ಮೋದಿಗೆ ಸ್ಫೂರ್ತಿ ನೀಡಿದ್ದ ಮಹಿಳೆ ಯಾರು ಗೊತ್ತೇ ?

Update: 2018-03-08 06:37 GMT

ಹೊಸದಿಲ್ಲಿ, ಮಾ.8: ತಮಗೆ ಸ್ಫೂರ್ತಿ ನೀಡಿದ್ದ 106 ವರ್ಷದ ವಯೋವೃದ್ಧೆಯೊಬ್ಬರ ಬಗ್ಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರಲ್ಲದೆ ‘‘ನಿಮಗೆ ಸ್ಫೂರ್ತಿ ನೀಡಿದ ಮಹಿಳೆಯರ ಬಗ್ಗೆಯೂ ಬರೆಯಿರಿ’’ ಎಂದು ಜನರನ್ನು ಕೇಳಿಕೊಂಡಿದ್ದಾರೆ.

ಪ್ರಧಾನಿಗೆ ಸ್ಫೂರ್ತಿ ನೀಡಿದ ಮಹಿಳೆ ಕುನ್ವರ್ ಬಾಯಿ. ಈಕೆ ಛತ್ತೀಸಗಢದ ನಿವಾಸಿಯಾಗಿದ್ದು, ತನ್ನ ಏಕೈಕ ಜೀವನಾಧಾರವಾಗಿದ್ದ ತನ್ನ ಆಡುಗಳನ್ನು ಮಾರಿ ತನ್ನ ಗ್ರಾಮಕ್ಕೊಂದು ಶೌಚಾಲಯ ನಿರ್ಮಿಸಿದವಳಾಗಿದ್ದಾಳೆ.

ಈಕೆ ನಿರ್ಮಿಸಿದ ಶೌಚಾಲಯ ಆಕೆಯ ಗ್ರಾಮದ ಪ್ರಪ್ರಥಮ ಶೌಚಾಲಯವಾಗಿದ್ದು, ಅದನ್ನು 15 ದಿನಗಳ ಅವಧಿಯಲ್ಲಿ ರೂ.22,000 ವ್ಯಯಿಸಿ ನಿರ್ಮಿಸಲಾಗಿತ್ತು.

‘‘ಸ್ವಚ್ಛ ಭಾರತಕ್ಕಾಗಿ ಆಕೆಯ ಕೊಡುಗೆಯನ್ನು ಮರೆಯಲಾಗದು. ಆಕೆಯ ಈ ಉತ್ತಮ ಕೈಂಕರ್ಯದಿಂದ ನಾನು ಪ್ರಭಾವಿತನಾಗಿದ್ದೇನೆ’’ ಎಂದು ಪ್ರಧಾನಿ ಬರೆದಿದ್ದಾರೆ. ‘‘ನನ್ನ ಛತ್ತೀಸಗಢ ಭೇಟಿಯ ವೇಳೆ ಆಕೆಯನ್ನು ಕಂಡು ಮಾತನಾಡುವ ಅವಕಾಶ ದೊರಕಿದ್ದಲ್ಲದೆ, ಆಕೆಯ ಆಶೀರ್ವಾದ ಪಡೆದಿರುವುದೂ ನನಗೆ ಅತೀವ ಸಂತಸ ನೀಡಿತ್ತು’’ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

‘‘ಕುನ್ವರ್ ಭಾಯಿ ಈ ವರ್ಷ ನಿಧನ ಹೊಂದಿದ್ದರೂ ಆಕೆ ಬಾಪು ಅವರ ಸ್ವಚ್ಛ ಭಾರತ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ದುಡಿಯುವ ಎಲ್ಲರ ಮನಸ್ಸು ಹಾಗೂ ಹೃದಯಗಳಲ್ಲಿ ನೆಲೆಸಿರುತ್ತಾರೆ’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News