ಮಾಜಿ ಶಾಸಕರ ಕೊರಳಪಟ್ಟಿಗೆ ಕೈ ಹಾಕಿದ ಅಣ್ಣಾಮಲೈ: ಆರೋಪ

Update: 2018-03-07 15:34 GMT

ತರೀಕೆರೆ, ಮಾ7: ತಾಲೂಕಿನ ಲಿಂಗದಹಳ್ಳಿ ಮತ್ತು ಕಸಬಾ ಹೋಬಳಿಯ ವಿವಿಧ ಗ್ರಾಮಗಳ ರೈತರು ಟ್ಯಾಂಕರ್ ಗಳಲ್ಲಿ ನೀರು ಪೂರೈಸಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಮಾಜಿ ಶಾಸಕ ಡಿ.ಎಸ್.ಸುರೇಶ್ ನೇತೃತ್ವದಲ್ಲಿ ಬುಧವಾರ ತರೀಕೆರೆ ಪಟ್ಟಣದ ಗಾಂಧಿ ವೃತ್ತದ ಬಳಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ಧರಣಿ ನಡೆಸಿದ್ದು, ಧರಣಿ ಸಂದರ್ಭ ಎಸ್ಪಿ ಎಣ್ಣಾಮಲೈ ಮಾಜಿ ಶಾಸಕ ಸುರೇಶ್ ಅವರ ಅಂಗಿಯ ಕಾಲರ್ ಗೆ ಕೈ ಹಾಕಿ ಎಳೆದಾಡಿದ್ದಾರೆಂದು ಧರಣಿ ನಿರತರು ಆರೋಪಿಸಿದ್ದಾರೆ.

ಮಂಗಳವಾರ ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿ ರೈತರ ಜಮೀನುಗಳಿಗೆ ನೀರು ಪೂರೈಸುತ್ತಿದ್ದ ಟ್ಯಾಂಕರ್ ನ ಅಡಿಗೆ ಸಿಲುಕಿ ತಾಹಿರ್ ಪಾಶ ಎಂಬ ಶಾಲಾ ಬಾಲಕ ಮೃತಪಟ್ಟಿದ್ದ. ಬಾಲಕ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ಟ್ಯಾಂಕರ್ ಮಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನೀರು ಪೂರೈಕೆ ಟ್ಯಾಂಕರ್ ಗಳು ಪೈಪೋಟಿಗೆ ಬಿದ್ದು ವಾಹನ ಚಲಾಯಿಸುತ್ತಿರುದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿವೆ. ಟ್ಯಾಂಕರ್ ನೀರು ಪೂರೈಕೆ ದಂಧೆಯಾಗಿ ಬೆಳೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರಾನದಿಯಿಂದ ಅಡಿಕೆ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದ ಕೆಲವು ಟ್ಯಾಂಕರ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರೆಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ತರೀಕೆರೆ ತಾಲೂಕಿನ ದೋರನಾಲು, ಗಾಳಿಹಳ್ಳಿ ಮತ್ತಿತರ ಗ್ರಾಮಗಳ ರೈತರು ಟ್ಯಾಂಕರ್ ಗಳಲ್ಲಿ ನೀರು ಪೂರೈಕೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಬುಧವಾರ ಬೆಳಗ್ಗೆ ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಡಿ.ಎಸ್.ಸುರೇಶ್ ನೇತೃತ್ವದಲ್ಲಿ ಧರಣಿಗೆ ಮುಂದಾಗಿದ್ದರು. ಧರಣಿ ಅಂಗವಾಗಿ ದೋರನಾಲು ಗ್ರಾಮದಿಂದ ಕಾಲ್ನಡಿಗೆಯಲ್ಲಿ ತರಿಕೆರೆ ಸಮೀಪದ ಗಾಳಿಹಳ್ಳಿ ಕ್ರಾಸ್‍ಗೆ ಆಗಮಿಸಿದ ರೈತರು, ಸುರೇಶ್ ಬೆಂಬಲಿಗರು ಹಾಗೂ ಕೆಲ ಬಿಜೆಪಿ ಕಾರ್ಯಕರ್ತರು ಟ್ರ್ಯಾಕ್ಟರ್ ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿಕೊಂಡು ಕೆಲ ಹೊತ್ತು ರಸ್ತೆ ತಡೆದು, ಧರಣಿ ನಡೆಸಿದರು. ಈ ವೇಳೆ ಸ್ಥಳೀಯ ಪೊಲೀಸರು ರಸ್ತೆ ತಡೆ ನಿಲ್ಲಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೇಳದ ಧರಣಿ ನಿರತರು ಧರಣಿ ಮುಂದುವರಿಸಿದ್ದರೆಂದು ತಿಳಿದು ಬಂದಿದೆ.

ಈ ವೇಳೆ ರಸ್ತೆ ತಡೆ ನಡೆಯುತ್ತಿದ್ದ ಸ್ಥಳಕ್ಕೆ ಎಸ್ಪಿ ಎಣ್ಣಾಮಲೈ ಭೇಟಿ ನೀಡಿ, ಧರಣಿ ಕೈಬಿಡುವಂತೆ ಮಾಜಿ ಶಾಸಕ ಸುರೇಶ್ ಸೇರಿದಂತೆ ಧರಣಿ ನಿರತರನ್ನು ಕೇಳಿಕೊಂಡಾಗಲೂ ರಸ್ತೆ ತಡೆ ಮುಂದುವರಿಸಿದ್ದರು. ಧರಣಿಯಿಂದಾಗಿ ಗಂಟೆಗೂ ಹೆಚ್ಚುಕಾಲ ನೂರಾರು ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಅಲ್ಲದೇ ಬಸ್‍ಗಳಲ್ಲಿ ಪರೀಕ್ಷೆಗೆ ತೆರಳುತ್ತಿದ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿದ್ದರು. ಇದನ್ನು ಗಮನಿಸಿದ ಎಸ್ಪಿ ಪೊಲೀಸರಲ್ಲಿ ಧರಣಿ ನಿರತರನ್ನು ರಸ್ತೆಯಿಂದ ತೆರವು ಮಾಡಲು ಆದೇಶಿಸಿದರು. ಮಾಜಿ ಶಾಸಕ ಸುರೇಶ್ ಸೇರಿದಂತೆ ಧರಣಿ ನಿರತರನ್ನು ರಸ್ತೆ ಬದಿಗೆ ಸರಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಧರಣಿ ನಿರತರು ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ಎಸ್ಪಿ ಅಣ್ಣಾಮಲೈ ಮಾಜಿ ಶಾಸಕ ಸುರೇಶ್ ಅವರ ಅಂಗಿಯ ಕಾಲರ್ ಹಿಡಿದು ಎಳೆದಾಡಿದ್ದಾರೆ. ಧರಣಿ ನಿರತ ರೈತರನ್ನೂ ನಿಂದಿಸಿದ್ದಾರೆ' ಎಂದು  ಆರೋಪಿಸಿ ಅಣ್ಣಾಮಲೈ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬರಗಾಲದಿಂದಾಗಿ ನೊಂದಿರುವ ರೈತರ ಬಗ್ಗೆ ಕೇವಲವಾಗಿ ಮಾತನಾಡಿರುವ ಎಸ್ಪಿ ಅಣ್ಣಾಮಲೈ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಬಂದ್‍ಗೆ ಕರೆ ನೀಡಲಾಗುವುದು ಎಂದು ಧರಣಿ ನಿರತರು ಈ ವೇಳೆ ಎಚ್ಚರಿಕೆ ನೀಡಿದರು. ಬಳಿಕ ಡಿವೈಎಸ್‍ಪಿ ತಿರುಮಲೇಶ್, ಪೊಲೀಸ್ ನಿರೀಕ್ಷಕ ಜಯಂತ್‍ಗೌಳಿ ಹಾಗೂ ಇತರ ಅಧಿಕಾರಿಗ ಧರಣಿ ನಿರತರ ಮನವೊಲಿಸಿ ಸಂಚಾರ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ದೋರನಾಳು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ, ಮುಖಂಡರಾದ ಟಿ.ಜಿ.ಮಂಜುನಾಥ್, ಅಜಯ್, ಯಶೋಧರ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

ಘಟನೆ ಸಂಬಂಧ ವಾಸ್ತವಾಂಶ ತಿಳಿಯಲು ವಾರ್ತಾಭಾರತಿ, ತರಿಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಘಟನೆ ಬಗ್ಗೆ ಹೆಚ್ಚು ಮಾತನಾಡದ ಅವರು, ಎಸ್ಪಿ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು ಹೌದು ಎಂದಷ್ಟೇ ಹೇಳಿದರು.

ಕೊರಳಿಪಟ್ಟಿ ಹಿಡಿದು ಎಳೆದಾಡಿಲ್ಲ: ಎಸ್ಪಿ

ಟ್ರ್ಯಾಕ್ಟರ್ ಗಳನ್ನು ರಸ್ತೆ ಮೇಲೆ ನಿಲ್ಲಿಸಿಕೊಂಡು ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ರಸ್ತೆ ತಡೆಯಿಂದಾಗಿ ಬಸ್‍ಗಳಲ್ಲಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಮಯ ಮೀರಿತ್ತು. ಪೊಲೀಸರು ಧರಣಿ ನಿರತರ ಮನವೊಲಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ರಸ್ತೆ ತಡೆ ನಿಲ್ಲಿಸಲಿಲ್ಲ. ನಾನು ಸ್ಥಳಕ್ಕೆ ಹೋದಾಗಲೂ ಪೊಲೀಸರ ಮನವಿಗೆ ಅವರು ಸ್ಪಂದಿಸಲಿಲ್ಲ. ಹಾಗಾಗಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದ ಹಿನ್ನೆಲೆಯಲ್ಲಿಯಲ್ಲಿ ಅಲ್ಲಿದ್ದವರನ್ನು ರಸ್ತೆ ಬದಿಗೆ ತಳ್ಳಿದ್ದೇನೆ. ಸುರೇಶ್ ಅವರನ್ನೂ ತಳ್ಳಿದ್ದೇನೆಯೇ ಹೊರತು ಉದ್ದೇಶಪೂರ್ವಕವಾಗಿ ಕೊರಳಪಟ್ಟಿಗೆ ಕೈ ಹಾಕಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹೋಗಲು ಅನುವು ಮಾಡಿಕೊಡಲು ಈ ಕ್ರಮ ಅನಿವಾರ್ಯವಾಗಿತ್ತು. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಕರ್ತವ್ಯದ ವೇಳೆ ಕೈ ಎಲ್ಲಿಗೆ ಹೋಯಿತೆಂಬುದನ್ನು ನಾನು ಗಮನಿಸಿಲ್ಲ' ಎಂದು ಎಸ್ಪಿ ಅಣ್ಣಾಮಲೈ ಅವರನ್ನು ದೂರವಾಣಿ ಮೂಲಕ 'ವಾರ್ತಾಭಾರತಿ' ಸಂಪರ್ಕಿಸಿದಾಗ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News