ದೇಶದ ಮೊದಲ ಸೌರ ಪ್ರದೇಶ ಯಾವುದು ಗೊತ್ತೇ ?

Update: 2018-03-09 04:53 GMT

ಸೂರತ್, ಮಾ. 9: ಡಿಯು ಕೇಂದ್ರಾಡಳಿತ ಪ್ರದೇಶ ದೇಶದ ಮೊಟ್ಟಮೊದಲ ಸೌರವಿದ್ಯುತ್ ಸಮೃದ್ಧ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೀಕರಿಸಬಹುದಾದ ವಿದ್ಯುತ್ ಮೂಲವನ್ನು ಜನ ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಈ ಕೇಂದ್ರಾಡಳಿತ ಪ್ರದೇಶ ನಿದರ್ಶನವಾಗಿದೆ.

ಈ ಅಮೋಘ ಸಾಧನೆ ಆಗಿರುವುದು ಕೇವಲ ಮೂರು ವರ್ಷಗಳಲ್ಲಿ. ಕೇವಲ 42 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿಯ ಕೊರತೆ ಇದ್ದರೂ, 50 ಎಕರೆ ಪ್ರದೇಶದಲ್ಲಿ ಸೌರವಿದ್ಯುತ್ ಘಟಕಗಳನ್ನು ನಿರ್ಮಿಸಲಾಗಿದೆ.

ಪ್ರತಿದಿನ 13 ಮೆಗಾವ್ಯಾಟ್ ಸೌರವಿದ್ಯುತ್ತನ್ನು ಈ ಕೇಂದ್ರಾಡಳಿತ ಪ್ರದೇಶ ಉತ್ಪಾದಿಸುತ್ತದೆ. 3 ಮೆಗಾವ್ಯಾಟನ್ನು ಮನೆಗಳ ಮೇಲ್ಚಾವಣಿಯಲ್ಲಿ ಅಳವಡಿಸಿದ ವಿದ್ಯುತ್ ಉತ್ಪಾದನಾ ವ್ಯವಸ್ಥೆಯಿಂದ ತಯಾರಿಸಿದರೆ, 10 ಮೆಗಾವ್ಯಾಟ್ ವಿದ್ಯುತ್ತನ್ನು ಸೌರ ವಿದ್ಯುತ್ ಘಟಕಗಳು ಉತ್ಪಾದಿಸುತ್ತಿವೆ.

ಮೂರು ವರ್ಷ ಹಿಂದೆ ಡಿಯು ಗುಜರಾತ್ ಸರ್ಕಾರದ ಗ್ರಿಡ್‌ನಿಂದ ಸರಬರಾಜಾಗುವ ವಿದ್ಯುತ್ ಬಳಸುತ್ತಿತ್ತು. ಇದು ಸರಬರಾಜು ವೇಳೆ ದೊಡ್ಡ ಪ್ರಮಾಣದ ವಿದ್ಯುತ್ ನಷ್ಟಕ್ಕೆ ಕಾರಣವಾಗಿತ್ತು. ಇದೀಗ ಸರಬರಾಜು ನಷ್ಟ ಗಣನೀಯವಾಗಿ ಕಡಿಮೆಯಾಗಿದೆ. ಇಲ್ಲಿನ 56 ಸಾವಿರ ಜನಸಂಖ್ಯೆ ನೀರು ಮತ್ತು ವಿದ್ಯುತ್‌ಗಾಗಿ ಗುಜರಾತ್ ಸರ್ಕಾರವನ್ನು ಅವಲಂಬಿಸಬೇಕಿತ್ತು. ಇದನ್ನು ತಪ್ಪಿಸಲು ಸೌರವಿದ್ಯುತ್ ಮೊರೆ ಹೋಗಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇಲ್ಲಿನ ವಿದ್ಯುತ್ ಬೇಡಿಕೆ ಗರಿಷ್ಠ ಏಳು ಮೆಗಾವ್ಯಾಟ್. ಇಲ್ಲಿ ಈಗ 10.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜತೆಗೆ ವಿದ್ಯುತ್ ಬಿಲ್ ಕೂಡಾ ಶೇಕಡ 12ರಷ್ಟು ಕಡಿತವಾಗಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News