿ ಜನಿಸಿದ ಮತ್ತು ಈ ಬಾರಿ ತ್ರಿಪುರಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ನವ-ಮತದಾರರ ಜೊತೆ ಒಂದು ಸಮರ್ಥ ಸಾವಯವ ಸಂಬಂಧವನ್ನು ರೂಪಿಸಿಕೊಳ್ಳಲು ಸೋತದ್ದು. ಎಂಬತ್ತರ ದಶಕದ ಈಚಿನ ಪೀಳಿಗೆಗೆ ತ್ರಿಪುರಾದ ಭೌಗೋಳಿಕತೆ, ಅಲ್ಲಿನ ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿ ಮತ್ತು ಹಿಂಸಾತ್ಮಕ ಚಳವಳಿಗಳಂತಹ ಮಿತಿಗಳನ್ನು ಮೀರಿ ಎಡಪಕ್ಷಗಳು ಕಟ್ಟಿದ ತ್ರಿಪುರಾದ ಪ್ರಜಾತಾಂತ್ರಿಕ ಚಳವಳಿಯ ಕನಿಷ್ಠ ತಿಳಿವಳಿಕೆಯನ್ನು ಜೌಪಚಾರಿಕ ಮತ್ತು ಅನೌಪಚಾರಿಕ ಮಾಧ್ಯಮಗಳ ಮೂಲಕ ಕಟ್ಟಿಕೊಡುವುಲ್ಲಿ ತ್ರಿಪುರಾದ ಎಡರಂಗ ಸಂಪೂರ್ಣ ವಿಫಲವಾಗಿದೆ ಅನ್ನಿಸುತ್ತದೆ.

ಈ ಪ್ರಶ್ನೆಯನ್ನು ನನ್ನ ಇತ್ತೀಚಿನ ತ್ರಿಪುರಾ ಭೇಟಿಯಲ್ಲಿ ಅಲ್ಲಿನ ಸಾರ್ವಜನಿಕರು ಮತ್ತು ಯುವಕರೊಂದಿಗಿನ ಏಳು ದಿನಗಳ ಸಂವಾದದ ನಂತರ ಸ್ವತಃ ತ್ರಿಪುರಾದ ಮುಖ್ಯಮಂತ್ರಿಗಳಾದ ಮಾಣಿಕ್ ಸರ್ಕಾರ್ ಅವರಲ್ಲಿ ‘‘ತ್ರಿಪುರಾದ ಯುವಕರು ಈ ಅರ್ಧ ಶತಮಾನದ ತಮ್ಮ ಸರಕಾರ ಮತ್ತು ತಾವು ಕಟ್ಟಿದ ಪ್ರಜಾತಂತ್ರ ಹೋರಾಟದ ಕುರಿತು ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ. ಪರಿಣಾಮ ಹಿಂದಿನ ತಲೆಮಾರಿನ ಹೋರಾಟದ ಕುರಿತು ಹೊಸ ತಲೆಮಾರು ಹೊಂದಬೇಕಾದ ಅಗತ್ಯ ಸಾವಯವ ಅನುಬಂಧ ಕ್ಷೀಣಿಸುತ್ತಿದೆ ಅನ್ನಿಸುತ್ತಿದೆ. ನವ-ಮಾಧ್ಯಮಗಳನ್ನು ಬಳಸಿಕೊಂಡು ಇದನ್ನು ಮೀರುವ ಕ್ರಮಗಳನ್ನು ತಾವು ಏಕೆ ಪರಿಗಣಿಸುತ್ತಿಲ್ಲ’’ ಎಂಬ ಪ್ರಶ್ನೆಯನ್ನು ಕೇಳಿದ್ದೆ.

ಅದಕ್ಕೆ ಮುಖ್ಯಮಂತ್ರಿಗಳು ‘‘ಯಾವುದೇ ಜನಪರ ರಾಜಕೀಯ ಪ್ರಜ್ಞೆ ಎನ್ನುವುದು ಅಲ್ಲಿನ ಜನರ ಅನುಭವ ಮತ್ತು ಅವರು ತಮ್ಮ ಹಕ್ಕುಗಳಿಗಾಗಿ ರೂಪಿಸುವ ಪ್ರಜಾತಾಂತ್ರಿಕ ಹೋರಾಟದ ಮೂಲಕ ರೂಪುಗೊಳ್ಳಬೇಕು. ಆಗ ಅದಕ್ಕೆ ಮೌಲ್ಯವಿರುತ್ತದೆ. ‘ರಾಜಕೀಯ ಪ್ರಜ್ಞೆ’ ಎಂಬುದು ವ್ಯಕ್ತಿಗೆ ಹೊರಗಿನಿಂದ ತುಂಬುವ ಅಂಶವಲ್ಲ. ಬದಲಾಗಿ ಅದು ಅವನ ಬದುಕಿನ ಅಗತ್ಯದ ಭಾಗವಾಗಿ ರೂಪುಗೊಳ್ಳುವ ಸಹಜ ಆಕಾಂಕ್ಷೆಯಾಗಿದೆ. ತ್ರಿಪುರಾದ ಜನ ತಮ್ಮ ರಾಜಕೀಯ ಆಯ್ಕೆಯ ಕುರಿತು ಖಂಡಿತ ಯೋಚಿಸಿ ನಿರ್ಧರಿಸುವಷ್ಟು ಶಕ್ತರಾಗಿದ್ದಾರೆ. ಆದ ಕಾರಣ ನವಮಾಧ್ಯಮ ಬಳಸಿಕೊಂಡು ಅವರ ರಾಜಕೀಯ ಆಯ್ಕೆಯನ್ನು ಉತ್ಪಾದಿಸಲು ನಾವು ಆಸಕ್ತರಿಲ್ಲ. ಹಾಗೆ ಮಾಡಿದರೂ ಅದು ಕ್ಷಣಿಕ’’ ಎಂಬ ಅರ್ಥದಲ್ಲಿ ವಿವರಿಸಿದ್ದರು. ಅಂದು ಜನರ ರಾಜಕೀಯ ಪ್ರಜ್ಞೆಯ ಕುರಿತು ಅವರು ಆಡಿದ ಮಾತುಗಳು ಒಬ್ಬ ತತ್ವಸಿದ್ಧಾಂತ ನಂಬಿದ ನಿಷ್ಠಾವಂತ ಕಮ್ಯುನಿಸ್ಟ್ ನಾಯಕನ ಕುರಿತು ನನ್ನಲ್ಲಿ ಗೌರವ ಮೂಡಿಸಿದ್ದವು ಆದರೆ ತ್ರಿಪುರಾ ಚುನಾವಣೆ ಫಲಿತಾಂಶ ವಿಶ್ಲೇಷಿಸುತ್ತಿರುವ ಇಂದು ಅವರ ಈ ನಿಲುವು ಸಾಂಪ್ರದಾಯಿಕವಾದುದು ಎನ್ನಿಸುತ್ತಿದೆ.

 ಏಕೆಂದರೆ ಜನರು ಆಲೋಚಿಸುವಷ್ಟು ಶಕ್ತರು ಎಂಬ ಮಾಣಿಕ್ ಸರ್ಕಾರ್ ಮಾತುಗಳು ನಿಜ. ಆದರೆ ಅದರ ಜೊತೆ ಜೊತೆಗೆ ಬದಲಾದ ಕಾಲಘಟ್ಟದಲ್ಲಿ ಜನರ ಆಲೋಚನಾ ಧಾಟಿಯನ್ನು ನಿರ್ಧರಿಸುವಲ್ಲಿ, ನಿರ್ದಿಷ್ಟಗೊಳಿಸುವಲ್ಲಿ ಪ್ರಭಾವಿ ಸಮೂಹ ಮಾಧ್ಯಮಗಳ ಪಾತ್ರವನ್ನು ಕಮ್ಯುನಿಸ್ಟ್ಟರು ಅರಿಯಬೇಕಿದೆ ಅನ್ನಿಸುತ್ತಿದೆ. ಇದರ ಅರ್ಥ ಜನರಲ್ಲಿ ನಕಲಿ ‘ರಾಜಕೀಯ ಪ್ರಜ್ಞೆ’ಯನ್ನು ಉತ್ಪಾದಿಸಬೇಕು ಎಂಬುದಲ್ಲ. ಬದಲಾಗಿ ಜನಚಳವಳಿಯನ್ನು ಮೀರಿ ಇಂದು ವ್ಯಾಪಕವಾಗಿ ಬೆಳೆಯುತ್ತಿರುವ ‘ನಕಲಿ ಪ್ರಜ್ಞೆ ಉತ್ಪಾದನಾ’ ಪ್ರಕ್ರಿಯೆಯನ್ನು ಗುರುತಿಸಿ ಅದನ್ನು ಏದುರಿಸುವ ನೈಜ ಪ್ರಭಾವಿ ಪರ್ಯಾಯ ಆಲೋಚನಾ ಕ್ರಮಗಳನ್ನು ರೂಪಿಸಬೇಕಿದೆ ಎಂಬುದು.!

ಸದ್ಯಕ್ಕೆ ಎಡಪಕ್ಷಗಳು ನಂಬಿರುವ ‘‘ಜನರಲ್ಲಿ ವರ್ಗ ಪ್ರಜ್ಞೆಯ ಸಹಜ ಬೆಳವಣಿಗೆ’’ ಎಂಬ ಸಾಂಪ್ರದಾಯಿಕ ಪಠ್ಯಕ್ರಮ ಬಿಟ್ಟು ಹೊಸ ಮಾದರಿಯ ಅನ್ವೇಷಣೆಗಳಿಗೆ ಆಕ್ರಮಣಕಾರಿಯಾಗಿ ತೆರೆದುಕೊಂಡರೆ ಕನಿಷ್ಠ ಮಾಣಿಕ್ ಸರ್ಕಾರ್ ಗುರುತಿಸಿದಂತೆ ‘‘ನವಮಾಧ್ಯಮ ಬಳಸಿಕೊಂಡು ಜನರ ರಾಜಕೀಯ ಆಯ್ಕೆಯನ್ನು ಉತ್ಪಾದಿಸಿದರೂ ಅದು ಕ್ಷಣಿಕ’’ ಎಂಬ ವಾಸ್ತವ ಸಂಗತಿಯನ್ನಾದರೂ ಹೊಸ ತಲೆಮಾರಿಗೆ ದಾಟಿಸಬಹುದಾಗಿದೆ. ಇಲ್ಲವಾದರೆ ಬಂಗಾಳ, ತ್ರಿಪುರಾ ಸಾಲಿಗೆ ಕೇರಳ ಜಾರುತ್ತದೆ. ಇದರ ನಷ್ಟ ಕೇವಲ ಎಡಚಿಂತನೆ ಮತ್ತು ಪಾರ್ಟಿ ಕಮ್ಯುನಿಸ್ಟ್ಟರಿಗೆ ಮಾತ್ರವಲ್ಲ, ಬದಲಾಗಿ ಈ ದೇಶದ ಶೋಷಿತರಿಗೆ ಎಂಬ ವಿಶಾಲ ದೃಷ್ಟಿಕೋನವನ್ನು ತ್ರಿಪುರಾ ಅನುಭವ ನಮಗೆ ಕಲಿಸಬೇಕಿದೆ. ಆಗ ಮಾತ್ರವೇ ದಶಕಗಳ ತ್ರಿಪುರಾ ಕೆಂಪುನೆಲ ನಾಲ್ಕು ವರ್ಷಗಳಲ್ಲಿ ಕೇಸರಿ ಹೇಗೆ ಆಯಿತು ಎಂಬ ಖಚಿತ ಆತ್ಮವಿಮರ್ಶೆ ಸಾಧ್ಯ...

Writer - ಕಿರಣ್ ಎಂ. ಗಾಜನೂರು

contributor

Editor - ಕಿರಣ್ ಎಂ. ಗಾಜನೂರು

contributor

Similar News