ವೈದಿಕ ಯುಗದ ಹಿನ್ನೋಟ....

Update: 2018-03-08 18:35 GMT

 ‘‘ವೈದಿಕ ಯುಗ’ ಕೃತಿ ಭಾರತದ ಜನ ಇತಿಹಾಸ ಸರಣಿಯ ಮೂರನೇ ಸಂಪುಟವಾಗಿದೆ. ಇರ್ಫಾನ್ ಹಬೀಬ್ ಮತ್ತು ವಿಜಯಕುಮಾರ್ ಠಾಕೂರ್ ಜಂಟಿಯಾಗಿ ಈ ಕೃತಿಯನ್ನು ರೂಪಿಸಿದ್ದಾರೆ. ಡಾ. ಸಿ. ಚಂದ್ರಪ್ಪ ಮತ್ತು ಬಿ. ಪ್ರದೀಪ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ’ ಎಂಬ ಪ್ರಕಟನೆಗಳ ಸರಣಿಯಲ್ಲಿ ರಚನೆಗೊಂಡ ಸಂಪುಟಗಳು ಭಾರತದ ಚರಿತ್ರೆಯನ್ನು ಸಮಾಜಮುಖಿಯಾಗಿ ಗುರುತಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿವೆ. ತಮ್ಮ ಜೀವಮಾನವನ್ನೇ ಚರಿತ್ರೆಯ ಅಧ್ಯಯನಕ್ಕೆ ಮೀಸಲಿಟ್ಟ ಪ್ರೊ. ಇರ್ಫಾನ್ ಹಬೀಬ್ ಅವರು ಈ ಸರಣಿಯಲ್ಲಿ ದೇಶದ ಚರಿತ್ರೆಯ ರಚನೆಯನ್ನು ಕೋಮುವಾದದ ತಳಹದಿಯಿಂದ ಮುಕ್ತಗೊಳಿಸಿ ಆದಷ್ಟು ವಸ್ತುನಿಷ್ಠವಾಗಿ ರಚಿಸಲು ಯತ್ನಿಸಿದ್ದಾರೆ. ಈ ಸರಣಿಯ ‘ವೈದಿಕ ಯುಗ’ ಎಂಬ ಶೀರ್ಷಿಕೆಯ ಈ ಸಂಪುಟ ಪ್ರಾಚೀನ ಭಾರತದ ಸಂಕ್ರಮಣ ಕಾಲವೆಂದು ಗುರುತಿಸಲ್ಪಡುವ ವೌರ್ಯರ ಪೂರ್ವದ ಗತಕಾಲದ ಚರಿತ್ರೆಯಾಗಿದೆ. ಕ್ರಿ. ಪೂ. 1500ರಿಂದ 700ರ ಅವಧಿಯಲ್ಲಿ ರೂಪಿತಗೊಂಡ ಸಮಾಜದ ವರ್ಗೀಕರಣ, ಆರ್ಥಿಕ ಬದಲಾವಣೆಗಳು, ಧರ್ಮ ಹಾಗೂ ತತ್ವಶಾಸ್ತ್ರಗಳ ಉಗಮ, ಸಮುದಾಯಗಳ ಒಡನಾಟ ಮತ್ತು ಆ ಕಾಲದ ಜೀವನ ಕ್ರಮಗಳನ್ನು ಸ್ಪಷ್ಟ ಹಾಗೂ ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಲು ಇಲ್ಲಿ ಯತ್ನಿಸಲಾಗಿದೆ.
ಆ ಕಾಲದಲ್ಲಿ ಸಮಾಜ ಪರಿವರ್ತನೆಯ ಜೊತೆಗೆ ಭೌಗೋಳಿಕತೆಯಲ್ಲಿಯೂ ಬದಲಾವಣೆಗಳು ಕಂಡು ಬಂದಿವೆ ಎಂಬ ಐತಿಹಾಸಿಕ ಸತ್ಯವನ್ನು ವಿವಿಧ ಅವಶೇಷಗಳನ್ನು ಆಧರಿಸಿ ವಿವರಿಸಲು ಈ ಸಂಪುಟದಲ್ಲಿ ಪ್ರಯತ್ನಿಸಿರುವುದು ಮತ್ತೊಂದು ವೈಶಿಷ್ಟ. ಕೇವಲ ಮೂರು ಅಧ್ಯಾಯಗಳಿರುವ ಈ ಸಂಪುಟದಲ್ಲಿ ಹಲವಾರು ವೈಚಾರಿಕ ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಆಧರಿಸಿ ಆ ಸಂಕ್ರಮಣ ಕಾಲದ ಚರಿತ್ರೆಯನ್ನು ಲೇಖಕರು ನೀಡಿದ್ದಾರೆ. ಪ್ರತೀ ಅಧ್ಯಾಯದ ಬಳಿಕ ಪ್ರತ್ಯೇಕವಾಗಿ ಚರ್ಚೆಗಳ ರೂಪದಲ್ಲಿ ಟಿಪ್ಪಣಿಗಳನ್ನು ನೀಡಿರುವುದು ಚರಿತ್ರೆ ರಚನೆಯ ವಿಧಾನಕ್ಕೆ ನೂತನ ಶೈಲಿಯನ್ನು ಲೇಖಕರು ಪರಿಚಯಿಸಿದ್ದಾರೆ.
ಚಿಂತನ ಪುಸ್ತಕ ಈ ಕೃತಿಯನ್ನು ಹೊರತಂದಿದೆ. 128 ಪುಟಗಳ ಈ ಕೃತಿಯ ಮುಖಬೆಲೆ 100 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News