ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಹೊಣೆಗಾರಿಕೆ ಪೋಷಕರು,ಶಿಕ್ಷಕರ ಮೇಲಿದೆ: ವಜೂಭಾಯಿ ವಾಲಾ

Update: 2018-03-07 18:42 GMT

ತುಮಕೂರು,ಮಾ.07: ಮಕ್ಕಳನ್ನು ಸಂಸ್ಕಾರಯುತರನ್ನಾಗಿ ರೂಪಿಸಬೇಕಾದ ಮಹತ್ವದ ಹೊಣೆಗಾರಿಕೆ ಪೋಷಕರ ಮೇಲಿದ್ದು, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿಸುವಂತೆ ರಾಜ್ಯಪಾಲ ವಜೂಭಾಯಿ ರೂಢಭಾಯಿ ವಾಲಾ ಕರೆ ನೀಡಿದ್ದಾರೆ.

ತುಮಕೂರು ತಾಲೂಕು ಮಸ್ಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡ ಮತ್ತು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಮಾಜದಲ್ಲಿ ಇಂದು ಸಾಕಷ್ಟು ಹಣವಂತರಿದ್ದಾರೆ. ಆದರೆ ಗುಣವಂತರ ಸಂಖ್ಯೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸೇವಾ ಮನೋಭಾವ, ನಗರ ಪ್ರದೇಶದವರಲ್ಲಿ ಕಾಣಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಕ್ಕಿಂತ ದೊಡ್ಡದಾದ ಸರಕಾರಿ ಶಾಲೆಯನ್ನು ನಿರ್ಮಿಸಿರುವ ಗ್ರಾಮಸ್ಥರ ಸಹಕಾರವನ್ನು ಶ್ಲಾಘಿಸಬೇಕು ಎಂದರು.

ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಸರಳವಾಗಿ ಜೀವಿಸಿ ತಮ್ಮ ಅತ್ಯುತ್ತಮ ಆಲೋಚನೆಗಳಿಂದ ಪ್ರಸಿದ್ಧರಾದರು. ಸರಳವಾಗಿ ಜೀವಿಸುವುದನ್ನು ನಾವೆಲ್ಲರೂ ರೂಢಿಸಿಕೊಳ್ಳ ಬೇಕಿದೆ. ಇಂದು ಪೋಷಕರು ಹಣ ಸಂಪಾದನೆಗೆ ಮಹತ್ವ ನೀಡುವುದಕ್ಕಿಂತ, ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಶ್ರಮಿಸಬೇಕಿದೆ. ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ. ಮಹಿಳೆಯರಿಗೆ ಅವಕಾಶ ನೀಡಿದರೆ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.

ತಾಯಂದಿರು ಮಕ್ಕಳನ್ನು ಛತ್ರಪತಿ ಶಿವಾಜಿ, ಮಹಾರಾಣಾಪ್ರತಾಪ್ ಅವರಂತೆ ಮೌಲ್ಯಗಳನ್ನು ತುಂಬಿ ಬೆಳೆಸಬೇಕು, ಮಕ್ಕಳಲ್ಲಿ ನೈತಿಕತೆ, ಮಾನವೀಯತೆಯನ್ನು ಒಳಗೊಂಡಂತೆ ಬೆಳೆಸುವ ಮೂಲಕ ದೇಶದ ಆಸ್ತಿಯಾಗಿಸಬೇಕಿದೆ. ಮಾನವೀಯತೆ ಮರೆಯದೇ ಭಾರತದ ಏಕತೆಗಾಗಿ ಈ ಗ್ರಾಮದಂತೆ ಭಾರತೀಯರು ಒಂದಾಗಬೇಕು. ಸ್ತ್ರೀಸಬಲೀಕರಣ, ಯುವ ಸಬಲೀಕರಣ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸಬೇಕಿದೆ. ಪ್ರಪಂಚದಲ್ಲಿ ಭಾರತೀಯರಿಗೆ ಒಳ್ಳೆಯ ಹೆಸರಿದೆ. ಪ್ರತಿಭಾವಂತರಿಗೆ ಅವಕಾಶ ನೀಡಬೇಕಾದ ಹೊಣೆಗಾರಿಕೆ ಸರಕಾರಗಳ ಮೇಲಿದೆ. ಧೂಮಪಾನ, ಮದ್ಯಪಾನದ ವ್ಯಸನ ಹಾಗೂ ಫ್ಯಾಷನ್‍ಗಳನ್ನು ಬಿಟ್ಟು ಸಂಸ್ಕಾರವಂತರಾಗುವಂತೆ ಪೋಷಕರಿಗೆ ತಿಳಿ ಹೇಳಿದರು.

ದೇಶದ ಅಭಿವೃದ್ಧಿಗಾಗಿ ಸ್ವಚ್ಛಭಾರತ್ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಬೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ದೇಶದಲ್ಲಿನ ಬಡತನ, ಅಜ್ಞಾನವನ್ನು ದೂರ ಮಾಡುವ ನಿಟ್ಟಿನಲ್ಲಿ ಮಹತ್ವವಾಗಿದೆ. ಎಲ್ಲರು ವಿಚಾರವಂತರೇ ಆದರೆ ಅದನ್ನು ಅನುಷ್ಠಾನಗೊಳಿ ಸುವುದರ ಮೂಲಕ ಫಲ ದೊರೆಯುತ್ತದೆ ಎನ್ನುವುದಕ್ಕೆ ಈ ಗ್ರಾಮಸ್ಥರ ಇಚ್ಛಾಶಕ್ತಿ ಉದಾಹರಣೆ ಎಂದು ರಾಜ್ಯಪಾಲ ವಾಜುಬಾಯಿ ವಾಲಾ ತಿಳಿಸಿದರು.

ಗ್ರಾಮಾಂತರ ಶಾಸಕರಾದ ಬಿ.ಸುರೇಶ್‍ಗೌಡ ಮಾತನಾಡಿ, ಸರಕಾರದ ಅನುದಾನ ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 3 ಕೋಟಿ ವೆಚ್ಚದಲ್ಲಿ ಮಸ್ಕಲ್ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಎಲ್‍ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ಒಂದೇ ಕಡೆ ದೊರೆಯುವಂತಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಇದುವರೆಗೆ 10 ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನು 3-4 ಶಾಲೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮಕ್ಕಳಲ್ಲಿ ಸಂಸ್ಕಾರವನ್ನು ತುಂಬುವ ಮೂಲಕ ಉತ್ತಮ ಪ್ರಜೆಗಳಾಗುವಂತೆ ಮಕ್ಕಳಿಗೆ ತಿಳಿಸಿದರು.

ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಜಿ.ಪಂ.ಸಿಇಒ ಅನೀಸ್ ಕಣ್ಮಣಿ ಜಾಯ್, ಎಸ್.ಪಿ.ದಿವ್ಯಾಗೋಪಿನಾಥ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಜೀನೇಯ, ತಾಪಂ ಇಒ ನಾಗಣ್ಣ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News