ಸಿಎಂಗೆ ಭದ್ರತೆ ಕಲ್ಪಿಸಲು ಕೋರಿ ಕೇಂದ್ರಕ್ಕೆ ಪತ್ರ: ಕೆ.ಎಸ್.ಈಶ್ವರಪ್ಪ

Update: 2018-03-07 15:12 GMT

ಬಳ್ಳಾರಿ, ಮಾ. 7: ಲೋಕಾಯುಕ್ತ ಕಚೇರಿಯಲ್ಲೇ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಕೊಲೆ ಯತ್ನ ನಡೆದಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ಅವರನ್ನು ಹತ್ಯೆಗೈದರೂ ಆಶ್ಚರ್ಯಪಡಬೇಕಿಲ್ಲ. ಹೀಗಾಗಿ ಸಿಎಂಗೆ ಭದ್ರತೆ ಕಲ್ಪಿಸಲು ಕೋರಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವೆ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ರಕ್ಷಣೆಯೇ ಇಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಮುಖ್ಯಮಂತ್ರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು ರಾಜಕೀಯ ವ್ಯಭಿಚಾರ. ಭ್ರಷ್ಟಾಚಾರವನ್ನು ಅಪ್ಪಿಕೊಂಡಿದ್ದು, ಖೇಣಿ ಸೇರಿಸಿಕೊಂಡದಕ್ಕೆ ಸ್ವತಃ ಕಾಂಗ್ರೆಸ್ಸಿಗರೇ ವಿರೋಧಿಸುತ್ತಿದ್ದಾರೆ. ಆದರೆ, ಖೇಣಿ ಜೈಲಿಗೆ ಹೋಗಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಸಮಾವೇಶ: ಕೂಡಲಸಂಗಮದಲ್ಲಿ ಮಾ.10ಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News