ಪೆರಿಯಾರ್ ಪ್ರತಿಮೆ ಧ್ವಂಸ ಹಿನ್ನೆಲೆ: ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆತ

Update: 2018-03-07 04:41 GMT

ಕೊಯಮತ್ತೂರು, ಮಾ.7: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಮಂಗಳವಾರ ದ್ರಾವಿಡ ಚಳುವಳಿಯ ಸಂಸ್ಥಾಪಕ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಬುಧವಾರ ಅಪರಿಚಿತ ವ್ಯಕ್ತಿಯೊಬ್ಬ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.

ಈ ಘಟನೆ ನಡೆದ ತಕ್ಷಣ ಬಿಜೆಪಿ ಕಚೇರಿಗೆ ಧಾವಿಸಿರುವ ಪೊಲೀಸರು ತನಿಖೆ ನಡೆಸಲಾರಂಭಿಸಿದ್ದಾರೆ.

ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ ಬೆನ್ನಿಗೇ ಈ ಘಟನೆ ನಡೆದಿದೆ.

ತ್ರಿಪುರಾದಲ್ಲಿ ಕಮ್ಯುನಿಸ್ಟ್ ಐಕಾನ್ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಬಳಿಕ ತಮಿಳುನಾಡಿನ ಬಿಜೆಪಿ ನಾಯಕ ಎಚ್. ರಾಜಾ, ಮುಂದಿನ ಗುರಿ ರಾಜ್ಯದ ಕ್ರಾಂತಿಕಾರಿ ನಾಯಕ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಿಜೆಪಿ ನಾಯಕನ ಬರಹಕ್ಕೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದವು. ಬಿಜೆಪಿ ರಾಜ್ಯ ಘಟಕ ರಾಜಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವ ರಾಜಾ ತಕ್ಷಣವೇ ತನ್ನ ಫೇಸ್‌ಬುಕ್ ಪೋಸ್ಟ್‌ನ್ನು ಅಳಿಸಿಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News