ಜ್ವಾಲಾಮುಖಿಯ ಜಾಲದಲ್ಲಿ ಭೂಮಿ....

Update: 2018-03-05 18:33 GMT

ಭೂಮಿ ಲೆಕ್ಕವಿಲ್ಲದಷ್ಟು ಜೀವಿಗಳನ್ನು ಪೊರೆಯುವ ತಾಯಿ ಎಂದು ನಾವು ನಂಬಿದ್ದೇವೆ. ಭೂಮಿಯೆಂದರೆ ಕಾಡು, ಮಳೆ, ನೀರು, ನದಿ, ಸಮುದ್ರ. ಇಂದು ನಿನ್ನೆಯಲ್ಲ, ಕೋಟ್ಯಂತರ ವರ್ಷಗಳಿಂದ ಜೀವಿಗಳಿಗೆ ಆಸರೆಯಾಗಿದೆ. ಇಂತಹ ಭೂಮಿ ತನ್ನ ಗರ್ಭದೊಳಗೆ ಭೀಕರ ಬೆಂಕಿಯನ್ನು ಬಚ್ಚಿಟ್ಟುಕೊಂಡಿದೆ ಎನ್ನುವುದು ಮನುಷ್ಯನಿಗೆ ತಿಳಿದಿದೆಯೇ? ತಿಳಿದರೂ ಅದರ ಬಗ್ಗೆ ಎಷ್ಟರಮಟ್ಟಿಗೆ ಜಾಗೃತನಾಗಿದ್ದಾನೆ? ಭೂಮಿಯ ಮೇಲೆ ಹಕ್ಕು ಸಾಧಿಸುವ ಮನುಷ್ಯನಿಗೆ ಆ ಬೆಂಕಿಯ ಸಣ್ಣ ಕಲ್ಪನೆಯೂ ಇಲ್ಲ. ತನ್ನ ಒಡಲಲ್ಲಿರುವ ಬೆಂಕಿಯನ್ನು ಒಮ್ಮೆ ಹೊರ ತಳ್ಳಿದರೂ ಸಾಕು, ಇಲ್ಲಿ ಯಾವ ಜೀವಿಯೂ ಉಳಿಯಲಾರದು. ಭೂಮಿಯ ಸಹನೆಯಿಂದಲೇ ಜೀವರಾಶಿಗಳು ಬದುಕಿದೆ. ವೆಸೂವಿಯಸ್, ಕ್ರಟೋವ, ಹೆಲೆನ್ಸ್, ಇಯಾಕುಟ್ಲ್, ಕಟ್ಲಾ, ಹೆಕ್ಲಾ, ಪಿನತುಬೋ, ವೌನಲೋಅ ಇವೆಲ್ಲ ವಿಚಿತ್ರ ಹೆಸರಿನಂತೆ ಕೇಳುತ್ತದೆ. ಆದರೆ ನಮ್ಮ ಪಾದದಡಿಯಲ್ಲಿ ಇವುಗಳು ಬುಸುಗುಡುತ್ತಾ ಅಸ್ತಿತ್ವದಲ್ಲಿವೆ. ಭೂಮಿಯಲ್ಲಿ ಅಡಗಿರುವ ನಿಸರ್ಗದ ಟೈ ಬಾಂಬುಗಳಿವು. ಬೆಂಕಿಯ ಕುಲುಮೆಗಳು. ಭೂಮಿಯ ಅಂತರಾಳ ವೀಕ್ಷಿಸಲು ನಿಸರ್ಗವೇ ಕೊರೆದಿರುವ ಕಿಂಡಿಗಳು ಎನ್ನಬಹುದು. ಇವನ್ನೇ ನಾವು ಜ್ವಾಲಾಮುಖಿ ಎಂದು ಕರೆಯುತ್ತಾ ಬಂದಿದ್ದೇವೆ. ಈ ಜ್ವಾಲಾಮುಖಿಯ ಅಗಾಧತೆಯನ್ನು ಪರಿಚಯಿಸುವ ಕೆಲಸವನ್ನು ಟಿ. ಆರ್. ಅನಂತರಾಮು ಅವರು ಬರೆದಿರುವ ‘ಭೂಮಿಯ ಟೈಂ ಬಾಂ್-ಜ್ವಾಲಾಮುಖಿ’ ಕೃತಿ ಮಾಡುತ್ತದೆ.

 ಒಂದೆಡೆ ರುದ್ರರೂಪ, ಮತ್ತೊಂದೆಡೆ ಅಮೂಲ್ಯ ಲೋಹಭಂಡಾರಗಳನ್ನು ಭೂಗರ್ಭದಿಂದ ಎತ್ತಿಕೊಡುವ ಅವುಗಳ ನಿರಂತರ ಕಾಯಕ. ಜ್ವಾಲಾಮುಖಿಗಳು ಮನುಕುಲವನ್ನು ಬಹು ದೀರ್ಘ ಕಾಲ ಕಾಡಿವೆ. ನಾಗರಿಕತೆಯ ಪುಟಗಳನ್ನೇ ಅಳಿಸಿ ಹಾಕಿವೆ. ಕೆಲವು ಒಂದೆರಡು ಬಾರಿ ಕೆಕ್ಕರಿಸಿ ಸ್ತಬ್ಧವಾಗಿವೆ. ಮತ್ತೆ ಕೆಲವು ಆಗಾಗ ಗುಟುರು ಹಾಕುತ್ತವೆ. ಸದ್ದಿಲ್ಲದೆ ಒಳಗೊಳಗೆ ತಯಾರಿ ಮಾಡಿಕೊಂಡು ಒಮ್ಮೆಲೆ ಬಾಂಬಿನಂತೆ ಎರಗುತ್ತವೆ. ಹವಾಯಿ ದ್ವೀಪಗಳಂತೂ ನಿತ್ಯವೂ ಜ್ವಾಲಾಮುಖಿಗಳಿಂದ ದೀಪಾವಳಿ ಆಚರಿಸುತ್ತಿವೆ. ವೆಸೂವಿಯಸ್ ಜ್ವಾಲಾಮುಖಿ ಇಟಲಿಯ ಪಾಂಪೆಮತ್ತು ಹರ್ಕ್ಯುಲೇನಿಯಂ ನಗರಗಳನ್ನು ಜೀವಂತವಾಗಿ ಸಮಾಧಿ ಮಾಡಿ ಇದರ ಮೇಲೆ ಕಲ್ಲು ಬೂದಿಯ ಸ್ತರಗಳನ್ನು ಪೇರಿಸಿ ಸುಮಾರು ಎರಡು ಸಾವಿರ ವರ್ಷಗಳೇ ಸಂದಿವೆ. ಸಾಗರದ ತಳದಲ್ಲೂ ಲಾವಾರಸ ಬುಸುಗುಡುತ್ತಿವೆ ಎಂದರೆ ಮನುಷ್ಯ ಎಂತಹ ಅಪಾಯಗಳ ನಡುವೆ ಬದುಕುತ್ತಿದ್ದಾನೆ ಎನ್ನುವುದನ್ನು ತಿಳಿಸುತ್ತದೆ. ಇಲ್ಲಿ ಜ್ವಾಲಾಮುಖಿಯನ್ನು ವೈಜ್ಞಾನಿಕ ತಿಳಿವಿನ ಹಿನ್ನೆಲೆಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಲಾಗಿದೆ. ಜ್ವಾಲಾಮುಖಿ ಎಂದರೇನು, ಅದರ ಹೊಣೆಗಾರಿಕೆಗಳು ಏನು, ಭೂಮಿಯ ಅಸ್ತಿತ್ವದಲ್ಲಿ ಅದರ ಪಾತ್ರ, ಅದರ ಇತಿಹಾಸ, ಅದು ಆಹುತಿತೆಗೆದುಕೊಂಡ ನಾಗರಿಕತೆಗಳು, ಜ್ವಾಲಾಮುಖಿಯ ವೈವಿಧ್ಯತೆ, ಅದರ ಕುರಿತಂತೆ ನಡೆದ ಸಂಶೋಧನೆ ಹೀಗೆ ಈ ಕೃತಿ ಜ್ವಾಲಾಮುಖಿಯ ಕುರಿತಂತೆ ಹಲವು ಕುತೂಹಲಕರವಾದ ಮಾಹಿತಿಗಳನ್ನು ನೀಡುತ್ತದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ 168 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News