ಲೋಕಾಯುಕ್ತರಿಗೆ ಚಾಕುವಿನಿಂದ ಹಲ್ಲೆ: ಪೊಲೀಸರಿಂದ ಆರೋಪಿಯ ಮನೆ ಶೋಧ

Update: 2018-03-07 15:35 GMT

ತುಮಕೂರು.ಮಾ.07: ಲೋಕಾಯುಕ್ತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದ ವ್ಯಕ್ತಿಯೊಬ್ಬ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿರುವ ಆರೋಪಿ ತುಮಕೂರು ನಗರದ ಎಸ್.ಎಸ್.ಪುರಂ ನಲ್ಲಿ ವಾಸವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂದು ಮನೆಯನ್ನು ಶೋಧಿಸಿದ್ದಾರೆ.

ಕೊಲೆಯತ್ನದ ಆರೋಪಿ ತೇಜ್‍ರಾಜ್ ಶರ್ಮ ಈ ಕೃತ್ಯ ಎಸಗಿದ್ದು, ಮೂಲತಃ ರಾಜಸ್ಥಾನದವನಾದ ಈತ ತಿಪಟೂರಿನಲ್ಲಿ ಪೀಠೋಪಕರಣ ಅಂಗಡಿಯೊಂದನ್ನು ಇಟ್ಟುಕೊಂಡು ಸರಕಾರದ ವಿವಿಧ ಇಲಾಖೆಗಳಿಗೆ ಪೀಠೋಪಕರಣ ಸರಬರಾಜು ಮಾಡಿದ್ದು, ಸರಿಯಾಗಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ವಾಸಂತಿ ಉಪ್ಪಾರ್ ಸೇರಿದಂತೆ 18 ಜನ ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ದೂರು ಸಲ್ಲಿಸಿದ್ದು, ವಿಚಾರಣೆಗೆ ಆಗಾಗ್ಗೆ ಹಾಜರಾಗುತ್ತಿದ್ದು, ಬುಧವಾರ ಸಹ ವಿಚಾರಣೆಗೆ ಹಾಜರಾಗಿದ್ದ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳ ಮೇಲಿದ್ದ ಆರೋಪವನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಅರಿತ ಈತ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತಿಪಟೂರಿನಲ್ಲಿ ಪೀಠೋಪಕರಣ ಅಂಗಡಿಯಿದ್ದರೂ ತುಮಕೂರಿನಲ್ಲಿ ವಾಸವಾಗಿದ್ದು, ಆಗಾಗ ಮನೆ ಬದಲಾವಣೆ ಮಾಡುತ್ತಿದ್ದ. ಪ್ರಸ್ತುತ ತುಮಕೂರು ನಗರದ 16ನೇ ವಾರ್ಡಿಗೆ ಸೇರಿದ ಬಿದುರುಮಳೆ ತೋಟದ ಮನೆಯೊಂದರಲ್ಲಿ ವಾಸವಾಗಿದ್ದು, ಸದರಿ ಮನೆಗೆ ಭೇಟಿ ಮಾಡಿದ್ದ ಎಸ್.ಪಿ. ಡಾ.ದಿವ್ಯಾ ಗೋಪಿನಾಥ್ ಅವರು, ಆತ ವಾಸವಾಗಿದ್ದ ರೂಮನ್ನು ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News