ಕೇಂದ್ರೀಯ ವಿದ್ಯಾಲಯ 11ನೇ ತರಗತಿ ಪ್ರವೇಶಕ್ಕೆ ಶಿಫಾರಸು: ಸಂಸದರ ಕೋಟಾ ರದ್ದು

Update: 2018-03-07 04:21 GMT

ಹೊಸದಿಲ್ಲಿ, ಮಾ.7: ಸಂಸದರು ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರು ದೇಶದ ಕೇಂದ್ರೀಯ ವಿದ್ಯಾಲಯಗಳಲ್ಲಿ 11ನೇ ತರಗತಿ ಪ್ರವೇಶಕ್ಕಾಗಿ ತಮ್ಮ ವಿವೇಚನಾ ಕೋಟಾದಲ್ಲಿ ಇನ್ನು ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡುವಂತಿಲ್ಲ.

ಈ ಸಂಬಂಧ ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 10 ಮತ್ತು 12ನೇ ತರಗತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಈಗಾಗಲೇ ಮೊಟಕುಗೊಳಿಸಲಾಗಿತ್ತು. ಆದರೆ ಒಂದರಿಂದ ಒಂಬತ್ತನೇ ತರಗತಿವರೆಗಿನ ಪ್ರವೇಶಕ್ಕೆ ಸಂಸದರು ವಿದ್ಯಾರ್ಥಿಗಳನ್ನು ಶಿಫಾರಸು ಮಾಡಬಹುದಾಗಿದೆ.

ಈ ಕೇಂದ್ರ ಅನುದಾನಿತ ಶಾಲೆಗಳು ದೇಶಾದ್ಯಂತ ಜಾಲ ಹೊಂದಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಸಂಸದರು ತಮ್ಮ ವಿವೇಚನಾ ಕೋಟದಲ್ಲಿ 10 ವಿದ್ಯಾರ್ಥಿಗಳನ್ನು ಪ್ರತೀ ಶೈಕ್ಷಣಿಕ ವರ್ಷದಲ್ಲಿ ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಶಿಫಾರಸು ಮಾಡಬಹುದಾಗಿದೆ. ಸಂಸದರ ಶಿಫಾರಸಿನ ಅನ್ವಯ ಶಾಲೆಯ ಗರಿಷ್ಠ ಸಂಖ್ಯೆಗಿಂತ ಹೆಚ್ಚು ಮಂದಿಯ ಪ್ರವೇಶಕ್ಕೂ ಅವಕಾಶವಿರುತ್ತದೆ.

ಸಾಮಾನ್ಯ ನೋಂದಣಿಯನ್ನು ಎಪ್ರಿಲ್ ಕೊನೆಯ ಒಳಗೆ ಮತ್ತು ಸಂಸದರ ಶಿಫಾರಸಿನ ಮೇರೆಗೆ ಬರುವ ವಿದ್ಯಾರ್ಥಿಗಳ ನೋಂದಣಿಯನ್ನು ಮೇ 30ರೊಳಗೆ ಮುಕ್ತಾಯಗೊಳಿಸಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಸದರು ಎಪ್ರಿಲ್ 16ರ ಒಳಗಾಗಿ ಹೆಸರುಗಳನ್ನು ಶಿಫಾರಸು ಮಾಡಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News